ವೈನ್ ಶಾಪ್ ಸಿಸಿಟಿವಿ ಕ್ಯಾಮೆರಾ ಏನು ಹೇಳುತ್ತೆ..!

ಆರಗ ಮಹಿಳೆ ಅತ್ಯಾಚಾರ ಪ್ರಕರಣ

ವೈನ್ ಶಾಪ್ ಸಿಸಿಟಿವಿ ಕ್ಯಾಮೆರಾ ಏನು ಹೇಳುತ್ತೆ..!

ರಾಜೀ ಸಂಧಾನದಲ್ಲಿ ಪ್ರಕರಣ ಮುಕ್ತಾಯವಾಗಿತ್ತೇ..?

ಪೊಲೀಸರ ತನಿಖೆ ಎತ್ತ ಸಾಗಿದೆ

ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿ ಮೇ 9ರಂದು ರಾತ್ರಿ ದಲಿತ ಮಹಿಳೆ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ದೂರು ಈಗ ಹಲವು ಆಯಾಮದಲ್ಲಿ ಬಿರುಸಿನ ಚರ್ಚೆಗೀಡಾಗಿದೆ. ಒಂದೆಡೆ ಮಹಿಳೆ ಮೇಲೆ ಅತ್ಯಾಚಾರದ ಪ್ರಯತ್ನ ನಿಜ ಎಂದರೆ ಇನ್ನೊಂದೆಡೆ ಸುಳ್ಳು ಎಂಬ ಸಂಗತಿ ಬಹಿರಂಗವಾಗುತ್ತಿದೆ. ಇದಕ್ಕೆ ಕಾರಣವಾಗಿರುವುದು ಆರಗ ವೈನ್‌ ಶಾಪ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾ.

ಮಹಿಳೆ, ಆಕೆಯ ಪತಿ ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿರುವುದು ಪ್ರಕರಣದ ತನಿಖೆ ಕುತೂಹಲಕಾರಿಯತ್ತ ಸಾಗುವಂತೆ ಮಾಡಿದೆ. ಪೊಲೀಸರು ಇದೀಗ ಪ್ರಕರಣವನ್ನು ಬೇದಿಸಲು ಹರಸಾಹಸ ಮಾಡುತ್ತಿದ್ದು ಮಹಿಳೆಯ ದೂರಿನ ಹಿನ್ನಲೆಯಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಸಂಪತ್‌, ಆದರ್ಶನನ್ನು ಆರಗ ಸಮೀದ ಗ್ರಾಮದಲ್ಲಿ ಸೆರೆಹಿಡಿಯಲಾಗಿದೆ.

ಈ ನಡುವೆ ಗೃಹಸಚಿವ ಆರಗ ಜ್ಞಾನೇಂದ್ರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪರಿಣಾಮ ಗುರುವಾರ ಬೆಳಿಗ್ಗೆ ಎಸ್.ಪಿ. ಲಕ್ಷ್ಮೀಪ್ರಸಾದ್‌ ತೀರ್ಥಹಳ್ಳಿಯಲ್ಲೇ ಠಿಕಾಣಿ ಹೂಡಿ ಪ್ರಕರಣದ ತನಿಖೆಗೆ ನಿಗಾ ವಹಿಸಿದ್ದಾರೆ. ಪ್ರಕರಣದ ಕೇಂದ್ರ ಬಿಂದುವಾದ ಮಹಿಳೆಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಂಡಿದ್ದಾರೆ. ಸಿಸಿಟಿವಿಯಲ್ಲಿನ ದೃಶ್ಯಾವಳಿ ಅತ್ಯಾಚಾರ ಪ್ರಕರಣದ ದೂರಿನ ತನಿಖೆಗೆ ಪ್ರಮುಖ ಅಸ್ತ್ರವಾಗಿ ಪೊಲೀಸರು ಬಳಸಲು ಮುಂದಾಗಿದ್ದಾರೆ. ಸಿಸಿಟಿವಿ ದೃಶ್ಯವೇ ತನಿಖೆಗೆ ಅಂತಿಮವಾಗುವುದೇ ಎಂಬ ಪ್ರಶ್ನೆಯೂ ಸಹಜವಾಗಿ ಮೂಡಿದೆ. ಸಿಸಿಟಿವಿ ದೃಶ್ಯದಲ್ಲಿ ದಂಪತಿ ಕಾಣಿಸಿದ ನಂತರ ಅತ್ಯಾಚಾರದ ಪ್ರಯತ್ನ ನಡೆದಿದೆ ಎಂಬ ವಿಷಯವಾಗಿ ಈಗ ತನಿಖೆ ಸಾಗಿದರೂ ಅಚ್ಚರಿ ಇಲ್ಲ.

ಕೊಂಡ್ಲು ಕೊಪ್ಪದಲ್ಲಿ ನಡೆದಿದ್ದೇನು..?

