ಪತ್ರಿಕಾ ದಿನಾಚರಣೆಯ
ದಿಕ್ಸೂಚಿ ಭಾಷಣಕಾರ ಪ್ರಾಂಶುಪಾಲ ಪಿ. ಆರಡಿಮಲ್ಲಯ್ಯ ಕಟ್ಟೇರ
ಪ್ರತಿಭಟನೆ ಬಗ್ಗೆ ಯುವ ಜನತೆಗೆ ತಿಳಿಸಿಕೊಡಬೇಕಾದ ಸನ್ನಿವೇಶ ಸೃಷ್ಟಿ - ಆರ್‌ಎಂಎಂ
ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಬಾರದು - ಕಿಮ್ಮನೆ
ಧರ್ಮದ ಶೋಷಣೆ ಬಗ್ಗೆ ನ್ಯಾಯಾಲಯಕ್ಕೆ ದೋಷ ಕಾಣಿಸದು ಏಕೆ - ಟೆಲೆಕ್ಸ್ ರವಿಕುಮಾರ್
ಪತ್ರಿಕಾ
ಧರ್ಮ ಸುದ್ದಿಗಾಗಿ ಅಥವಾ ಟಿಆರ್‌ಪಿಯ ಜನಪ್ರಿಯತೆಯ ಹಿಂದ ಓಡುತ್ತಿದೆ. ರಾಶಿ ಭವಿಷ್ಯ, ವಶೀಕರಣ, ಶತ್ರುನಾಶ,
ಕನ್ಯಾಬಲದ ಕುರಿತು ಮಾಹಿತಿ ನೀಡಬಹುದಾದ ಮಾದ್ಯಮಗಳು ಸಂವಿಧಾನದ ವಿಚಾರ ಪ್ರಚಾರ ಪಡಿಸಲು ಯಾವುದೇ ಸುದ್ದಿಯ
ಕಾರ್ನರ್ ಅಳವಡಿಸಿಕೊಂಡಿಲ್ಲ. ಸಂವಿಧಾನದ ಪಾಠ ಯಾರಿಗೆಲ್ಲಾ ಅಗತ್ಯ ಇದೆ ಎಂದು ಪ್ರಶ್ನಿಸಿದರೆ ಮಾದ್ಯಮವನ್ನು
ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಜಾತಂತ್ರ ವ್ಯವಸ್ಥೆಯನ್ನೇ ತಪ್ಪಾಗಿ ಗ್ರಹಿಕೆ
ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಕೋಣಂದೂರು ಪ್ರಥಮ ದರ್ಜೆ ಕಾಲೇಜಿನ ಮಾನವ ಕುಲಶಾಸ್ತ್ರಜ್ಞ
ಪಿ. ಆರಡಿಮಲ್ಲಯ್ಯ ಕಟ್ಟೀರ ಅಭಿಪ್ರಾಯ ವ್ಯಕ್ತಪಡಿಸಿದರು.
ತುಂಗಾ ತೀರದ ಮಾಧವ
ಮಂಗಲ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಘಟಕ ಹಮ್ಮಿಕೊಂಡಿದ್ದ
ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿದರು. ಕನ್ಯಾಬಲ,
ಶತ್ರುನಾಶ ಮುಂತಾದ ಪದಗಳ ಬಳಕೆಯೆ ತಪ್ಪಾಗಿದೆ. ಸಂವಿಧಾನದ ಅಡಿಯಲ್ಲಿ ಅವುಗಳನ್ನು ಬಳಕೆ ಮಾಡಬಹುದಾದ
ಅವಕಾಶಗಳು ಇಲ್ಲ. ಆದರೆ ಸತ್ಯವನ್ನು ಮರೆಮಾಚಿ ಜನರನ್ನು ಅವಾಸ್ತವದ ಕಡೆಗೆ ತಳ್ಳುವ ಪ್ರಯತ್ನದಲ್ಲಿ
ಮಾದ್ಯಮಗಳು ಮುಂಚೂಣಿಯಲ್ಲಿ ಸಾಗುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಪತ್ರಕರ್ತರ ಕುರಿತು ನಾಗರೀಕ
ಪ್ರಪಂಚಕ್ಕೆ ಮಾಹಿತಿ ಇರಲಾದರು. ಅಂತವ ವ್ಯಕ್ತಿಗಳಿಗೆ ಹೆಸರು ಇರುವುದಿಲ್ಲ. ಜನಮನ್ನಣೆ ಇರುವುದಿಲ್ಲ.
