ಪಿಎಸ್‌ಐ ಹಗರಣ ತನಿಖೆಗೆ ಕ್ಷೇತ್ರ ಕಾಂಗ್ರೆಸ್‌ ನಿರ್ಣಯ

ಬಡತನ ಹೆಸರೇಳಿ ರೀಯಲ್‌ ಎಸ್ಟೇಟ್‌ ಉದ್ಯಮಿಯಾಗಿದ್ದಾರೆ ಆರಗ
ಆರಗ ಚುನಾವಣೆ ಖರ್ಚು ಬರೋಬ್ಬರಿ 68 ಕೋಟಿ - ಕಿಮ್ಮನೆ ಆರೋಪ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಪಿಎಸ್‌ಐ ನೇಮಕಾತಿ ಹಗರಣವನ್ನು ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಕ್ಷೇತ್ರ ಕಾಂಗ್ರೆಸ್‌ ನಿರ್ಣಯ ಪಡೆದಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.

ಸೋಮವಾರ ಪಟ್ಟಣದ ಗಾಯತ್ರಿ ಮಂದಿರದಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿ, ವಿಧಾನಸಭಾ ಚುನಾವಣೆ ಗೆಲ್ಲಲು ಆರಗ ಜ್ಞಾನೇಂದ್ರ 68 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಮತದಾರರು ನನ್ನನ್ನು ಸೋಲಿಸಿಲ್ಲ. ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಚೆಲ್ಲಿದ ಹಣದಿಂದ ಸೋತಿದ್ದೇನೆ. ಕೆಲವು ಯುವಕರಿಗೆ ಬೈಕ್‌ ಖರೀದಿಸಲು ಮುಂಗಡ ₹ 10,000, ಕೆಲವು ಮಹಿಳಾ ಸಂಘದ ಪದಾಧಿಕಾರಿಗಳಿಗೆ  ₹ 5,000, ಕೇರಿ-ಕಾಲೋನಿಯ ಪ್ರಮುಖರಿಗೆ ₹10 ರಿಂದ ₹20 ಸಾವಿರ, ವಿವಿಧ ಸಮುದಾಯದ ನಾಯಕರಿಗೆ ವಿಶೇಷ ಪ್ಯಾಕೇಜ್‌ ನೀಡಿ ಗೆದ್ದಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. 

ಬಡತನದ ಹೆಸರಲ್ಲಿ ರಾಜಕಾರಣ ಮಾಡಿದ ಅವರು ರಕ್ತ ಸಂಬಂಧಿಗಳೊಂದಿಗೆ ಸೇರಿ ಕೋಟ್ಯಾಂತರ ರೂಪಾಯಿ ರೀಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದಾರೆ. ಭಾರೀ ಆಮಿಷಗಳಿಂದ ನಮಗೆ ಸೋಲಾಗಿದೆ. ಕಾರ್ಯಕರ್ತರು ಧೃತಿಗೆಡುವ ಅಗತ್ಯ ಇಲ್ಲ. ನಮ್ಮದೇ ಸರ್ಕಾರ ಇರುವುದರಿಂದ ತಾಳ್ಮೆಯಿಂದ ವರ್ತಿಸಬೇಕು. ಚುನಾವಣೆಯಲ್ಲಿ ಎಲ್ಲರೂ ಪ್ರಮಾಣಿಕವಾಗಿ ಕೆಲಸ ಮಾಡಿದ್ದಾರೆ. ಆಧಾರವಿಲ್ಲದೇ ಯಾರ ಮೇಲೆಯೂ ದೂಷಣೆ ಸಲ್ಲ. ಹೊಂದಾಣಿಕೆ ಮೂಲಕ ಕಾಂಗ್ರೆಸ್‌ ಬಲವರ್ಧನೆ ಮಾಡೋಣ. ಅನುಮಾನಗಳಿದ್ದರೆ ಪತ್ರದ ಮೂಲಕ ಖಾಸಗಿಯಾಗಿ ಬಗೆಹರಿಸಿಕೊಳ್ಳೋಣ. ಏನೇ ತೊಂದರೆ ಇದ್ದರು ನಾನು ನಿಮ್ಮೊಂದಿಗೆ ಜೀವ ಇರುವ ವರೆಗೆ ಇರುತ್ತೇನೆ ಎಂದರು.

‌ ತಾಲ್ಲೂಕು ಅಧಿಕಾರಿಗಳು ಜನಪರವಾಗಿ ಕೆಲಸ ಮಾಡಬೇಕು. ಬಿಜೆಪಿ ಪಕ್ಷದ ಪರವಾದ ಮನಸ್ಥಿತಿ ಇಟ್ಟು ಕೆಲಸ ಮಾಡಬಾರದು. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದು ಕಾಂಗ್ರೆಸ್‌ ಕಾರ್ಯಕರ್ತರು ಜವಾಬ್ದಾರಿಯಿಂದ ವರ್ತಿಸಬೇಕು. ಕಿಮ್ಮನೆ ನಮ್ಮೆಲ್ಲರ ನಾಯಕರಾಗಿದ್ದು ನಮಗೆ ಅವರೇ ಶಾಸಕರಾಗಿದ್ದಾರೆ. ಎಲ್ಲರೂ ಶಕ್ತಿ ಮೀರಿ ಕೆಲಸ ಮಾಡಿದ್ದು ಸೋಲಿನ ಸೂಚನೆ ಇರಲಿಲ್ಲ. ಕಡೆಯ ಎರಡು ಮೂರು ದಿನದ ಧನಶಕ್ತಿಯಿಂದ ವಾತಾವರಣ ಬದಲಾಗಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದು ಅರಣ್ಯ, ಬಗರ್‌ಹುಕುಂ, 94ಸಿ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕಿದೆ. ರಾಜ್ಯ ಸರ್ಕಾರದ ಹಂತದಲ್ಲಿ ಆಗುವ ಎಲ್ಲಾ ಪ್ರಸ್ತಾವನೆ ಸಲ್ಲಿಸುತ್ತೇವೆ. ಕ್ಷೇತ್ರದ ಶಾಸಕರು ಕೇಂದ್ರ ಸರ್ಕಾರದಿಂದ ಜಮೀನು ಮಂಜೂರಾತಿಗೆ ಅನುಮತಿ ಪಡೆದುಕೊಂಡು ಬರಬೇಕು. ಆ ಮೂಲಕ ಜನಸಾಮಾನ್ಯರ ಕಷ್ಟಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್‌.ಎಂ. ಮಂಜುನಾಥ ಗೌಡ ಹೇಳಿದರು.

ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್‌ ಮಾತನಾಡಿದರು. ವೇದಿಕೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ಪ್ರಮುಖರಾದ ಕಡ್ತೂರು ದಿನೇಶ್‌, ಜಿ.ಎಸ್.‌ ನಾರಾಯಣ ರಾವ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post