ರಾಜಧಾನಿಯಲ್ಲಿ ಮೊಳಗಲಿದೆ ಮಲೆನಾಡಿಗರ ಧ್ವನಿ

ಮಲೆನಾಡು ಜನಪರ ಒಕ್ಕೂಟ ಹೋರಾಟಕ್ಕೆ ಸಜ್ಜು
ಮಲೆನಾಡಿಗರನ್ನು ಉಳಿಸಿ ಹೋರಾಟಕ್ಕೆ ನೀವು ಬೆಂಬಲಿಸಿ
ಸೆ.20ರ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್
ಪಶ್ಚಿಮಘಟ್ಟದ ತಪ್ಪಲಿನ ನೆಲವಾಸಿಗಳ ಸಂಕಟ ಪರಿಹಾರಕ್ಕೆ ಆಗ್ರಹ

ಸಹ್ಯಾದ್ರಿ ಕಣಿವೆಯನ್ನು ದೂರದಿಂದ ವೀಕ್ಷಿಸುವ ಸೊಬಗು ಪ್ರವಾಸಿಗರಿಗೆ ಆನಂದ ನೋಟ. ಒಮ್ಮೆಯಾದರೂ ಇಲ್ಲಿನ ಪ್ರಾಕೃತಿಕ ರಮಣೀಯ ಸೌಂದರ್ಯ ಸವಿಯುವ ಎಲ್ಲಿಲ್ಲದ ತವಕ. ಬೋರ್ಗರೆದು ಸುರಿಯುವ ಮಳೆ, ಜರಿಗಳ ಜುಳುಜುಳು ನಾದ ಕಿವಿಗೆ ಇಂಪು. ಕಣ್ಣಿಗೆ ತಂಪು. ಆಕಾಶದೆತ್ತರಕ್ಕೆ ತಲೆಎತ್ತಿ ನಿಂತ ಮರಗಳ ಸಾಲುಗಳು ಅಬ್ಬಾ... ಎಂದೆನಿಸುವಷ್ಟು ವಿಸ್ಮಯ. ದೂರದ ಕಣಿವೆ ಕಾಡಿನ ವರ್ಣನೆ ಹೆಚ್ಚಾದಂತೆ ಕಣ್ಣಂಚಲ್ಲಿ ತುಂಬಿಕೊಳ್ಳುವ ತುಡಿತವೂ ಹೆಚ್ಚುತ್ತದೆ. ಮಲೆನಾಡು ಕಣಿವೆಯ ಸಂಸ್ಕೃತಿ ವಿವಿಧ ಭಾಷೆ, ನೆಲ, ಜಲದ ಸಂಸ್ಕಾರವನ್ನು ಜಗತ್ತಿಗೆ ಸಾರಿದೆ. ಇಲ್ಲಿನ ನೆಲವಾಸಿಗಳ ಮನೆಯ ಮುಂಭಾಗದ ತುಳಸಿಕಟ್ಟೆ ಅಥವಾ ಗಿಡವೂ ಕೂಡ ತನ್ನದಲ್ಲ ಎಂಬ ಕಟುಸತ್ಯವನ್ನು ಅರಿತುಕೊಂಡಾಗ ಕೋಪ ತಡೆಯಲು ಸಾಧ್ಯವೇ ಇಲ್ಲ. ಮಲೆಗಳನ್ನು ವರ್ಣಿಸುವವರಿಗೆ ಎಕ್ಕಡ ತೋರಿಸಬೇಕು ಎಂಬ ಒಳಗಿನ ಆತಂಕ ಎಚ್ಚರಗೊಳ್ಳುವಂತೆ ಮಾಡುತ್ತದೆ.
