ಗಮನ ಸೆಳೆದ ಮೇಲಿನ ಕುರುವಳ್ಳಿ 25ನೇ ವರ್ಷದ ಗಣೇಶೋತ್ಸವ

ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯ ಸಡಗರದ ಬೆಳ್ಳಿಹಬ್ಬ
ಸ.ಉ.ಹಿ.ಪ್ರಾ. ಶಾಲೆ ಅತಿಥಿ ಶಿಕ್ಷಕರಿಗೆ ಸಮಿತಿಯಿಂದ ಗೌರವಧನ
ಪ್ರತ್ಯಕ್ಷ, ಪರೋಕ್ಷ ಸಹಕರಿಸಿದವರಿಗೆ ಕೃತಜ್ಞತೆಗಳು -ಅಣ್ಣಪ್ಪ ಪಿ

ಶ್ರಮಿಕರೇ ಹೆಚ್ಚಾಗಿ ವಾಸಿಸುವ ಮೇಲಿನ ಕುರುವಳ್ಳಿಯಲ್ಲಿ ಒಳ್ಳೆಯ ಮುಂದಾಳತ್ವ ಹಾಗೂ ಸಂಘಟನಾ ಚಾತುರ್ಯವಿದ್ದರೆ ಸೃಜನಶೀಲ ಚಟುವಟಿಕೆಗಳಾದ ಸಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳನ್ನು ಸುಂದರವಾಗಿ ಅರ್ಥಪೂರ್ಣವಾಗಿ ನಿರ್ವಹಿಸಬಹುದು ಎಂಬುದಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ ಪಿ ಅಧ್ಯಕ್ಷತೆಯಲ್ಲಿ ಇಡೀ ಸಮಿತಿ 25ನೇ ವರ್ಷದ ಬೆಳ್ಳಿ ಮಹೋತ್ಸವ ಆಚರಿಸಿಕೊಂಡ ಶ್ರೀ ವಿದ್ಯಾ ಗಣಪತಿ ಸೇವಾಸಮಿತಿ ಉತ್ತಮ ನಿದರ್ಶನ.

25 ವರ್ಷಗಳ ಹಿಂದೆ ಆ ಭಾಗದಲ್ಲಿ ಗಣಪತಿ ಉತ್ಸವ ಹಾಗೂ ಆ ಮೂಲಕ ಸ್ಥಳೀಯ ಉತ್ಸಾಹಿಗಳನ್ನು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸುವಂತಹ ವಾತಾವರಣವೇ ಇರಲಿಲ್ಲ. ಹಾಗಾಗಿ ಎಲ್ಲಾ ಸೃಜನಾತ್ಮಕ ಚಟುವಟಿಕೆಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶವೂ ಇರುತ್ತಿರಲಿಲ್ಲ. ಆ ಕೊರತೆಯನ್ನು ನೀಗಿಸಿದ್ದು ಈ ಸಂಘದ ಸಾಧನೆ. ಈ 25 ವರ್ಷಗಳಲ್ಲಿ ಸಂಘವೂ ಅನೇಕ ಸವಾಲು ಎದುರಿಸಿ ಸ್ಥಳೀಯರ ಪ್ರೀತಿ ಪೂರ್ವಕ ಪ್ರೋತ್ಸಾಹದಿಂದ 25 ವರ್ಷಗಳ ಕಾಲ ನಿರಂತರವಾಗಿ ಗಣೇಶೋತ್ಸವ ನಡೆಸಿಕೊಂಡು ಬಂದಿರುವುದು ಮಾತ್ರವಲ್ಲದೇ ಈ ಬಾರಿಯ ಬೆಳ್ಳಿ ಹಬ್ಬದ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಿದೆ.

