ಮರೆಯಾದ ಹಿರಿಯರ ಕುರಿತು ಶಾಸಕ ಆರಗ ಜ್ಞಾನೇಂದ್ರ ಭಾವುಕ ಪ್ರತಿಕ್ರಿಯೆ...
ದೀರ್ಘಕಾಲದ ಹಿರಿಯ ಸ್ನೇಹಿತರಾಗಿ ನನ್ನ ಸಾರ್ವಜನಿಕ ಬದುಕಿನ ಮಾರ್ಗದರ್ಶಕರಾಗಿ, ನಮ್ಮ ಸಂಘಟನೆಯ ಮತ್ತು ನಮ್ಮ ಚುನಾವಣೆಗಳ ಆರ್ಥಿಕ ಶಕ್ತಿಯ ಪ್ರೇರಕರಾಗಿ 50 ವರ್ಷಗಳಿಗೂ ಹೆಚ್ಚು ಕಾಲ ಪೋಷಿಸಿದ ನಗರವಳ್ಳಿ ಶಂಕರ್ ನಾರಾಯಣ ಐತಾಳರ ನಿಧನ ನಮ್ಮ ಸಂಘಟನೆಗೆ ಮಾತ್ರವಲ್ಲ ತೀರ್ಥಹಳ್ಳಿ ತಾಲೂಕಿನ ಸಾಮಾಜಿಕ ಬದುಕಿಗೆ ಆದ ಹೆಚ್ಚು ನಷ್ಟ.
ವಯಸ್ಸಿನಲ್ಲಿ ಹಿರಿಯರಾದರು ನನ್ನೊಂದಿಗೆ ಅತ್ಯಂತ ಆತ್ಮೀಯರಾಗಿ ಹೆಚ್ಚು ಸಲಿಗೆ ನಮ್ಮ ನಡುವೆ ಇತ್ತು,ನಮ್ಮ ಪಕ್ಷದ ಸುಧೀರ್ಘಾವಧಿಯ ಖಜಾಂಚಿಗಳಾಗಿದ್ದರು,ನನ್ನ ಸಾರ್ವಜನಿಕ ಬದುಕಿನ ಆರಂಭದ ಹತ್ತಾರು ವರ್ಷಗಳಲ್ಲಿ ನನ್ನ ಓಡಾಟಕ್ಕೆ ಐತಾಳರದ್ದೆ ಕಾರು, ಐತಾಳರೇ ಸಾರಥಿ, ಐತಾಳರದ್ದೇ ದುಡ್ಡಿನ ಜೊತೆಗೆ ನಿರಂತರ ಐದು ದಶಕಗಳಲ್ಲಿ ನನ್ನೆಲ್ಲಾ ಆಗುಹೋಗುಗಳಲ್ಲಿ ಅವರಿದ್ದರು.
ತೀರ್ಥಹಳ್ಳಿ ತಾಲೂಕಿನಲ್ಲಿ ಪಕ್ಷಾತೀತವಾಗಿ ಗೌರವಾದರವನ್ನು ಹೊಂದಿದ್ದ ಐತಾಳರು ಹಲವು ಸಂಘ ಸಂಸ್ಥೆಗಳಲ್ಲಿ ಈ ಇಳಿ ವಯಸ್ಸಿನಲ್ಲೂ ಸಕ್ರಿಯ ರಾಗಿದ್ದರು,ಅವರ ಡ್ರೈವಿಂಗ್ ಬಗ್ಗೆ ಅವರಿಗೆಷ್ಟು ವಿಶ್ವಾಸವಿತ್ತೆoದೆರೆ ಈಗಲೂ ನಿನ್ನೆ ಮೊನ್ನೆಯೂ ಅವರು ಕಾರು ಮತ್ತು ಬೈಕನ್ನ ಚಲಾಯಿಸಿರಬಹುದು, ತೀರ್ಥಹಳ್ಳಿಗೆ ರಾತ್ರಿಯಲ್ಲೂ ಕಾರು ಚಾಲನೆ ಮಾಡಿಕೊಂಡು ಈಗಲೂ ಬರುತ್ತಿದ್ದರು, ತೀರ್ಥಹಳ್ಳಿ ತಾಲೂಕಿನಲ್ಲಿ ಬೆರಳೆಣಿಕೆಯ ಜನರಲ್ಲಿ ಕಾರು ಇದ್ದ ದಿನಗಳಲ್ಲಿ ಐತಾಳರದ್ದು ಕಾರಿತ್ತು,ಅವರ ಚಾಲನಾ ಪರವಾನಗಿ ಮೂರು ಬಾರಿಯಾದರೂ ರಿನಿವಲ್ ಆಗಿರಬಹುದು ಬೈಕ್ ಮತ್ತು ಕಾರು ಎಷ್ಟೇ ಹೇಳಿದರೂ ಕೂಡಾ ವೇಗದ ಚಾಲನೆಯನ್ನು ಕಡಿಮೆ ಮಾಡಿಕೊಂಡವರೇ ಅಲ್ಲಾ.