ಕಾಡು ಉಳಿಸುವ ವಿಶ್ವಮಟ್ಟದ ಹೋರಾಟ ಸಫಲತೆ ಪಡೆಯಬೇಕು ಅದು ಅಕ್ಷರಶಃ ಸತ್ಯ. ನಿಜವಾದ ಹೋರಾಟ ಮಾಡುವವರ ಬಗ್ಗೆ ನಮ್ಮ ಗೌರವ ಕೊಟ್ಟೆ ತೀರುತ್ತೇವೆ. ಆದರೆ ಅರಣ್ಯ ಉಳಿಸುವ ಯೋಜನೆಯ ಹಿಂದೆ ಸಂಪತ್ತು ಕಬಳಿಕೆಯ ಹುನ್ನಾರ ಇಟ್ಟುಕೊಂಡು ವಿದೇಶಿ ಹಣಕ್ಕಾಗಿ ಹಲ್ಲುಗಿಂಜುವ ಸರ್ಕಾರ, ಗುತ್ತಿಗೆದಾರ, ಬಹುರಾಷ್ಟ್ರೀಯ ಕಂಪನಿಗಳ ಒಳಗಿರುವ ಯೋಚನೆಗಳನ್ನು ಅರಿಯದ ಮೂರ್ಖರು ಮಲೆನಾಡಿಗರಲ್ಲ. ಈಗಾಗಲೇ ಲಕ್ಷಾಂತರ ಹೆಕ್ಟೇರ್ ಅರಣ್ಯ, ಸಾಗುವಳಿ ಪ್ರದೇಶ ಕಳೆದುಕೊಂಡಿರುವ ಸಹ್ಯಾದ್ರಿ ತಪ್ಪಲಿನ ವಾಸಿಗಳಿಗೆ ಹಿಂದಿರುವ ದುರಾಲೋಚನೆ ಅರ್ಥವಾಗಿದೆ ಮತ್ತು ಇಂದಿನ ಯೋಜನೆಗಳ‌ ಸ್ಥಿತಿಗತಿ ಅರ್ಥ ಮಾಡಿಸುತ್ತಿದೆ. ಯಾವ ಅರಣ್ಯ ಉಳಿಸುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆಯೋ‌ ಅದೆ ಅರಣ್ಯವನ್ನು ಮಲೆಗಳ ಕುಡಿಗಳು ಸಾವಿರಾರು ವರ್ಷಗಳಿಂದ ರಕ್ಷಿಸಿಕೊಂಡು ಬಂದಿದೆ. ಬೃಹತ್ ನಗರಗಳಲ್ಲಿ ಇದ್ದ ಕಾಡು, ಹಳ್ಳ, ಕೆರೆ, ಜರಿಗಳನ್ನು ನುಂಗಿ ನೀರು ಕುಡಿದಿರುವ ಉದ್ಯಮಿಗಳಿಗೆ ಮಲೆನಾಡು ಭಕ್ಷ್ಯ ಭೋಜನದಂತೆ ಕಂಡರೂ ತಪ್ಪಿಲ್ಲ.
ಈ ಮೇಲಿನ ಪೀಠಿಕೆ ಸ್ವಲ್ಪ ಆಯಾಸ ಅನ್ನಿಸಿದ್ದರೂ ಕೂಡ ಸತ್ಯಕ್ಕೆ ದೂರವಾಗಿಲ್ಲ. ಯಾವ ಯೋಜನೆಯಿಂದ ವಿದ್ಯುತ್ ನೀಡುತ್ತೇವೆ ಎನ್ನುತ್ತಿದ್ದರೋ ಅದರಿಂದ ಅಷ್ಟು ಪ್ರಮಾಣದ ವಿದ್ಯುತ್ ಲಭ್ಯವಿಲ್ಲ ಎಂಬ ಸತ್ಯ ಇದೀಗ ಜಗಜಾಹೀರಾಹಿದೆ. ಕಾಡು ಪ್ರಾಣಿಗಳ ವಾಸ ಸ್ಥಳ ಎನ್ನುತ್ತಿದ್ದ ಮನುಷ್ಯ ಬೃಹತ್ ನಗರದಲ್ಲಿ ವಾಸವಾಗಿದ್ದರೂ ಪ್ರಾಣಿಗಳ ಉಪಟಳ‌ ನಿಂತಿಲ್ಲ. ಇಂತಹ ಸಾವಿರಾರು ಉದಾಹರಣೆಗಳು ನಮ್ಮ ಮುಂದೆ ಇದೆ. ಇವೆಲ್ಲವನ್ನು ಮನದಲ್ಲಿ ಇಟ್ಟುಕೊಂಡು ಮಲೆನಾಡು ಜನಪರ ಒಕ್ಕೂಟ ಮಲೆನಾಡನ್ನು ಆತಂಕದಿಂದ ಉಳಿಸುವ ಯೋಜನೆ ರೂಪಿಸಿದೆ.
