“ಅರ್ಧ ಜ್ಞಾನೇಂದ್ರ”ರೆಂದು ಕಟು ಟೀಕೆ

 ತೀರ್ಥಹಳ್ಳಿಗೆ ಬಂದು ಗುಡುಗಿದ ಪುಷ್ಪ ಅಮರನಾಥ್
ಸಚಿವರಾದರೂ ಬೌದ್ದಿಕ ಮಟ್ಟ ಬೆಳೆದಿಲ್ಲ


ರಾಮರಾಜ್ಯದ ಪರಿಕಲ್ಪನೆಯನ್ನು ಸಾರಿದ ಮಹಾತ್ಮ ಗಾಂಧಿಜೀ ನಾಡಿನಲ್ಲಿ ಮಹಿಳೆಯರು ರಾತ್ರಿ ಓಡಾಡುವಂತಿಲ್ಲ. ಪುರುಷ ಪ್ರಧಾನ ಸಮಾಜ ಕಲ್ಪನೆಗಳು ಪ್ರಜ್ವಲಿಸುತ್ತಿದೆ. ದಲಿತ ಮಹಿಳೆ ರಾತ್ರಿ ಊಟಕ್ಕೆ ಹೋಗಿದ್ದು ತಪ್ಪಾ…? ಗೃಹಸಚಿವರ ಕ್ಷೇತ್ರದಲ್ಲೇ ಮಹಿಳೆಯರಿಗೆ ಭದ್ರತೆ ಇಲ್ಲವಾಗಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪ ಅಮರನಾಥ್‌ ಗಂಭೀರ ಆರೋಪಿಸಿದರು.

ಹಿಂದೊಮ್ಮೆ ತೀರ್ಥಹಳ್ಳಿಯ ಶಾಲಾ ಬಾಲಕಿ ನಂದಿತಾ ಸಾವಿನ ಪ್ರಕರಣವನ್ನು ತನ್ನ ರಾಜಕೀಯ ಮರುಹುಟ್ಟಿಗೆ ಬಳಸಿಕೊಂಡ ಆರಗ ಜ್ಞಾನೇಂದ್ರರಿಗೆ ಅವರ ಊರಿನ ಸಮೀಪವೇ ದಲಿತ ಮಹಿಳೆಯ ಮೇಲೆ ಆಗಿರುವ ಅತ್ಯಾಚಾರ ಯತ್ನ ಪ್ರಕರಣ ಕಾಣಿಸುತ್ತಿಲ್ಲ. ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆ ದಾಖಲಾಗಿರುವ ದಂಪತಿ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಲಿಲ್ಲ. ಸರ್ಕಾರದಿಂದ ಪರಿಹಾರವನ್ನು ನೀಡದೆ ಬಿಜೆಪಿ ಮಹಿಳೆಯರ ವಿರೋಧಿ ಎಂದು ಸಾಭೀತುಪಡಿಸಿದೆ. ಸಂತ್ರಸ್ತೆಗೆ ಕಿವಿ ಕೇಳಿಸುವುದಿಲ್ಲ, ಸರಿಯಾಗಿ ಮಾತನಾಡಲು ಬರುವುದಿಲ್ಲ ಎಂದು ಹರಿಹಾಯ್ದರು.

ಸ್ವ ಕ್ಷೇತ್ರದಲ್ಲೇ ಗೃಹಸಚಿವರು ಅಸಹಾಯಕ ಮಹಿಳೆಯರನ್ನು ರಕ್ಷಿಸಲು ವಿಫಲರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಆರಗ ಸಮೀಪ ನಡೆದ ಅತ್ಯಾಚಾರ ಯತ್ನ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ಮಹಿಳೆಯರಿಗೆ ಅಭದ್ರತೆ ಉಂಟಾಗಿದ್ದು ಇದಕ್ಕೆ ನೈತಿಕ ಹೊಣೆ ಹೊತ್ತು ಗೃಹಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಇಲ್ಲವೇ ರಾಜ್ಯಪಾಲರು ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪೊಲೀಸ್‌ ಇಲಾಖೆಗೆ ಮುಕ್ತವಾಗಿ ಕೆಲಸ ಮಾಡುವ ಸ್ವಾತಂತ್ರ್ಯ ಇಲ್ಲ. ಆಸಿಡ್‌ ದಾಳಿ ನಡೆಸಿದ ಆರೋಪಿ ಬಂಧಿಸಲು ಗೃಹ ಇಲಾಖೆಗೆ 15 ದಿನ ಬೇಕಾಯಿತು. ಸಾಕ್ಷಿಗಳನ್ನು ನಾಶಗೊಳಿಸಿದ ನಂತರ ಬಂಧಿಸಲಾಗುತ್ತಿದೆ. ತನಿಖೆ ಚುರುಕುಗೊಳಿಸಿ ವಾರದೊಳಗೆ ಪರಿಶಿಷ್ಟ ದಂಪತಿಗೆ ದೌರ್ಜನ್ಯ ಎಸಗಿರುವ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಹಿಳಾ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಭಾವತಿ ಶಾಮಣ್ಣ, ಸುಜಾತ, ತಾಲ್ಲೂಕು ಅಧ್ಯಕ್ಷೆ ಜಯಾ ಜಿ. ರಾವ್‌, ಪ್ರಮುಖರಾದ ವಿಜಯಲಕ್ಷ್ಮೀ, ಸ್ಪೆನೋಮಾರ್ಟೀಸ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post