ಈಶ್ವರಪ್ಪ ರಾಜಕೀಯ ಭವಿಷ್ಯ ಕತ್ತಲಿಗೆ..?
ಯಡಿಯೂರಪ್ಪ ವಂಶಾಡಳಿತಕ್ಕೆ ವೇದಿಕೆ ಸಜ್ಜು
ಕಾಂತೇಶ್ ಕತೆ ಏನು..?
ಯಡಿಯೂರಪ್ಪ ಸೋತು ಗೆದ್ದರೇ...
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ವಿಚಾರ ಆಗಾಗ ಸದ್ದು ಮಾಡುತ್ತಿರುತ್ತದೆ. ಆದರೆ ಸಂಪುಟ ವಿಸ್ತರಣೆ ಎಂದರೆ ಜೇನುಗೂಡಿಗೆ ಕಲ್ಲು ಎಸೆದಂತೆ ಎನ್ನುವುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಬಿಜೆಪಿ ಹೈಕಮಾಂಡ್ ಆ ಗೋಜಿಗೆ ಹೋಗಿಲ್ಲ.
ಆದರೆ ಈ ನಡುವೆ ವಿಧಾನ ಪರಿಷತ್ ಗೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ. ವೈ ವಿಜಯೇಂದ್ರ ಹೆಸರನ್ನು ಕಳಿಸಿರುವುದು ರಾಜಕೀಯವಾಗಿ ಹಲವು ಬೆಳವಣಿಗೆಗೆ ಕಾರಣವಾಗುವ ನಿರೀಕ್ಷೆ ಇದೆ.
ವಾಸ್ತವವಾಗಿ ಸಿಎಂ ಹುದ್ದೆಯಿಂದ ಬಲಾತ್ಕಾರವಾಗಿ ಇಳಿಸುವಾಗ ಯಡಿಯೂರಪ್ಪಗೆ ನೀಡಿದ್ದ ಆಫರ್ ಗಳಲ್ಲಿ ಇದೂ ಒಂದಾಗಿತ್ತು. ಈಗ ಅದನ್ನು ಹೈ ಕಮಾಂಡ್ ಈಡೇರಿಸುತ್ತಿದೆ ಎನ್ನಲಾಗುತ್ತಿದೆ.
ವಿಧಾನ ಪರಿಷತ್ ಸದಸ್ಯರಾಗಿ ಮುಂದೆ ವಿಜಯೇಂದ್ರ ಮಂತ್ರಿಯಾಗುವುದು ಕೂಡ ಖಂಡಿತ.
ಅಲ್ಲಿಗೆ ರಾಜ್ಯ ಬಿಜೆಪಿ ಮೇಲೆ ಯಡಿಯೂರಪ್ಪ ಹಿಡಿತ ಕೂಡ ಅಬಾದಿತವಾಗಿ ಮುಂದುವರಿಯಲಿದೆ. ಇದರ ಜೊತೆ ವಂಶ ಪರಂಪರೆಯ ಆಡಳಿತ ಎಂದು ಕಾಂಗ್ರೆಸ್ ಅನ್ನು ಹಂಗಿಸುತ್ತಿದ್ದ ಬಿಜೆಪಿ ಯಡಿಯೂರಪ್ಪ ಈ ಅವಮಾನವನ್ನು ತಾತ್ಕಾಲಿಕವಾಗಿ ಸಹಿಸಲೇಬೇಕಿದೆ.
ಹಾಗಾದರೆ ಬಿಜೆಪಿ ಹೈ ಕಮಾಂಡ್ ಮತ್ತು ಯಡಿಯೂರಪ್ಪ ವಿರೋಧಿಗಳು ರೆಡ್ ಕಾರ್ಪೆಟ್ ಹಾಸಿ ವಿಜಯೇಂದ್ರ ಅವರನ್ನು ಸ್ವಾಗತ ಮಾಡಿದರೆ ಎಂದರೆ ಪಕ್ಷದೊಳಗೆ ವಿಭಿನ್ನ ಅಭಿಪ್ರಾಯ ಕೇಳಿ ಬರುತ್ತದೆ.
ಅದರ ಸಾರಾಂಶ ಬಿಜೆಪಿ ವಂಶಡಳಿತ ವಿರೋಧಿ ಆದರೆ ಯಡಿಯೂರಪ್ಪ ಎದುರು ಹಾಕಿಕೊಂಡರೆ ಮತ್ತೆ ಅಧಿಕಾರ ಕಷ್ಟ ಅದನ್ನು ಹಿಂದೆ ಅವರು ನಿರೂಪಿಸಿ ತೋರಿದ್ದಾರೆ ಹಾಗಾಗಿ ಏನೂ ಮಾಡುವಂತಿಲ್ಲ ಎಂಬ ಉತ್ತರ ದೊರಕುತ್ತದೆ.