ಕಡೆಯದಾಗಿ ಸಂಬಳವೂ ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಧ್ವನಿ ಇಲ್ಲದವರ ಧ್ವನಿಯಾಗುವುದಾದರು ಹೇಗೆ
ಎಂದು ಪ್ರಶ್ನಿಸಿದರು.
ಮಲೆನಾಡು ಪ್ರದೇಶಾಭಿವೃದ್ಧಿ
ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಸಾಮಾಜಿಕ ಜಾಲತಾಣದ ಆರ್ಭಟದಲ್ಲಿ ಮುದ್ರಣ ಮಾದ್ಯಮಗಳು
ದೊಡ್ಡ ಸುಳಿಗೆ ಸಿಲುಕಿವೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ತಪ್ಪುಗಳನ್ನು ಪ್ರಾಮಾಣಿಕವಾಗಿ ಜನರ
ಮುಂದಿಡುವ ಮತ್ತೊಂದು ಅಂಗವಾಗಿ ಮಾದ್ಯಮರಂಗ ಗುರುತಿಸಿಕೊಂಡಿದೆ. ಧೈರ್ಯವಾಗಿ ಪ್ರಭುತ್ವದ ವಿರುದ್ಧ
ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಟೀಕೆಗಳನ್ನು ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹಿಂದೆಲ್ಲಾ
ಪತ್ರಿಕೆಗಳು ರಾಜಕಾರಣಿ, ಅಧಿಕಾರಿಗಳ ತಪ್ಪುಗಳನ್ನು ಸಮಾಜಕ್ಕೆ ತೋರಿಸಿ ಮನೆಗೆ ಕಳಿಸಿದ್ದಾರೆ. ಈಚೆಗೆ
ಯುವ ಸಮುದಾಯ ಎಲ್ಲಾ ವಿಚಾರಗಳಿಂದ ವಿಮುಖವಾಗುತ್ತಿರುವುದು ಸಮಾಜದ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದೆ.
ಪ್ರತಿಭಟನೆ ಏನು ಎಂಬ ಬಗ್ಗೆಯೇ ಮುಂದೊಂದು ದಿನ ಪ್ರಶ್ನೆಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಯುವ
ಜನಾಂಗ ಎಲ್ಲವನ್ನು ಮೀರಿ ಸಮಾಜದ ಪರವಾಗಿ ಚಿಂತಿಸಬೇಕು. ನಿರ್ಭೀತಿಯಿಂದ ಬರೆಯುವರಿಗೆ ಸಮಾಜದ ರಕ್ಷಣೆ
ಅಗತ್ಯವಾಗಿದೆ. ಅಂತವರಿಗೆ ಹೆಚ್ಚಿನ ಸಹಕಾರ ಕೊಡಬೇಕು. ಮೊದಲ ಬಾರಿಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ
ಇಷ್ಟೊಂದು ಜನರನ್ನು ನೋಡಿ ಖುಷಿಯಾಗಿದೆ. ವಿಶ್ವಾಸ, ಪ್ರೀತಿ ಪಡೆದರೆ ಸಮಾಜವು ಪತ್ರಕರ್ತರ ಜೊತೆಗೆ
ನಿಲ್ಲುತ್ತದೆ. ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಇಷ್ಟೊಂದು ಜನರು ಪಾಲ್ಗೊಂಡಿರುವ ದೃಶ್ಯವನ್ನು
ಮೊದಲ ಬಾರಿ ನೋಡುತ್ತಿದ್ದೇನೆ. ವಿಶ್ವಾಸ, ಸ್ನೇಹಗಳಿಸಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಕಾರ್ಯಕ್ರಮ
ಸಾಕ್ಷಿಯಾಗಿದೆ ಎಂದರು.
