"ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕನಸಿನ ಸೇತುವೆ"
ಸರ್ವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಶಾಸಕ ಆರಗ ಜ್ಞಾನೇಂದ್ರ
ನೂತನ ತಂತ್ರಜ್ಞಾನದ ಮೂಲಕ 423 ಕೋಟಿ ವೆಚ್ಚದ ಎರಡುಕಾಲು ಕಿ.ಮಿ. ಉದ್ದದ ದೇಶದ ಎರಡನೇ ಅತಿ ಉದ್ದದ ಸೇತುವೆ ಇದಾಗಿದೆ. ಶರಾವತಿ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ಸಿಗಂದೂರು ಸೇತುವೆಯನ್ನು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಜುಲೈ 14 ರಂದು ಸೋಮವಾರ ಬೆಳಿಗ್ಗೆ 10-30 ಗಂಟೆಗೆ ಉದ್ಘಾಟಿಸಲಿದ್ದಾರೆ. ಬಳಿಕ ಸಾಗರದ ನೆಹರೂ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶಿಷ್ಟವಾದ ತಂತ್ರಜ್ಞಾನಗಳ ಮೂಲಕ ಸೇತುವೆ ನಿರ್ಮಿಸಲಾಗಿದೆ. ಇದೊಂದು ಇಡೀ ಶಿವಮೊಗ್ಗ ಜಿಲ್ಲೆಗೇ ಹೆಮ್ಮೆಯ ವಿಷಯವಾಗಿದೆ. ಇದು ಪ್ರವಾಸಿ ತಾಣವಾಗುವ ನಿರೀಕ್ಷಿಯಿದೆ ಎಂದು ತಿಳಿಸಿದರು.
ಇಡೀ ರಾಜ್ಯಕ್ಕೆ ಬೆಳಕು ಕೊಟ್ಟ ಶರಾವತಿ ಅಣೇಕಟ್ಟಿನ ಹಿನ್ನೀರಿನಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸಿನ ಕೂಸು. ಸೇತುವೆಯಿಲ್ಲದೆ ಇಲ್ಲಿ ಈವರೆಗೆ ಲಾಂಚ್ ವ್ಯವಸ್ಥೆಯಿದ್ದು, ಈ ಹಿಂದೆ ಈ ಜಾಗದಲ್ಲಿ ಅನೇಕ ಅವಘಡಗಳು ಕೂಡ ಸಂಭವಿಸಿದ್ದವು. ಇದನ್ನರಿತ ಯಡಿಯೂರಪ್ಪ ಅವರು, ಈ ಸೇತುವೆಗಾಗಿ 100 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ್ದರು. ಈ ಹಣ ಸಾಕಾಗದಿದ್ದರಿಂದ ಅನಂತರ ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಅವರು ನಿರಂತರವಾಗಿ ಈ ಯೋಜನೆಯ ಅನುಷ್ಟಾನಕ್ಕಾಗಿ ಹಿಂದೆ ಬಿದ್ದು ಇದೀಗ ಇದು ಸಾಕಾರಗೊಳ್ಳುವಂತೆ ಮಾಡಿದ್ದಾರೆ ಎಂದು ನುಡಿದರು.
ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶಾಸಕರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ಮುಖಂಡರಾದ ಕುಕ್ಕೆ ಪ್ರಶಾಂತ್, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಸಂತೋಷ್ ದೇವಾಡಿಗ, ಪ್ರಮೋದ್ ಪೂಜಾರಿ, ಅತಿಥ್, ಸಾತ್ವಿಕ್ ಮುಂತಾದವರಿದ್ದರು.