ಆಗಸ್ಟ್‌ 31 ರಿಂದ ಸೆಪ್ಟೆಂಬರ್‌ 8ರ ವರೆಗೆ 9 ದಿನಗಳ ನಿರಂತರ ಉತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆ ಅನೇಕ ಅರ್ಥಪೂರ್ಣ ಸೃಜನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಧಾಕೃಷ್ಣಕುಮಾರ್‌ ಮತ್ತು ಅನಿತಾ ಪ್ರವೀಣ್‌ ನೇತೃತ್ವದಲ್ಲಿ ರಂಗೋಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಹಿಳೆಯರು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಂತೆಯೇ ನಮ್ಮೂರು ಸೂಪರ್‌ ದಂಪತಿ ಅಂತಹ ಕಾರ್ಯಕ್ರಮವನ್ನು ಕೂಡ ಇದೇ ಕಲ್ಪನೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಲ್ಲದೇ, ರಕ್ತದಾನ ಪ್ರವೃತ್ತಿ ಉತ್ತೇಜಿಸುವ ಸಲುವಾಗಿ ರೋಟರಿ ಐಎಂಎ ರಕ್ತನಿಧಿ ವತಿಯಿಂದ ಏರ್ಪಡಿಸಲಾಗಿದ್ದ ಶಿಬಿರದಲ್ಲಿ 26 ಯೂನಿಟ್‌ ರಕ್ತವನ್ನು ಸಂಗ್ರಹಿಸಿ ನೀಡಲಾಗಿತ್ತು. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಅವಕಾಶ ಮಾಡುವ ಸಲುವಾಗಿ ಸೃಷ್ಟಿಕಲಾ ತಂಡಕ್ಕೆ ಅವಕಾಶ ನೀಡಲಾಗಿದ್ದು ಉದಯೋನ್ಮುಖ ಪ್ರತಿಭೆಗಳು ನೃತ್ಯ ಸಂಗೀತ ನಾಟಕದಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಇದಲ್ಲದೇ ಬಹುತೇಕ ಈಗಿನ ತಲೆಮಾರು ಮರೆತಿರುವ ಭಕ್ತಿಪ್ರಧಾನ ಪ್ರಕಾರಗಳಾದ ಹರಿಕಥೆ, ಗಮಕ, ಭಕ್ತಿಗೀತೆಗಳನ್ನು ಏರ್ಪಡಿಸಿ ಅವುಗಳನ್ನು ಮುಖ್ಯವಾಗಿ ಮಕ್ಕಳು ಹಾಗೂ ಯುವಜನತೆಗೆ ಪರಿಚಯಿಸಲಾಯಿತು.ದಾನಿಗಳು ಇಂತಹ ಕಾರ್ಯಕ್ರಮಗಳ ಜೀವಾಳ ಬಹುತೇಕ ದಾನಿಗಳಿಗೆ ಸಮಿತಿ ದೇವರ ಎದುರಲ್ಲಿಯೇ ಸ್ಮರಣಿಕೆ, ಪ್ರಸಾದ ನೀಡಿ ಗೌರವ ಸಲ್ಲಿಸಿದೆ.

ಇದಲ್ಲದೇ ರಾಜ್ಯದಲ್ಲಿಯೇ ಹೆಸರು ಮಾಡಿರುವ ಕುಂದಾಪುರದ ಮೂರು ಮುತ್ತುಗಳು ಖ್ಯಾತಿಯ ಕುಳ್ಳಪ್ಪು ತಂಡದಿಂದ ಮದುಮಗ-3 ಮದುಮಗಳೆಲ್ಲಿ ನಾಟಕ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ನೀಡಿತು. ಅಲ್ಲದೇ ಸಾಮಾಜಿಕ ಕಳಕಳಿ ಬಿಂಬಿಸುವ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು.ಹಾಗೂ ಬಡತನವನ್ನು ಮೆಟ್ಟಿ ನಿಂತು  ಚನ್ನಾಗಿ ಓದಿ ಪೊಲೀಸ್ ಆದ ಪ್ರತಿಭಾ, ಮತ್ತು ವಕೀಲನಾದ ರಿಜ್ವಾನ್ ಇವರನ್ನು ಅಭಿನಂಡಿಸಲಾಯಿತು.

