ಫೆಬ್ರವರಿ 18 ರಂದು ಸಿ.ರವಿ ಕವಲೊಡೆದ ಕಣ್ಮಣಿ ಪುಸ್ತಕ ಬಿಡುಗಡೆ

ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ರವಿ ಅವರ ಕವಲೊಡೆದ ಕಣ್ಮಣಿ ಪುಸ್ತಕ ಫೆಬ್ರವರಿ 18 ಬುಧವಾರ ಸಂಜೆ 5 ಗಂಟೆಗೆ ಮೇಲಿನಕುರುವಳ್ಳಿಯ ಕಲ್ಲುಕುಟಿಕರ ಸಹಕಾರ ಸಂಘದ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ. ಕೃಷಿಕನಾಗಿ, ಉದ್ಯಮಿಯಾಗಿ ಗ್ರಾಮದಲ್ಲಿ ಚಿರಪರಿಚಿತರಾಗಿದ್ದ ಅವರು ಕವಲೊಡೆದ ಕಣ್ಮಣಿ ಪುಸ್ತಕದ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದ್ದಾರೆ.

ಓದಿದ್ದು ಎಂಟನೇ ತರಗತಿ, ಆದರೆ ಕಥೆ, ಕವನ ಎಂದರೆ ಯಾವಾಗಲೂ ಪ್ರೀತಿ ಇತ್ತು. ನಾನು ಸಾಹಿತ್ಯವನ್ನು ಖುಷಿಯಿಂದ ಓದುತ್ತಿದ್ದೆ. ಪುಸ್ತಕ ಬರೆಯಬೇಕು ಎಂಬ ಹಂಬಲ ಇರಲಿಲ್ಲ. ಒಂದಿಷ್ಟು ಕವನಗಳನ್ನ ಬರೆದು ನೆಂಪೆ ದೇವರಾಜ್ ಅವರಿಗೆ ಕಳಿಸಿದಾಗ ಪ್ರೋತ್ಸಾಹ ನೀಡಿ ಬರೆಯಲು ಉತ್ತೇಜನ ನೀಡಿದರು ಅದೇ ಪ್ರೇರಣೆಯಿಂದಕವಲೊಡೆದ ಕಣ್ಮಣಿಪುಸ್ತಕ ರಚಿಸಿದ್ದೇನೆ ಎಂದು ಲೇಖಕ ಸಿ.ರವಿ ಹೇಳುತ್ತಾರೆ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಬೆರಗು ಪ್ರಕಾಶನದ ರಮೇಶ್ ಕತ್ತಿ ಭಾಗವಹಿಸಲಿದ್ದಾರೆ. ಪುಸ್ತಕದ ಕುರಿತು ನಿವೃತ್ತ ಪ್ರಾಂಶುಪಾಲ ಗಣಪತಿ ಉತ್ತುಂಗ ಮಾತನಾಡಲಿದ್ದಾರೆ. ಸಮಾಜ ಸೇವಕ ಕಣ್ಣನ್ ಸಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.‌

ಸಾಹಿತಿ ನೆಂಪೆ ದೇವರಾಜ್ ಮಾತನಾಡಿ, ಕೃಷಿಕ, ಕಲ್ಲು ಬಂಡೆ ಕಾರ್ಮಿಕನಾಗಿರುವ ರವಿ ಪ್ರಯತ್ನ ಶ್ಲಾಘನೀಯ. ಸಾಹಿತ್ಯ ಬಲ್ಲವರಿಗೆ ಮಾತ್ರ ಬರವಣಿಗೆ ಸೀಮಿತವಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಬಡತನ, ಶ್ರೀಮಂತಿಕೆಯ ನಡುವೆ ಪ್ರೇಮದ ಹಂದರವನ್ನು ಬಿಡಿಸುವ ಕಾದಂಬರಿಯಾಗಿದೆ ಎಂದು ತಿಳಿಸಿದರು.

ಲೇಖಕಿ ಪದ್ಮಜಾ ಜೋಯ್ಸ್ ಮಾತನಾಡಿ, ಸಾಹಿತ್ಯ ರಚನೆ ಮಾಡಲು ದೊಡ್ಡ ಓದು ಪದವಿ ಬೇಕಿಲ್ಲ.. ಸಂವೇದ ನಾ ಶೀಲ ಮನಸು ಬೇಕು ಅದು ರವಿಯವರಲ್ಲಿದೆ. ಬರವಣಿಗೆ ಕುರಿತು ಅವರ ಕಾಳಜಿ ನೋಡಿ ಆಶ್ಚರ್ಯಗೊಂಡಿದ್ದೇನೆ. ಕಾದಂಬರಿ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post