ಕಾಂಗ್ರೆಸ್‌ ರೈತರ ಪೀಡಕ ಸರ್ಕಾರ

ಮೆಸ್ಕಾಂ ಮುಂದಿಟ್ಟು ಶೋಷಣೆ
ಅಡಿಕೆ ಬೆಳೆಗಾರರ ಮೇಲೆ ಸವಾರಿ
ಬಿಜೆಪಿ ರೈತ ಮೋರ್ಚಾದಿಂದ ನ.27ಕ್ಕೆ ಪ್ರತಿಭಟನೆ – ಆರಗ ಜ್ಞಾನೇಂದ್ರ

ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ಹಣಕ್ಕಾಗಿ ರೈತರ ಎಲ್ಲಾ ಸೌಲಭ್ಯ ಕಸಿದುಕೊಳ್ಳುತ್ತಿದೆ. ಬೀಕರ ಬರ, ಎಲೆಚುಕ್ಕಿ ರೋಗ ಬಾಧೆಯಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಿಕೆ ಸಂಸ್ಕರಣೆ ಯಂತ್ರಕ್ಕೆ ದುಬಾರಿ ದಂಡ ವಿಧಿಸಿ ರೈತರ ಮೇಲೆ ಸವಾರಿ ನಡೆಸುತ್ತಿದೆ. ಕಾಂಗ್ರೆಸ್‌ ಸರ್ಕಾರದ ಧೋರಣೆ ಖಂಡಿಸಿ ನವೆಂಬರ್‌ 27ರ ಸೋಮವಾರ ಬಿಜೆಪಿ ರೈತ ಮೋರ್ಚಾದಿಂದ ತಾಲ್ಲೂಕು ಕಚೇರಿ ಮುಂಭಾಗ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಸರ್ಕಾರ ರಚನೆಯಾಗಿ 6 ತಿಂಗಳು ಕಳೆದಿದ್ದರು ಟೇಕ್‌ ಆಫ್‌ ಆಗಿಲ್ಲ. ನೀರಿಗಾಗಿ ರೈತರು ಅಳವಡಿಸಿದ ಅಕ್ರಮ-ಸಕ್ರಮ ಪಂಪ್‌ ಸೆಟ್‌ಗಳನ್ನು ತೆಗೆದುಹಾಕುವ ಹುನ್ನಾರ ನಡೆಸಿದೆ. ಖಾಸಗಿ ಕಂಪನಿಗಳ ಲಾಭಕ್ಕಾಗಿ ಸೋಲರ್‌ ಅಳವಡಿಸುವ ಯೋಜನೆ ರೂಪಿಸುತ್ತಿದೆ. ಮಲೆನಾಡಿನಲ್ಲಿ ಬಿಸಿಲು ಕಾಣದಿದ್ದರೆ ರೈತರು ಏನು ಮಾಡಬೇಕು. ಜಮೀನಿಗೆ ಹೇಗೆ ನೀರಾವರಿ ಒದಗಿಸಬೇಕು ಎಂದು ಪ್ರಶ್ನಿಸಿದರು.

ಅಡಿಕೆ ಸಂಸ್ಕರಣೆಗಾಗಿ ಕೇವಲ 2 ತಿಂಗಳ ಅವಧಿಗೆ ಹೊಸ ವಿದ್ಯುತ್ ಮೀಟರ್‌ ಅಳವಡಿಸಿಕೊಳ್ಳುವುದು ಅವೈಜ್ಞಾನಿಕ. ಅಲ್ಲದೇ 2 ಹೆಚ್‌ಪಿ ವಿದ್ಯುತ್‌ ಪಡೆಯಲು 20,000 ವ್ಯಯ ಮಾಡಬೇಕು. ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯಿಂದ ಸಣ್ಣ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ರೈತರಿಗೆ ಮನೆ ಸಂಪರ್ಕದ ವಿದ್ಯುತ್‌ ಬಳಕೆಗೆ ಅವಕಾಶ ನೀಡಬೇಕು. ತಕ್ಷಣ ಸರ್ಕಾರ ಮೆಸ್ಕಾಂ ಸೇರಿದಂತೆ ಇತರೆ ವಿದ್ಯುತ್‌ ಕಂಪನಿಗಳಿಗೆ ಶೀಘ್ರ ನಿರ್ದೇಶನ ನೀಡಬೇಕು. ಇದೇ ರೀತಿ ಕಿರುಕುಳ ಮುಂದುವರೆಸಿದರೆ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಬಿಜೆಪಿ ಮುಖಂಡ ಬೇಗುವಳ್ಳಿ ಸತೀಶ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆದ್ದೂರು ನವೀನ್‌, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯ ಸಂದೇಶ ಜವಳಿ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post