ಇಡೀ ಉತ್ಸವದಲ್ಲಿ ಎದ್ದು ಕಂಡಿದ್ದು ರಾಜಬೀದಿ ಉತ್ಸವ. ಅತ್ಯಂತ ಅದ್ದೂರಿಯಾಗಿ ಆಕರ್ಷಕವಾಗಿ ಮೆರವಣಿಗೆಯನ್ನು ಏರ್ಪಡಿಸಲಾಗಿದ್ದು 200ಕ್ಕೂ ಹೆಚ್ಚು ಸ್ಥಳೀಯ ಮಹಿಳೆಯರು ತಾಲ್ಲೂಕು ಇತಿಹಾಸದಲ್ಲಿಯೇ ಮೊದಲಬಾರಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಉತ್ಸಾಹದಿಂದ ಕುಣಿತವನ್ನು ಪ್ರದರ್ಶಿಸುವ ಮೂಲಕ ಉತ್ಸವಕ್ಕೆ ಮೆರಗು ತಂದರು.  ಹುಲಿ ಕುಣಿತ, ಸ್ಥಳೀಯ ಪ್ರತಿಭೆರವಿರಾಜ್ ಮತ್ತು ತಂಡ ರೂಪಿಸಿದ ಭೂತದ ಕೋಲಾ,ಸೇರಿದಂತೆ ವೇಷಭೂಷಣ ಗಮನ ಸೆಳೆಯಿತು. ಜೊತೆಗೆ ಯುವಕರನ್ನು ಮುನ್ನಡೆಸುವ ಮೂಲಕ ಇಡೀ ಕಾರ್ಯಕ್ರಮಕ್ಕೆ ಮೆರೆಗು ಹೆಚ್ಚಿಸಿದ ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ ನೇತೃತ್ವದಲ್ಲಿ ಡಿಜೆ, ನಾಸಿಕ್‌ ಕುಣಿತಗಳ ನಡುವೆ ಯುವಕರೆಲ್ಲರೂ ಕೂಡಿ ಒಂದೇ ರೀತಿಯ ಹೆಜ್ಜೆ ಹಾಕಿದ್ದು ವಿಶೇಷವಾಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಸುದ್ದಿಯಾಯಿತು. ಅಲ್ಲದೇ ಮೆರವಣಿಗೆಯ ಸೌಂದರ್ಯ ಇಮ್ಮಡಿಗೊಳಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ.ಅಧ್ಯಕ್ಷ ಅಣ್ಣಪ್ಪ ಈಗಾಗಲೇ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ನಲ್ಲಿ ತಮ್ಮ ಸ್ಪಷ್ಟ ಜನಪರ ಕಾಳಜಿಹಾಗೂ ತರ್ಕ ಬದ್ದ ವಾಗಿ ಸಮಸ್ಯೆಗಳನ್ನು ಮಂಡಿಸುವ ರೀತಿಯಿಂದ ಹೆಸರು ಮಾಡಿದ್ದಾರೆ.

ಬೆಳ್ಳಿ ಹಬ್ಬದಂತಹ ವಿಶೇಷ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸುವ ಜವಾಬ್ದಾರಿ ತಮಗೆ ನೀಡಿದಕ್ಕಾಗಿ ಅತೀವ ಹರ್ಷ ಹಾಗೂ ಕೃತಜ್ಞತೆ ವ್ಯಕ್ತಪಡಿಸಿದ ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ ಮಾದರಿಯಾಗಿ ಬೆಳ್ಳಿಹಬ್ಬದ ಗಣೇಶೋತ್ಸವಕ್ಕೆ ಸಹಕರಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ಪ್ರತಿಯೊಬ್ಬ ದಾನಿಗಳು, ಗ್ರಾಮ ಪಂಚಾಯಿತಿ ವ್ಯವಸ್ಥೆ, ಶಾಲಾ ಮುಖ್ಯೋಪಾದ್ಯಾಯರು ಮತ್ತು ಎಸ್‌ಡಿಎಂಸಿ ಸಮಿತಿ, ಪೊಲೀಸ್‌ ಇಲಾಖೆ ಹಾಗೂ ಪತ್ರಿಕಾ ಮಾಧ್ಯಮಗಳ ಸಹಕಾರವನ್ನು ಸ್ಮರಿಸಿಕೊಂಡಿದ್ದಾರೆ. ಅಲ್ಲದೇ ಇದರ ಯಶಸ್ಸಿನ ಕೀರ್ತಿ ಸಮಿತಿಯ ಕಾರ್ಯದರ್ಶಿಗಳೂ ಸೇರಿದಂತೆ ಪ್ರತಿಯೊಬ್ಬರಿಗೂ ಸಲ್ಲುತ್ತದೆ ಎಂದಿದ್ದಾರೆ.

ಇದಲ್ಲದೇ ಮುಂದಿನ ದಿನಗಳಲ್ಲಿ ಸಮಿತಿ ವತಿಯಿಂದ ಗುಣಮಟ್ಟದ ಶಿಕ್ಷಣ ಉತ್ತೇಜಿಸುವ ಸಲುವಾಗಿ ಸ್ಥಳೀಯ, ಹಾಗೂ ಸರಕಾರಿ ಶಾಲೆಯಲ್ಲಿ ಪಾಠ ಮಾಡುತ್ತಿರುವ ಅತಿಥಿ ಶಿಕ್ಷಕರಿಗೆ ಸಮಿತಿ ವತಿಯಿಂದ ಗೌರವಧನ ನೀಡಲು ಸಮಿತಿಯೂ ಆಲೋಚಿಸುತ್ತಿದೆ ಎಂದಿದ್ದಾರೆ.





ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post