ಸಂಕದಹೊಳೆ ಸಮೀಪದ ಕೊಂಡ್ಲುಕೊಪ್ಪದಲ್ಲಿ ಇದ್ದ ಬಂಧುಗಳ ಮನೆಗೆ ದಂಪತಿ ಇಬ್ಬರು ತೆರಳಿದ್ದಾಗ ಏನಾದರೂ ಗಲಾಟೆ ನಡೆದಿತ್ತೇ…? ಈ ಬಗ್ಗೆ ಒಂದು ಅನುಮಾನ ನಿಧಾನವಾಗಿ ಹೊರಬರುತ್ತಿದೆ. ಇಲ್ಲಿ ಗಲಾಟೆ ನಡೆದು ದಂಪತಿ ನಡೆದುಕೊಂಡು ಆರಗ ಬಂದು ವೈನ್‌ ಶಾಪಿಗೆ ತೆರಳಿದ್ದರು. ಅಲ್ಲಿದ್ದ ಕೆಲವರು ಪತ್ನಿಯನ್ನು ವೈನ್‌ ಶಾಪಿಗೆ ಕರೆದುಕೊಂಡು ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಹಿಳೆ ಈ ಜಾಗಕ್ಕೆ ಬರಬಾರದು ಎಂದು ಕಿವಿ ಮಾತು ಹೇಳಿದ್ದರು. ಇದಕ್ಕೆ ಸಿಟ್ಟಾದ ಮಹಿಳೆಯ ಪತಿ ಬ್ರಾಂಡಿ ಶಾಪ್‌ ನಲ್ಲಿ ಲೇಡೀಸ್‌ ಬರಬಾರದು ಅಂತ ಬೋರ್ಡ್‌ ಹಾಕಿದ್ದಾರಾ…! ಎಂದು ತಕರಾರು ತೆಗೆದಿದ್ದ ಎಂಬ ಸಂಗತಿ ಬಹಿರಂಗವಾಗುತ್ತಿರುವುದು ಪ್ರಕರಣದ ಟ್ವಿಸ್ಟ್‌ ಗೆ ಕಾರಣವಾಗುತ್ತಿದೆ. ಕೊಂಡ್ಲುಕೊಪ್ಪದಲ್ಲಿ ನಡೆದ ಘಟನೆ ಕುರಿತು ಪೊಲೀಸರ ತನಿಖೆಯ ದೃಷ್ಠಿ ಹರಿದಿದೆ.

ಮಹಿಳೆ ವಿವಸ್ತ್ರ ನಿಜವೇ…?

ಅತ್ಯಾಚಾರ ದೂರಿನ ಪ್ರಕರಣ ಆರಗ ಸೇರಿದಂತೆ ಸುತ್ತಮುತ್ತ ಗ್ರಾಮದಲ್ಲಿ ಸಂಚಲನ ಮೂಡಿಸಿದ್ದು ಸಾರ್ವಜನಿಕವಾಗಿ ಅನೇಕ ಅಭಿಪ್ರಾಯಗಳಿಗೂ ಕಾರಣವಾಗಿದೆ. ಮಹಿಳೆ ಪತಿ ಮೇಲೆ ಹಲ್ಲೆ ನಡೆಸಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಆರೋಪಿಗಳು ಪ್ರಯತ್ನಿಸಿದರು ಎಂಬ ಸಂಗತಿ ಗ್ರಾಮಗಳ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ದಂಪತಿ ಕಾಣಿಸಿಕೊಂಡ ನಂತರದ 20 ನಿಮಿಷದ ಅವಧಿಯಲ್ಲಿ ನಡೆದ ಘಟನೆ ಏನು ಎಂಬುದು ಬೆಳಕಿಗೆ ಬರಬೇಕಿದೆ. ಸ್ಥಳೀಯವಾಗಿ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪ್ರಕರಣ ನಿಗೂಢವಾಗುತ್ತಿದ್ದು ಪೊಲೀಸರ ತನಿಖೆ ಎತ್ತ ಸಾಗುತ್ತಿದೆ ಎಂಬ ಕುತೂಹಲವು ವ್ಯಕ್ತವಾಗುವಂತೆ ಮಾಡಿದೆ. ಅತ್ಯಾಚಾರ ಪ್ರಯತ್ನದ ಘಟನೆಯನ್ನು ಕೆಲವರು ಹತ್ತಿರದಿಂದ ಬಲ್ಲವರಾಗಿದ್ದು ಪೊಲೀಸರ ತನಿಖೆಗೆ ಇವರುಗಳು ಸಹಕರಿಸಿದರೆ ಪ್ರಕರಣದ ಪೂರ್ಣ ಹೂರಣ ಬಹಿರಂಗವಾಗುವುದರಲ್ಲಿ ಅನುಮಾನವಿಲ್ಲ.

ಪ್ರಕರಣ ರಾಜೀಯಾಗಿತ್ತೇ..?

ಆರಗ ವೈನ್‌ ಶಾಪ್‌ ಬಳಿ ನಡೆದ ಗಲಾಟೆ, ನಂತರ ದಂಪತಿ ಮನೆಗೆ ತೆರಳುವಾಗ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧ ರಾಜೀಯಾಗಿತ್ತೇ ಎಂಬ ವಿಷಯ ಕೂಡ ಗ್ರಾಮದಲ್ಲಿ ಚರ್ಚೆಗೊಳಗಾಗಿದೆ. ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಲು ಅನೇಕರು ಮುತುವರ್ಜಿ ವಹಿಸಿದ್ದರು ಎಂಬ ಸಂಗತಿ ಹಲವು ಕುತೂಹಲಗಳನ್ನು ಹುಟ್ಟು ಹಾಕಿದೆ. ಮಹಿಳೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಪ್ರಯತ್ನಿಸಿದರು ಎಂಬ ದೂರಿನ ಹಿಂದೆ ಅನೇಕ ರಹಸ್ಯ ಸಂಗತಿಗಳು ಇದ್ದಂತಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post