ನನ್ನ ಪ್ರವಾಸಗಳಲ್ಲಿ ನನ್ನೊಂದಿಗೆ ಹತ್ತಾರು ಸಾವಿರ ಕಿಲೋಮೀಟರ್ಗಳು ಐತಾಳರಿದ್ದರು,ಆ ಒಡನಾಟ ಆ ಬಾಂಧವ್ಯಕ್ಕೆ ಶಬ್ದಗಳಲ್ಲಿ ವಿಶ್ಲೇಷಣೆ ಅಸಾಧ್ಯ, ಅವರಿಗೇನು ಅಪೇಕ್ಷೆಗಳಿಲ್ಲದೆ ಇದ್ದರೂ ನಮ್ಮ ಬೆಳವಣಿಗೆಯನ್ನು ನೋಡಿ ಪಕ್ಷದ ಬೆಳವಣಿಗೆಯನ್ನು ನೋಡಿ ಹೆಚ್ಚು ಸಂತಸ ಪಡುತ್ತಿದ್ದ ಐತಾಳರು ನಮ್ಮ ಕ್ಷೇತ್ರದಲ್ಲಿ ರಾಷ್ಟ್ರೀಯತೆಯ ಬೇರು ಬಿತ್ತಿದವರಾಗಿ ಅದು ಹೆಮ್ಮರವಾಗಿ ವೈಭವದ ದಿನಗಳನ್ನು ಕಂಡಾಗಲು ನಮ್ಮೊಂದಿಗೆ ಇದ್ದರು ಎನ್ನುವುದು ಸಮಾಧಾನದ ವಿಚಾರವಾಗಿದೆ.
ನನ್ನ ಗೆಲುವಿನ ಎಲ್ಲಾ ಚುನಾವಣೆಗಳ ದಿನ ಬೂತ್ ಭೇಟಿ ಮಾಡಿ ಮಧ್ಯಾಹ್ನ ಊಟಕ್ಕೆ ಐತಾಳರ ಮನೆಯ ತಂಬೂಳಿ ಊಟಕ್ಕೆ ಹೋಗುವುದೇ ಹೆಚ್ಚು ನನಗೆ ಪ್ರಿಯವಾಗಿತ್ತು ನೂರಾರು ಊಟಗಳು ಅವರ ಮನೆಯಲ್ಲಾಗಿದೆ, ಸದಾ ತಮ್ಮ ಮನೆಯನ್ನು ದಾಸೋಹ ಮತ್ತು ಅತಿಥಿ ಸತ್ಕಾರಕ್ಕೆ ತೆರದಿಟ್ಟಿದ್ದ ಐತಾಳರು ನನ್ನುಸುರಿನ ಕೊನೆಯವರೆಗೂ ನನ್ನ ಸ್ಮೃತಿ ಪಟಾಲದಲ್ಲಿ ಅಜರಾಮರಾಮರವಾಗಿ ಉಳಿಯುತ್ತಾರೆ.
ಚುನಾವಣೆಗಳ ವೆಚ್ಚಕ್ಕೆ ಅವರ ಹಣ ಮಾತ್ರವಲ್ಲ ತಿಂಗಳುಗಳ ಕಾಲ ಓಡಾಡಿ
ಹಣ ಸಂಗ್ರಹ, ಮನೆ ಮನೆ ಬೇಟಿ ಅವರೇ ಸ್ಪರ್ಧಾಳು ಎನ್ನುವಷ್ಟು ಉತ್ಸಾಹ ತೋರಿದ ಮೇಲೂ
ನೂರಾರು ಕಾರ್ಯಕರ್ತರನ್ನು ಬೆಳಸಿ ಪೋಷಿಸಿ ತನು ಮನ ಧನವನ್ನು ರಾಷ್ಟ್ರ ಕಾರ್ಯಕ್ಕೆ ಸಮರ್ಪಸಿದ್ದಾರೆ,ಐತಾಳರ ಬಗ್ಗೆ
ಬರೆದಷ್ಟು ಇದೆ ಕಂಬನಿಯ ನೀರು ಕಣ್ಣನ್ನು ಮಂಜು ಮಾಡುತ್ತಿವೆ ಭಾರವಾದ ಮನಸು ಹೃದಯದೊಂದಿಗೆ
ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಭಾವುಕರಾಗಿ ಸಂತಾಪ
ಸಲ್ಲಿಸಿದ್ದಾರೆ.
