15 ಲಕ್ಷ ವೆಚ್ಚದ ಅಂದಾಜು ಬಜೆಟ್
ತೀರ್ಥಹಳ್ಳಿಯ ಸಾಂಪ್ರದಾಯಿಕ ರಾಮೇಶ್ವರ ದೇವರ ದಸರಾ ಉತ್ಸವ ಅಕ್ಟೋಬರ್ 10ರಿಂದ 12ರವರೆಗೆ ನಡೆಯಲಿದೆ. ಈ ಬಾರಿ ಅದ್ದೂರಿ ಯಾಗಿ ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ ಎಂದು ದಸರಾ ಉತ್ಸವ ಸಮಿತಿ ಸಂಚಾಲಕ ಸಂದೇಶ ಜವಳಿ ತಿಳಿಸಿದರು.ಸಾಂಸ್ಕೃತಿಕ ದಸರಾ ಅಂಗವಾಗಿ ಅಂತರ ಜಿಲ್ಲಾ ಕವಿಗೋಷ್ಠಿ, ಯುವ ದಸರಾ, ಸಂಗೀತ ವೈವಿಧ್ಯ, ಸಾಧಕರಿಗೆ ಸನ್ಮಾನ, ನೃತ್ಯ ವೈಭವ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅಕ್ಟೋಬರ್ 10ರಂದು ಬೆಳಿಗ್ಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯುವ ಅಂತರ ಜಿಲ್ಲಾ ದಸರಾ ಕವಿಗೋಷ್ಠಿಯಲ್ಲಿ ಸಾಹಿತಿ ನಿಟ್ಟೂರು ಶಾಂತಾರಾಮ್ ಪ್ರಭು ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮಕ್ಕೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಹಕಾರ ನೀಡಲಿದೆ. ಸಂಜೆ ಕುಶಾವತಿಯ ನೆಹರೂ ಉದ್ಯಾನದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ರಮೇಶ್ ಆಚಾರ್ಯ ಮಂಗಳಗಾರು ಅವರು ಸಾಂಸ್ಕೃತಿಕ ದಸರಾ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಅಕ್ಟೋಬರ್ 11ರಂದು ಸ್ಥಳೀಯ ಕಲಾವಿದರಿಂದ ನೃತ್ಯ ಪ್ರದರ್ಶನ, ಅಕ್ಟೋಬರ್ 12ರಂದು ಮಧ್ಯಾಹ್ನ ಐತಿಹಾಸಿಕ, ಪೌರಾಣಿಕ, ಸಮಕಾಲಿನ ಕಥೆಗಳ ಸ್ತಬ್ಧಚಿತ್ರಗಳು, ಕರ್ನಾಟಕ, ಕೇರಳದ ಸುಪ್ರಸಿದ್ಧ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ ಎಂದರು.
ನಟ ಹುಲಿ ಕಾರ್ತಿಕ್, ಸಮಾಜ ಸೇವಕಿ ತನುಜಾ ತರುಣ್, ಪೊಲೀಸ್ ಸಿಬ್ಬಂದಿ ರಾಮಪ್ಪ, ಲೋಕೇಶ್ ಅವರನ್ನು ಸನ್ಮಾನಿಸಲಾಗುವುದು. 15 ಲಕ್ಷ ವೆಚ್ಚದಲ್ಲಿ ದಸರಾಗೆ ಸಿದ್ಧತೆ ನಡೆದಿದೆ ಎಂದು ಮಾಹಿತಿ ನೀಡಿದರು.
ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅದ್ದೂರಿ ದಸರಾ ಆಚರಿಸಲಾಗುತ್ತಿದೆ. ಸಾಹಿತ್ಯ, ಸಂಗೀತ, ನೃತ್ಯ, ಜಾನಪದ ಕಲೆಗಳಿಗೆ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸಮಿತಿ ಖಜಾಂಚಿ ಸೊಪ್ಪುಗುಡ್ಡೆ ರಾಘವೇಂದ್ರ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾನ್ ರಾಮಣ್ಣ, ಪ್ರಮುಖರಾದ ಜಯಪ್ರಕಾಶ ಶೆಟ್ಟಿ, ರತ್ನಾಕರ ಶೆಟ್ಟಿ, ಟಿ.ಜೆ. ಅನಿಲ್ ಇದ್ದರು.