ಹಾಗಾಗಿ ರಾಜ್ಯ ಬಿಜೆಪಿ ಮಾತ್ರವಲ್ಲ ಬಿಜೆಪಿ ಶಕ್ತಿ ಕೇಂದ್ರವಾದ ಶಿವಮೊಗ್ಗದಲ್ಲೂ ಮುಂದೆ ಯಡಿಯೂರಪ್ಪ ಹಿಡಿತ ಬಿಗಿಯಾಗಲಿದೆ.
ಶಿವಮೊಗ್ಗದಲ್ಲಿ ಪಾರ್ಟಿಯೊಳಗಿನ ಸಮಸ್ತ ವಿರೋಧಿಗಳ ಸೌಂಡ್ ಹಾರ್ನ್ ರೀತಿ ಕೆಲಸ ಮಾಡುತ್ತ ಯಡಿಯೂರಪ್ಪರನ್ನು ತಡವಿ ಕೊಳ್ಳಲು ಹೆದರದೆ ಮುನ್ನುಗ್ಗುತ್ತಿದ್ದ ಸಂಘ ಪರಿವಾರದ ನೆಚ್ಚಿನ ಹುರಿಯಾಳು ಈಶ್ವರಪ್ಪ ಈಗ 40%ಕಮಿಷನ್ ಆರೋಪ ಹೊತ್ತು ಸೈಡ್ ಲೈನ್ ಆಗಿದ್ದಾರೆ. ಅವರ ರಾಜೀನಾಮೆ ಪಡೆಯಲು ಸರ್ಕಾರ ಎಷ್ಟೇ ವಿಳಂಬ ಮಾಡಿದರು ನಿರಂತರವಾಗಿ ಬೆನ್ನು ಬಿದ್ದ ಟಿವಿ ಮಾಧ್ಯಮಗಳು ಇಡಿ ಬಿಜೆಪಿಯನ್ನೇ ಮುಜುಗರಕ್ಕೆ ಸಿಲುಕಿಸಿ ಈಶ್ವರಪ್ಪ ಕೆಳಗಿಳಿಸುವಲ್ಲಿ ಯಶಸ್ವಿಯಾದವು.
ಸಿಎಂ ಆಗಲಿಲ್ಲ ಎನ್ನುವುದು ಬಿಟ್ಟರೆ ಯಡಿಯೂರಪ್ಪರಿಗೆ ಸರಿಸಮನಾಗಿ ಎಲ್ಲಾ ಅಧಿಕಾರ ಅನುಭವಿಸಿರುವ ಈಶ್ವರಪ್ಪಗೆ ಯಡಿಯೂರಪ್ಪ ಅವರಂತೆ ತನ್ನ ಪುತ್ರ ಕಾಂತೇಶ್ ರನ್ನು ಅಧಿಕಾರದ ಕೇಂದ್ರ ಸ್ಥಾನಕ್ಕೆ ತರಲು ಇಲ್ಲಿವರೆಗೆ ಆಗಿಲ್ಲ.
ಕಾಂತೇಶ್ ಅವರ ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನ ಕೂಡ ಈಗಿಲ್ಲ.
ಇನ್ನು ಈಶ್ವರಪ್ಪರಿಗೆ ಸದ್ಯ ಶಿವಮೊಗ್ಗ ಬಿಟ್ಟರೆ ಮುಂದಿನ ಚುನಾವಣೆಗೆ ಬೇರೆ ಕಡೆ ನಿಂತು ಗೆಲ್ಲುವ ಸ್ಥಳವೂ ಇಲ್ಲಿವರೆಗೂ ದಕ್ಕಿಲ್ಲ ಹಾಗೆಯೇ ಕಾಂತೇಶ್ ಕೂಡ ಶಿವಮೊಗ್ಗದಲ್ಲಿಯೇ ಪ್ರಯತ್ನ ಪಡಬೇಕಾದ ಅನಿವಾರ್ಯ ಇದೆ.
ಅತ್ತ ಯಡಿಯೂರಪ್ಪ ಹಿರಿಯ ಮಗ ಬಿ.ವೈ. ರಾಘವೇಂದ್ರ ಸಂಸದ ಆಗಿ ಅಧಿಕಾರದಲ್ಲಿದ್ದರೆ ಇನ್ನೊರ್ವ ಪುತ್ರ ವಿಜಯೇಂದ್ರ ಮಂತ್ರಿಯಾಗುವ ಹೆಜ್ಜೆ ಇಡುತ್ತಿದ್ದಾರೆ. ಆದರೆ ಯಡಿಯೂರಪ್ಪ ಅವರ ಒಂದು ಕಾಲದ ಜೋಡೆತ್ತು ಈಶ್ವರಪ್ಪ ರಾಜಕೀಯ ಭವಿಷ್ಯ ಮಾತ್ರ ಆತಂಕದಲ್ಲಿದೆ.
ಒಟ್ಟಿನಲ್ಲಿ ಶಿವಮೊಗ್ಗದಲ್ಲಿ ಯಡಿಯೂರಪ್ಪ ಹೊಳೆಯುತ್ತಿದ್ದರೆ ಈಶ್ವರಪ್ಪ ಹೊಳಪು ಕಳೆದುಕೊಳ್ಳುತ್ತಿದ್ದಾರೆ.