ಮಾಜಿ ಸಚಿವ ಕಿಮ್ಮನೆ
ರತ್ನಾಕರ್ ಮಾತನಾಡಿ, ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ಅಪರಾಧ ಚಟುವಟಿಕೆ ಪ್ರಮಾಣವು ಅಧಿಕವಾಗುತ್ತಿದೆ.
ಕ್ರೌರ್ಯದ ಬಗ್ಗೆ ದೃಶ್ಯ ಮಾದ್ಯಮಗಳು ತೋರಿಸುವ ರೀತಿ ಭಯ ಮೂಡಿಸುವಂತಿದೆ. ಬಾರ್ ಕೌನ್ಸಿಲ್, ಮೆಡಿಕಲ್
ಅಸೋಸಿಯೇಷನ್ ಮುಂತಾದ ಸಂಸ್ಥೆಗಳ ರಾಜಕೀಯಗಳು ನೋಡಿದರೆ ಇಂತಹ ಸ್ಥಿತಿಯಲ್ಲಿ ಭಾರತ ಇದೆಯೇ ಎಂಬ ಅನುಮಾನ
ಸೃಷ್ಟಿಯಾಗುತ್ತದೆ. ಪದವೀಧರರ ಕ್ಷೇತ್ರದಲ್ಲಿ ಮತ ಹಾಕುವವರು ವಿದ್ಯಾವಂತರೇ ಆಗಿದ್ದರು ಅಲ್ಲಿಯೂ ಸಾಮಾಜಿಕ
ನ್ಯಾಯವನ್ನು ನೋಡಲು ಸಾಧ್ಯವಿಲ್ಲ. ಜಾತಿ, ಧರ್ಮದ ದ್ವೇಶದೊಳಗೆ ಕಟ್ಟಿಬಿದ್ದಿದ್ದೇವೆ. ಟಿ.ವಿ., ಮೊಬೈಲ್
ಇಲ್ಲದ ಕಾಲದಲ್ಲಿಯೂ ಗಾಂಧಿಯ ವಿಶೇಷವಾದ ಚಿಂತನೆಗಳು ಸಮಾಜದ ಎಲ್ಲಾ ಸ್ಥರದ ವ್ಯಕ್ತಿಗಳನ್ನು ತಲುಪಿದ್ದವು.
ಆದರೆ ಈಗ ಇಷ್ಟೆಲ್ಲಾ ಮುಂದುವರೆದಿದ್ದರು ಸತ್ಯ ಯಾವುದು ಎಂದು ತಿಳಿಯುವುದೇ ಕಷ್ಟಕರವಾಗುತ್ತಿದೆ.
ಯಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕಬಾರದು. ಹಾಗಂತ ಸಂವಿಧಾನ ನೀಡಿದ ಹಕ್ಕುಗಳು ಬೇಕೆಂದು
ಭಯಸುವ ಪ್ರತಿಯೊಬ್ಬ ನಾಗರೀಕನು ತನ್ನ ಜವಾಬ್ದಾರಿ, ಕರ್ತವ್ಯಗಳನ್ನು ನಿಭಾಯಿಸಬೇಕು. ಮಾನಹಾನಿ ಪ್ರಕರಣಗಳು
ಸಾಮಾನ್ಯವಾಗುತ್ತಿರುವ ಕಾಲಘಟ್ಟದಲ್ಲಿ ದಾಖಲೆ ಸಮೇತ ತಪ್ಪುಗಳನ್ನು ಪ್ರಚಾರ ಪಡಿಸುವ ಪತ್ರಿಕೆಗಳ ಕಾರ್ಯ
ಶ್ಲಾಘನೀಯ. ಒಕ್ಕೂಟ ವ್ಯವಸ್ಥೆಯೊಳಗೆ ಭಾರತ ಇದ್ದು ಇಲ್ಲಿನ ಎಲ್ಲಾ ಭಾಷೆಗಳಿಗೂ ತನ್ನದೇ ಆದ ಮಾನ್ಯತೆಗಳಿವೆ.
ಹೇರಿಕೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಸನ್ನಿವೇಶ ಎಂದು ಅಭಿಪ್ರಾಯಿಸಿದರು.
ಕರ್ನಾಟಕ ರಾಜ್ಯ
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ರವಿಕುಮಾರ್ ಟೆಲೆಕ್ಸ್ ಮಾತನಾಡಿ, ಅಭಿವ್ಯಕ್ತಿ
ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಒಂದು ಕಡೆ ನಡೆಯುತ್ತಿದ್ದರೆ ಪತ್ರಕರ್ತರು ಒಂದು ವಿಚಾರದ
ಬಗ್ಗೆ ಮಾತನಾಡದಂತೆ ಪೂರ್ವ ನಿರ್ಬಂಧ ಹೇರುತ್ತಿರುವ ಪ್ರಸಂಗಗಳು ಕರ್ನಾಟಕದಲ್ಲೇ ನಡೆಯುತ್ತಿದೆ. ಇದನ್ನು
ಗ್ಯಾಗ್ ಎಂದು ಕರೆಯಲಾಗುತ್ತದೆ. ಡಿಕ್ಷನರಿಯಲ್ಲಿ ಅದಕ್ಕೆ ತಮಾಶೆಯ ಆದೇಶವೆಂದು ತೋರಿಸುತ್ತಿದ್ದು
ನಿಜವಾಗಿಯೂ 900 ಪತ್ರಕರ್ತರ ಮೇಲೆ ಪೂರ್ವ ನಿರ್ಭಂದ ಹೇರುವುದು ಕೂಡ ತಮಾಶೆಯಾಗಿದೆ. ಇದನ್ನು ನ್ಯಾಯಾಲಯ
ಕೂಡ ಅಂಗೀಕರಿಸುತ್ತಿದೆ. 8800 ಸುದ್ದಿ, ಸ್ಟೋರಿಗಳನ್ನು ಡಿಲೀಟ್ ಮಾಡಲು ಹೇಳಿರುವ ನ್ಯಾಯಾಲಯಕ್ಕೆ
ಇಂತಹ ಪ್ರಕರಣದ ಹಿಂದೆ ದೋಷ ಇದೆ ಅನ್ನಿಸುತ್ತಿಲ್ಲ. ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯದ ವೈರುಧ್ಯ.
ದೇಶದಲ್ಲಿರುವ ಶೇಕಡಾ 40 ರಷ್ಟು ಪತ್ರಕರ್ತರು ಜಾಮೀನಿನಲ್ಲಿದ್ದಾರೆ. ಇಷ್ಟುದ್ದರು ಕೂಡ ಪತ್ರಕರ್ತರನ್ನು
ರಕ್ಷಿಸಬೇಕಾದ ಸಮಾಜ ಮಾತ್ರ ಮೌನವಾಗಿದೆ ಎಂದು ಬೇಸರಿಸಿದರು.
ತುರ್ತು ಪರಿಸ್ಥಿತಿಯ
50ನೇ ವರ್ಷಾಚರಣೆಯ ಸಂಭ್ರಮ ಆಚರಿಸುತ್ತಿರುವ ಕೆಲವರಿಗೆ ದೇಶದಲ್ಲಿ 12 ವರ್ಷಗಳಿಂದ ನಡೆದ ಅಘೋಷಿತ
ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವ ಧೈರ್ಯ ಸಾಕಾಗುತ್ತಿಲ್ಲ. ಧರ್ಮಾಧಿಕಾರಿ, ಮಠಾಧಿಪತಿ, ಉದ್ಯಮಿಗಳ
ಬಗ್ಗೆ ಅಕ್ಷರ ಬರೆದು ದಕ್ಕಿಸಿಕೊಳ್ಳದ ಸ್ಥಿತಿ ಇದೆ. ಸಾಮಾನ್ಯ ರಾಜಕಾರಣಿ, ಮುಖ್ಯಮಂತ್ರಿಯ ಬಗ್ಗೆ
ಬರೆದರೆ ಅದರಿಂದ ಹೊರಬರಬಹುದು. ಪತ್ರಕರ್ತ ಒಂದು ಹಂತದಲ್ಲಿ ಪಕ್ಷಪಾತಿಯಾಗಿರಬೇಕು. ಹೇಗೆಂದರೆ ಬಡವರು,
ದುರ್ಬಲರು, ಅಸಹಾಯಕರು, ನ್ಯಾಯ, ಸಮಾನತೆ, ಸಹಬಾಳ್ವೆಗಾಗಿ ಪಕ್ಷಪಾತಿಯಾಗಿರಬೇಕು. ಅಂತಿಮವಾಗಿ ಸಂವಿಧಾನಕ್ಕೆ
ಬದ್ಧವಾಗಿರಬೇಕು ಎಂದರು.
