ಸತತ ತಪಾಸಣೆ ಆರೋಗ್ಯಕ್ಕೆ ಪೂರಕ

ಪಟ್ಟಣ ಪಂಚಾಯಿತಿ ಉಚಿತ ಆರೋಗ್ಯ ಶಿಬಿರ ಯಶಸ್ವಿ
ಅಶಿಸ್ತಿನ ಜೀವನ ಮಾನಸಿಕ ಒತ್ತಡ ಸೃಷ್ಟಿಸಲಿದೆ - ಡಾ.ಚಂದ್ರಶೇಖರ್

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ ಡೇ-ನಲ್ಮ್, ಜಿಲ್ಲಾ ಕೌಶಲ್ಯಾಭಿವೃದ್ದಿ-ಉದ್ಯಮಶೀಲತೆ, ಜೀವನೋಪಾಯ ಹಾಗೂ ಉಡುಪಿಯ ಆದರ್ಶ ಆಸ್ಪತ್ರೆ ಮತ್ತು ಆದರ್ಶ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಉಡುಪಿ ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಚಂದ್ರಶೇಖರ್‌, ಇತ್ತೀಚಿನ ವರ್ಷಗಳಲ್ಲಿ ಅಶಿಸ್ತಿನ ಜೀವನ ಶೈಲಿ, ಕ್ರಮಬದ್ದವಲ್ಲದ ಆಹಾರ ಕ್ರಮದಿಂದಾಗಿ ರಕ್ತದೊತ್ತಡ, ಮಧುಮೇಹಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಅಧಿಕವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಮಧ್ಯ ವಯಸ್ಸಿನ ನಂತರ ಸತತ ತಪಾಸಣೆ ಅಗತ್ಯ ಎಂದು ಹೇಳಿದರು.

ಮಾನಸಿಕ ಒತ್ತಡ ದೋಷಯುಕ್ತ ಆಹಾರ ಮತ್ತು ಅಶಿಸ್ತಿನ ಜೀವನ ಶೈಲಿಯಿಂದಾಗಿ ಭೀಕರ ರೋಗರುಜಿನಗಳಿಗೆ ಬಲಿಯಾಗುತ್ತಿರವವರ ಸಂಖ್ಯೆ ಹೆಚ್ಚುವುದಕ್ಕೆ ಕಾರಣವಾಗಿದೆ. ಜಂಕ್ ಫುಡ್ ನಿಯಂತ್ರಣದೊಂದಿಗೆ ಕ್ರಮಬದ್ದವಾದ ಮತ್ತು ನಿಯಮಿತ ಶುದ್ದ ಆಹಾರ ಕ್ರಮವನ್ನು ಪಾಲಿಸುವುದು ಅಗತ್ಯ. ಮಾನಸಿಕ ಏಕಾಗ್ರತೆಯೊಂದಿಗೆ ಶಿಸ್ತುಬದ್ದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮತ್ತು 40 ನಂತರ ನಿರಂತರ ಆರೋಗ್ಯ ತಪಾಸಣೆ ಮಾಡಿಸುವುದು ಕೂಡಾ ಅನಿವಾರ್ಯ ಎಂದೂ ಹೇಳಿದರು.

ಆರೋಗ್ಯ ಶಿಬಿರದ ನೇತೃತ್ವವನ್ನು ವಹಿಸಿದ್ದ ಪಪಂ ಅಧ್ಯಕ್ಷ ರಹಮತ್‌ಉಲ್ಲಾ ಅಸಾದಿ ಮಾತನಾಡಿ, ಪಟ್ಟಣದ ಜನತೆಗೆ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ ಜನರ ಆರೋಗ್ಯದ ಎಚ್ಚರಿಕೆ ಮೂಡಿಸುವ ಹೊಣೆಗಾರಿಕೆಯೂ ಸ್ಥಳಿಯಾಡಳಿತಕ್ಕಿದೆ. ಸುವರ್ಣ ಕರ್ನಾಟಕ ಸಂಭ್ರಮದ ಆಚರಣೆಯ ಭಾಗವಾಗಿ ಸಾಂಸ್ಕೃತಿಕ ಕ್ರೀಡೆಯ ಜೊತೆಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಈ ಶಿಬಿರದಲ್ಲಿ 450 ಕ್ಕೂ ಹೆಚ್ಚು ಇಸಿಜಿ ತಪಾಸಣೆ ಸೇರಿದಂತೆ ಫಿಜಿಷಿಯನ್, ನರರೋಗ, ಓಬಿಜಿ, ಕಿವಿ ಮೂಗು ಗಂಟಲು, ಕಣ್ಣಿನ ತಜ್ಞ ವೈದ್ಯರುಗಳು ಇದ್ದು 750 ಕ್ಕು ಹೆಚ್ಚು ಜನರು ಇದರ ಸೌಲಭ್ಯ ಪಡೆದಿದ್ದಾರೆ. ಈ ಶಿಬಿರದಲ್ಲಿ ತಪಾಸಣೆ ಮಾಡಿಸಿರುವವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ರಿಯಾಯ್ತಿ ದರದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದೂ ಹೇಳಲಾಗಿದೆ.

ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ದೀಪ ಬೆಳಗುವ ಮೂಲಕ ಶಿಬಿರವನ್ನು ಉಧ್ಘಾಟಿಸಿದರು. ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಸದಸ್ಯರುಗಳಾದ ಸಂದೇಶ್ ಜವಳಿ, ಶಬನಮ್, ಬಿ.ಗಣಪತಿ,‌ ಜಯಪ್ರಕಾಶ್ ಶೆಟ್ಟಿ, ಜ್ಯೋತಿಮೋಹನ್, ರತ್ನಾಕರ ಶೆಟ್ಟಿ, ಮಂಜುಳಾ ನಾಗೇಂದ್ರ, ಯತಿರಾಜ್, ಸಿಓ ಡಿ.ನಾಗರಾಜ್ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post