ಮಾಹಿತಿ ನೀಡದೆ ಸರ್ಕಾರದಿಂದ ಲೋಪ
ತೀರ್ಥಹಳ್ಳಿಯಲ್ಲಿ ಶೇಕಡಾ 10 ರಷ್ಟು ಫಲಾನುಭವಿಗಳಿಗೆ ಅನ್ನಭಾಗ್ಯ ತಲುಪಿಲ್ಲ
![]() |
| ಸಾಂದಾರ್ಭಿಕ ಚಿತ್ರ |
ತೀರ್ಥಹಳ್ಳಿ ತಾಲ್ಲೂಕಿನ ಅನೇಕ
ಪಡಿತರ ವಿತರಣ ಕೇಂದ್ರಗಳಲ್ಲಿ ಅನ್ನಭಾಗ್ಯ ವಿತರಣೆ ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರದ ಅಧಿಕೃತ
ವೆಬ್‌ಸೈಟ್‌ನಲ್ಲಿ ಪಡಿತರ ನೊಂದಣಿ ಮಾಡಿಕೊಳ್ಳುವ ಸಂದರ್ಭ ಬಹುತೇಕ ಸರ್ವರ್ ಡೌನ್ ಸಮಸ್ಯೆ
ಎದುರಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ನೂರಾರು ಫಲಾನುಭವಿಗಳು ಪಡಿತರ ಅಕ್ಕಿ ಪಡೆಯುವಲ್ಲಿ
ವಿಫಲರಾಗುತ್ತಿದ್ದಾರೆ.
ಶೇಕಡಾ 10 ರಷ್ಟು ಫಲಾನುಭವಿಗಳಿಗೆ
ಅನ್ನಭಾಗ್ಯ ಯೋಜನೆಯ ಅಕ್ಕಿ ಸಿಕ್ಕಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ. ಸಹಕಾರ ಸಂಘ ಸಂಸ್ಥೆಗಳು
ಪಡಿತರ ವಿತರಣಾ ಕೇಂದ್ರ ನಡೆಸುತ್ತಿದ್ದು ತಾಲ್ಲೂಕಿನ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ
ಅಧಿಕಾರಿಯನ್ನು ಪ್ರಶ್ನಿಸಿದರೆ ಈ ಸಮಸ್ಯೆ ಪರಿಹಾರ ಮಾಡಲು ಬರುವುದಿಲ್ಲ. ಸರ್ಕಾರದ ನಿಯಮದ ಪ್ರಕಾರ
ವಿತರಣಾ ಕೇಂದ್ರ ನಡೆಯುತ್ತಿದೆ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ. ನಾಗರೀಕ ಸರ್ಕಾರ ಇದೆಯೇ
ಎಂಬ ಅನುಮಾನ ವ್ಯಕ್ತವಾಗುತ್ತದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
“ಪಡಿತರ ಕೇಂದ್ರದಲ್ಲಿ ದೋಷವಾಗುತ್ತಿಲ್ಲ. ಸರ್ವರ್ ಡೌನ್ ಆದರೆ ನಾವೇನು ಮಾಡೋದಕ್ಕೆ ಬರುವುದಿಲ್ಲ. ಪ್ರತಿ ತಿಂಗಳ 30ರೊಳಗೆ ಬೆರಳಚ್ಚು ನೀಡಿ ಪಡಿತರ ಪಡೆಯಬೇಕು. ತಾಂತ್ರಿಕ ತೊಂದರೆಗೆ ಇಲಾಖೆ ಹೊಣೆಗಾರರಲ್ಲ” – ಶಶಿಧರ್, ಶಿರಸ್ತೆದಾರ್-ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ
ಕಳೆದ ನವೆಂಬರ್ ತಿಂಗಳಿನಲ್ಲಿ
ಹಲವು ಬಾರಿ ಸರ್ವರ್ ಡೌನ್ ಸಮಸ್ಯೆ ಎದುರಾಗಿದೆ. ಪ್ರತಿ ಬಾರಿ ಪಡಿತರ ಕೇಂದ್ರಕ್ಕೆ ಹೋದ ಫಲಾನುಭವಿಗಳಿಗೆ
ನಾಳೆ ಬನ್ನಿ, ಸರ್ವರ್ ಇಲ್ಲ ಎಂದು ಕಳಿಸಲಾಗುತ್ತಿದೆ. ಹೀಗೆ ತಿಂಗಳ ಕೊನೆಯ ದಿನದ ವರೆಗೆ
ಇಲ್ಲಸಲ್ಲದ ಸಬೂಬು ಹೇಳಿ ಅಕ್ಕಿ ಕೊಡುವುದಿಲ್ಲ. ಮುಂದಿನ ತಿಂಗಳು ಫಲಾನುಭವಿಗಳು ಪಡಿತರ
ಕೇಂದ್ರಕ್ಕೆ ಹೋದಾಗ ಕಳೆದ ತಿಂಗಳ ಪಡಿತರ ವಾಪಾಸ್ಸು ಹೋಗಿದೆ. ಇನ್ನು ಹಾಲಿ ತಿಂಗಳ ಪಡಿತರ ಮಾತ್ರ
ಸಿಗುತ್ತದೆ. ಅದನ್ನು ಬೇಕಾದರೆ ತೆಗೆದುಕೊಳ್ಳಬಹುದು ಎಂದು ವಾಪಾಸ್ಸು ಕಳಿಸಿದ್ದಾರೆ ಎಂದು ಅನ್ನಭಾಗ್ಯ
ವಂಚಿತ ಫಲಾನುಭವಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪಡಿತರ ಪಡೆಯುವ ಸಾಮಾನ್ಯ ಜನರು
ಒಂದು ದಿನದ ಕೂಲಿ ಬಿಟ್ಟು ನ್ಯಾಯಬೆಲೆ ಅಂಗಡಿ, ಸೊಸೈಟಿಗಳಲ್ಲಿ ಕಾಯಬೇಕಾದ ದುಸ್ಥಿತಿ
ಎದುರಾಗಿದೆ. ಇವುಗಳನ್ನು ಪ್ರಶ್ನಿಸಲು ಹೋದರೆ ಅಧಿಕಾರಿಗಳೇ ಹೆದರಿಸಿ ಕಳುಹಿಸುವ ಖಯಾಲಿ
ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿದೆ. ಇವುಗಳನ್ನು ಸರಿಪಡಿಸುವ ಗ್ಯಾರಂಟಿ
ಅನುಷ್ಟಾನ ಸಮಿತಿ, ತಹಶೀಲ್ದಾರ್, ಶಾಸಕರು ಬಡವರ ಬಗ್ಗೆ ಕಳಕಳಿ ತೋರಿಸಲಿ ಎಂದು ಹಲವರು
ಆಗ್ರಹಿಸಿದ್ದಾರೆ.
