ಒಂದೇ ದಿನ ಬದ್ಧ ಎದುರಾಳಿಗಳ ನಾಮಪತ್ರ ಸಲ್ಲಿಕೆ

ಅಬ್ಬರಿಸಿದ ಆರಗ
ತಣ್ಣಗೆ ಬಂದು ಹೋದ ಕಿಮ್ಮನೆ

ಗೃಹಸಚಿವ ಆರಗ ಜ್ಞಾನೇಂದ್ರ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಿಕ್ಕಿರಿದು ಸೇರಿದ್ದ ಅವರು ಅಭಿಮಾನಿಗಳು ಪಟ್ಟಣದಲ್ಲಿ ಭಾರೀ ಹವಾ ಸೃಷ್ಟಿಸಿದರು. ಗಾಂಧಿ ಚೌಕದಿಂದ ಹಿಡಿದು ಶಿವಮೊಗ್ಗ ಬಸ್‌ ನಿಲ್ದಾಣದ ವರೆಗೆ ಕ್ಷೇತ್ರದ ವಿವಿಧ ಭಾಗಗಳಿಂದ ಬಂದಿದ್ದ ಅವರ ಅಭಿಮಾನಿಗಳು ಸುಡು ಬಿಸಿಲನ್ನು ಲೆಕ್ಕಿಸದೇ ತಮ್ಮ ನಾಯಕನ ಹಿಂದೆ ನಡೆದುಕೊಂಡು ಬಂದರು. ನೀತಿ ಸಂಹಿತೆ ಕಾರಣ ಕೇವಲ 5 ಜನ ಮಾತ್ರ ತಾಲ್ಲೂಕು ಕಚೇರಿ ಆವರಣ ಪ್ರವೇಶ ಮಾಡಬೇಕಾಗಿ ಬಂದಿದ್ದರಿಂದ 15 ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ತಾಲ್ಲೂಕು ಕಚೇರಿ ಎದುರಿನ ಒನ್‌ ವೇ ರಸ್ತೆಯಲ್ಲಿ ಜಮಾವಣೆಗೊಂಡರು.

ನೀತಿ ಸಂಹಿತೆಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೇ ಡಿಜೆ ಸಂಗೀತಕ್ಕೆ ಮನದಣಿಯೇ ಕುಣಿದು ಅತ್ಯುತ್ಸಾಹ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕೆಲಸ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಳಿಗ್ಗೆಯಿಂದಲೂ ವಾಹನ ಸಂಚಾರರಿಗೆ ಜೋರು ಮಾಡುತ್ತಿದ್ದ ಪೊಲೀಸರು ಈ ಸಂದರ್ಭದಲ್ಲಿ ತಣ್ಣಗಿದ್ದು ಪ್ರವಾಹದ ಹಾಗೆ ಕಂಡು ಬರುತ್ತಿದ್ದ ಜನ ಸಾಗರವನ್ನು ನೋಡಿ ಬೆಕ್ಕಸ ಬೆರಗಾಗಿ ವೀಕ್ಷಿಸಿ ಮೆರವಣಿಗೆ ಸೀದಾ ಬಾಳೇಬೈಲಿನ ಬಹಿರಂಗ ಸಭೆಗೆ ತೆರಳುವ ತನಕವೂ ಸುಮ್ಮನಿದ್ದು ಬಳಿಕ ಮತ್ತೆ ಸಾರ್ವಜನಿಕರೆದುರು ತಮ್ಮ ಕರ್ತವ್ಯ ನಿಷ್ಠೆಯನ್ನು ತೀರಿಸಲು ಆರಂಭಿಸಿದ್ದರು.

ಭರ್ಜರಿ ಅಭಿಮಾನಿಗಳನ್ನು ಕಂಡು ಉಲ್ಲಾಸಿತರಾಗಿದ್ದ ಆರಗ ಜ್ಞಾನೇಂದ್ರ ಆತ್ಮ ವಿಶ್ವಾಸದಿಂದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಬಿಜೆಪಿ 10ನೇ ಬಾರಿ ಸ್ಪರ್ಧೆಗೆ ಅವಕಾಶ ಕೊಟ್ಟಿದೆ. ಸ್ಫರ್ಧೆಗೆ ಅವಕಾಶ ಸಿಕ್ಕಿಲ್ಲವೆಂದಿದ್ದರು ಬೇಸರ ಇರಲಿಲ್ಲ. ಕ್ಷೇತ್ರದಲ್ಲಿ ನನನ್ನು ಸೋಲಿಸಲು ಇಬ್ಬರು ಒಟ್ಟಾಗಿದ್ದಾರೆ. ಆದರೆ ಜನರೇ ಅವರನ್ನು ಸೋಲಿಸುತ್ತಾರೆ. ಎದುರಾಳಿ ಯಾವೆಲ್ಲಾ ಪಕ್ಷ ಸುತ್ತಾಡಿದ್ದಾರೆ ಎಂದು ನನಗೆ ತಿಳಿದಿದೆ.

ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಮೆಚ್ಚಿ ಜನರು ಈ ಬಾರಿ ಬೆಂಬಲಿಸುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ 3254 ಕೋಟಿ ಮಂಜೂರಾಗಿದೆ. ಮಾಜಿ ಶಾಸಕರ ಅವಧಿಯಲ್ಲಿ ಕ್ಷೇತ್ರದ ತುಂಬ ಕಳಪೆ ಕಾಮಗಾರಿ ನಡೆದಿತ್ತು. ನನ್ನ ಅವಧಿಯಲ್ಲಿ ಎಲ್ಲಿಯೂ ಕಳಪೆ ಕಾಮಗಾರಿ ನಡೆದಿಲ್ಲ ಎಂದರು.

ಸಭೆಯ ವಿಶೇಷ ಆಕರ್ಷಣೆಯಾಗಿದ್ದ ಅಣ್ಣಮಲೈ ಮಾತನಾಡಿ, ಆರಗ ಜ್ಞಾನೇಂದ್ರ ಸೈದ್ಧಾಂತಿಕ ಬದ್ಧತೆ ಹೊಂದಿದ್ದು ವೈಯಕ್ತಿಕ ಛಾಪು ಹೊಂದಿದ್ದಾರೆ. ಕನಿಷ್ಠ 40 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ನಮಗಿದೆ. ಬಿಜೆಪಿಯ ಡಬಲ್‌ ಇಂಜಿನ್‌ ಪಕ್ಷ ಮಾಡಿದ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ರದ್ದು ಪಡಿಸುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ರಿವರ್ಸ್‌ ಇಂಜಿನ್‌ ಪಕ್ಷ ಎಂಬುದನ್ನು ಸ್ವತಃ ಅವರೇ ಘೋಷಿಸಿಕೊಂಡಿದ್ದಾರೆ ಎಂದು ಕುಟುಕಿದರು.

ವಿಶೇಷವೆಂದರೆ ಅತ್ಯಂತ ಅನಿರೀಕ್ಷಿತವಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಕೂಡ ಇಂದೇ ನಾಮಪತ್ರ ಸಲ್ಲಿಸಿದರು. ಕಿಕ್ಕಿರಿದು ನೆರೆದಿದ್ದ ಆರಗ ಜ್ಞಾನೇಂದ್ರ ಅಭಿಮಾನಿಗಳ ಎದುರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್‌ ಮುಡುಬ ರಾಘವೇಂದ್ರ, ಜೆ.ಎಸ್‌. ನಾರಾಯಣ ರಾವ್‌ ಹಾಗೂ ಆರ್‌.ಎಂ. ಮಂಜುನಾಥ ಗೌಡ ಜೊತೆಗೆ ತಾಲ್ಲೂಕು ಕಚೇರಿಗೆ ಆಗಮಿಸಿದ ಕಿಮ್ಮನೆ ನಾಮಪತ್ರ ಸಲ್ಲಿಕೆಯಾದ ಬಳಿಕ ಕೆಲಸ ಕಾಲ ಸುದ್ದಿಗಾರರೊಂದಿಗೆ ಮಾತನಾಡಿದರು.

ಆರಗರಂತೆ ಭಾರೀ ಭಾಜಾ ಭಜಂತ್ರಿಯೊಂದಿಗೆ ನಾಮಪತ್ರ ಸಲ್ಲಿಸಬಹುದು ಎಂದೇ ಸಾರ್ವಜನಿಕರು ನೀರೀಕ್ಷಿಸಿದ್ದ ಕಿಮ್ಮನೆ ರತ್ನಾಕರ್‌ ಇಷ್ಟು ಸರಳವಾಗಿ ಬಂದು ಹೋಗಿದ್ದು ಕೂಡ ಹತ್ತು ಹಲವು ಊಹಾಪೋಹ ಮತ್ತು ಚರ್ಚೆಗೆ ನಾಂದಿ ಹಾಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಿಮ್ಮನೆ ಆರಗ ಅಭಿವೃದ್ಧಿ ಎಂಬುದು ಲೊಳಲೊಟ್ಟೆ. ಅವರ ಅಭಿವೃದ್ಧಿ ಕಾಮಗಾರಿಗಳ ಕಳಪೆ ಗುಣಮಟ್ಟ ಅಭಿವೃದ್ಧಿ ಯಾವ ಕಾರಣಕ್ಕೆ ಎಲ್ಲಾ ಕಡೆ ಹೇಳುತ್ತಿವೆ. ನಮ್ಮಲ್ಲಿ ಯಾರು ಸ್ಟಾರ್‌ ಪ್ರಚಾರಕರೂ ಇಲ್ಲ. ಮಂಜುನಾಥ ಗೌಡರೇ ಸ್ಟಾರ್‌ ಪ್ರಚಾರಕರು ಎಂದು ತಮಾಶೆ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಇಂಡಿಯನ್‌ ಮನಿ ಡಾಟ್‌ ಕಾಂ ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಮೊದಲೇ ಪ್ರಯತ್ನಿಸಲಾಗಿದೆ. ಇದರ ತನಿಖೆಯಾಗಬೇಕು. ಗೃಹಸಚಿವರ ಮಗನಿಗೂ ಹಾಗೂ ಈ ಹಗರಣಕ್ಕೂ ಸಂಬಂಧವಿದ್ದರೆ ಅದು ನಿಖರವಾದ ತನಿಖೆಯಿಂದ ಹೊರಬರಬೇಕು ಎಂದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post