ಸೆಪ್ಟೆಂಬರ್ 20 ರ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿವಿಧ ಬೇಡಿಕೆ ಆಗ್ರಹಿಸಿ ಒಂದು ದಿನದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಸರ್ಕಾರ ಬೇಡಿಕೆಯನ್ನು ಶೀಘ್ರ ಪರಿಹರಿಸದೇ ಇದ್ದರೆ ಅನಿದಿಷ್ಟಾವದಿ ಮುಷ್ಕರ ನಡೆಸುವುದಾಗಿ ಒಕ್ಕೂಟ ಎಚ್ಚರಿಕೆ ನೀಡಿದೆ.
ಬೇಡಿಕೆಗಳ ಮುಖ್ಯಾಂಶ ಹೀಗಿದೆ....
  • ಅತೀ ಹೆಚ್ಚು ಮಳೆ ಬೀಳುವ ಪ್ರದೇಶವನ್ನು ವಿಶೇಷ ಕೃಷಿ ವಲಯ ಘೋಷಣೆಗೆ ಆಗ್ರಹ.
  • ಕೆಎಂಎಫ್ ಸಂಪರ್ಕದ ವಿಶೇಷ ಹಾಲಿನ ಘಟಕ ಸ್ಥಾಪನೆ.
  • ಭೂ ಪರಿವರ್ತನೆ ಆಧಾರದಲ್ಲಿ ವಿಧಾನಸಭೆ, ಲೋಕಸಭೆ ಕ್ಷೇತ್ರ ವಿಂಗಡಣೆ.
  • ಅಡಿಕೆ ಎಲೆಚುಕ್ಕೆ ರೋಗ ಸಂಶೋಧನೆ, ಲಸಿಕೆಗೆ ಬೇಡಿಕೆ.
  • ಜನಜೀವನಕ್ಕೆ ತೊಂದರೆಯಾಗಿರುವ ಯೋಜನೆ ಪ್ರಸ್ತಾವನೆ ನಿರಾಕರಣೆ.
  • ಭೂ ಮಂಜೂರಾತಿ ನಿಯಮ ಸಡಿಲಿಕೆ. 50, 53, 57 ಮತ್ತು 94ಸಿ, 94ಸಿಸಿ ದರಖಾಸ್ತು ಮಂಜೂರಾತಿಗೆ ನಿರ್ದೇಶನ.
  • ಭೂ ಮಂಜೂರಾತಿ ಕಾಲಮಿತಿ 25 ವರ್ಷಕ್ಕೆ ತಗ್ಗಿಸುವುದು.
  • ಕರ್ನಾಟಕ ಅರಣ್ಯ ಕಾಯ್ದೆ ಕಲಂ 4 ರಿಂದ 17ರವರೆಗಿನ ಪ್ರಸ್ತಾವನೆ, ನಿರ್ವಹಣೆ ಪುನರ್ ಸರ್ವೆಗೆ ಆಗ್ರಹ.
  • ಪ್ರತೀವರ್ಷ ಏಪ್ರಿಲ್ 15 ಮಲೆನಾಡು ದಿನ ಆಚರಣೆಗೆ ಬೇಡಿಕೆ.
  • ಅಡಿಕೆ ಬೆಳೆಗಾರರ ರಕ್ಷಣೆಗಾಗಿ ಗೋರಖ್ ಸಿಂಗ್ ವರದಿ ಅನುಷ್ಠಾನಕ್ಕೆ ಆಗ್ರಹ.
  • ಮಲೆನಾಡಿನ ಆಟೋ, ಗೂಡ್ಸ್ ಗಳಿಗೆ ಸಬ್ಸಿಡಿ ಇಂಧನ ಪೂರೈಕೆ.
  • ಬಂದೂಕು ಪರವಾನಿಗೆ ಸರಳೀಕರಣಕ್ಕೆ ಆಗ್ರಹ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post