ಕಾರ್ಯನಿರತ ಪತ್ರಕರ್ತರ
ಸಂಘದ ಅಧ್ಯಕ್ಷ ಮೋಹನ್ ಮುನ್ನೂರು, ಜಿಲ್ಲಾ ಕಾರ್ಯದರ್ಶಿ ವಿ.ಟಿ.ಅರುಣ್, ಖಜಾಂಚಿ ರಂಜಿತ್, ಪಟ್ಟಣ
ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಮಾಜಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ತುಳುನಾಡು
ಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷ ಬಿ.ಆರ್. ರಾಘವೇಂದ್ರ ಶೆಟ್ಟಿ, ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್
ಶೆಟ್ಟಿ, ಸಾಹಿತಿ ಶಿವಾನಂದ ಕರ್ಕಿ ಕಾರ್ಯದರ್ಶಿ ಮುರುಘರಾಜ್ ಕೋಣಂದೂರು, ಜಿಲ್ಲಾ ಪ್ರತಿನಿಧಿ ಟಿ.ಜೆ.ಅನಿಲ್
ಮುಂತಾದವರು.
ಮುರುಘರಾಜ್ ಕೋಣಂದೂರು
ಸ್ವಾಗತಿಸಿದರು. ಸಂತೋಷ್ ಕುಮಾರ್ ವಂದಿಸಿದರು. ಗಾಯತ್ರಿ ಶೇಷಗಿರಿ, ಶಿವು ಹೊಸಕೊಪ್ಪ ನಿರೂಪಿಸಿದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ವಕೀಲ ಎಂ.ಎನ್.ರಮೇಶ್, ಮಕ್ಕಳ ತಜ್ಞ ಡಾ.ಪ್ರಭಾಕರ್, ಕ್ರೀಡಾ ಪೋಷಕ ಅಬ್ದುಲ್ ಕಲಾಂ ಆಜಾದ್, ಪಶು ವೈದ್ಯ ಡಾ.ಪಾವುಲ್ ಕ್ಯಾಸ್ತಲಿನೋ, ಹಿರಿಯ ಸಂಗೀತ ಕಲಾವಿದ ಕೃಷ್ಣದಾಸ್ ಹೆಜಮಾಡಿ, ಐಐಟಿ ಪ್ರವೇಶ ಪಡೆದ ಸುಶಾಂತ್ ಎಂ.ಪ್ರಭು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿರುವ ಆರ್.ದೀಕ್ಷಾ, ಆರ್. ನೇತ್ರಾ, ಶ್ರಮಜೀವಿ ಎಂ.ಕೆ.ಶ್ರೀನಿವಾಸ ಪೂಜಾರಿ, ಯುವ ಸಹಕಾರಿ ಉದ್ಯಮಿ ಕಂಪದಗದ್ದೆ ಸುರೇಶ್, ಕೋಣಂದೂರು ಅಬ್ಬಾಸ್ ಮತ್ತು ಪತ್ರಕರ್ತರ ಕುಟುಂಬದವರಾಗಿದ್ದು ಉನ್ನತ ಸಾಧನೆ ಮಾಡಿರುವ ಕೆ.ಆರ್.ದೀಕ್ಷಾ, ಜಿ.ಎಂ.ಶ್ರವಣ್, ಜಿ.ಎಂ.ಶ್ರೇಯನ್ ಇವರುಗಳನ್ನು ಸನ್ಮಾನಿಸಲಾಯಿತು.
