ತೀರ್ಥಹಳ್ಳಿ ತಾಲ್ಲೂಕು ಆಡಳಿತದಲ್ಲಿ ಶೋಕದ ಕಡಲು
ಬೆಂಗಳೂರಿನ ವೈಭವ್ ಹೋಟೆಲ್ ಗೆ ಶಾಸಕ ಆರಗ ಜ್ಞಾನೇಂದ್ರ ಭೇಟಿ
ತೀರ್ಥಹಳ್ಳಿಯ ತಹಶೀಲ್ದಾರ್ ಜೆ.ಬಿ.ಜಕ್ಕಣಗೌಡರ್ (54) ಮೃತದೇಹ ಪತ್ತೆಯಾದ ಬೆಂಗಳೂರಿನ ಕಪಾಲಿ ಥಿಯೇಟರ್ ಮುಂಭಾಗದ ವೈಭವ್ ಹೋಟೆಲ್ ಗೆ ಬುಧವಾರ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಮಗಳು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
2023ರ ನವೆಂಬರ್ 9ರಂದು ತೀರ್ಥಹಳ್ಳಿಯಲ್ಲಿ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಶನಿವಾರ ನಡೆದ ರಾಮೇಶ್ವರ ದೇವರ ದಸರಾ ಉತ್ಸವದಲ್ಲಿ ಸಂಜೆ ಸಡಗರದಿಂದ ಪಾಲ್ಗೊಂಡಿದ್ದ ತಹಶೀಲ್ದಾರ್ ಜೆ.ಬಿ.ಜಕ್ಕನಗೌಡರ್ ಭಾನುವಾರ ಸ್ವಂತ ಊರು ಗದಗಕ್ಕೆ ತೆರಳಿದ್ದರು. ಬುಧವಾರ ಹೈಕೋರ್ಟ್ ಗೆ ಸಾಕ್ಷಿ ಹೇಳುವ ಸಂಬಂಧ ಮಂಗಳವಾರ ಬೆಂಗಳೂರಿನ ವೈಭವ್ ಹೋಟೆಲ್ನಲ್ಲಿ ತಂಗಿದ್ದರು. ರಾತ್ರಿ ಸುಮಾರು 11 ಗಂಟೆಯವರೆಗೂ ಕುಟುಂಬಸ್ಥರು ಹಾಗೂ ವಿವಿಧ ಅಧಿಕಾರಿಗಳ ಜೊತೆ ಫೋನ್ ಸಂಪರ್ಕದಲ್ಲಿದ್ದರು.
ಬುಧವಾರ ಬೆಳಿಗ್ಗೆಯಿಂದ ಯಾವುದೇ ಕರೆಗಳನ್ನು ಸ್ವೀಕರಿಸಿರಲಿಲ್ಲ. ಮಧ್ಯಾಹ್ನದ ನಂತರ ಕುಟುಂಬಸ್ಥರು ಆತಂಕಗೊಂಡು ಹತ್ತಿರದ ಅಧಿಕಾರಿಗಳು, ಡ್ರೈವರ್ ಸೇರಿದಂತೆ ಅನೇಕರನ್ನು ವಿಚಾರಿಸಿದ್ದಾರೆ. ಕೋರ್ಟ್ ಒಳಗೆ ತೆರಳಿರುವ ಹಿನ್ನಲೆಯಲ್ಲಿ ಕರೆ ಸ್ವೀಕರಿಸುತ್ತಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ. ಸಂಜೆ 6 ಗಂಟೆಯ ನಂತರವೂ ಫೋನ್ ಸ್ವೀಕರಿಸದ ಹಿನ್ನಲೆಯಲ್ಲಿ ಕಂದಾಯ ಅಧಿಕಾರಿಗಳು ಫೋನ್ ಟ್ರಾಕ್ ಮಾಡಲು ಮುಂದಾಗಿದ್ದಾರೆ. ಸಂಜೆ 8 ಗಂಟೆಯ ವೇಳೆಗೆ ತಹಶೀಲ್ದಾರ್ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ.
ಮೂಲತಃ ಗದಗ ಜಿಲ್ಲೆಯವರಾದ ಜಕ್ಕಣಗೌಡರ್ ಮೊದಲ ಅವಧಿಗೆ ಮಲೆನಾಡಿನ ಪ್ರದೇಶದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದರು. ಆರಂಭದಿಂದಲೂ ಇಲ್ಲಿನ ಆಹಾರ ಮತ್ತು ತಣ್ಣನೆ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದರು. ಮಾತಿನಿಂದಲೂ ಅತ್ಯಂತ ಸೌಮ್ಯ ಸ್ವಭಾವದವರಾದ ಅವರು ಸರಳ ಸಜ್ಜನಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಜನ ಸಾಮಾನ್ಯರ ಕೆಲಸಗಳಿಗೆ 'ಆಯಿತ್ರಿ ಮಾಡೋಣಂತೆ' ಎಂಬ ತಮ್ಮೂರಿನ ಧಾಟಿಯಲ್ಲೇ ಉತ್ತರಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ನೌಕರರ ಮೆಚ್ಚುಗೆಗೆ ಪಾತ್ರರಾಗಿದ್ದ ತಹಶೀಲ್ದಾರ್ ಅಗಲಿಕೆಯಿಂದ ತಾಲ್ಲೂಕು ಆಡಳಿತದಲ್ಲಿ ಇದೀಗ ದುಃಖದ ಕಡಲು ಮಡುಗಟ್ಟಿದೆ.