ಪ್ರಶಸ್ತಿಗೆ ಭಾಜನರಾದ ಈಚಲಬೈಲು ಶಶಿಧರ್, ಕಂಪದಗದ್ದೆ ಸುರೇಶ್
ತೀರ್ಥಹಳ್ಳಿ ತಾಲ್ಲೂಕಿನ ಉದಯೋನ್ಮುಖ ಸಹಕಾರಿಗಳಾದ ಈಚಲಬೈಲು ಶಶಿಧರ್ ಹಾಗೂ ಕಂಪದಗದ್ದೆ ಸುರೇಶ್ ಅವರಿಗೆ ಸಹಕಾರಿ ಶ್ರೇಷ್ಟ ಪ್ರಶಸ್ತಿ ದೊರಕಿದೆ.
ಈಚಲಬೈಲು ಶಶಿಧರ್ ಮಾಗರವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗಮನ ಸೆಳೆಯುವಂತೆ ಕಾರ್ಯನಿರ್ವಹಿಸಿದ್ದಾರೆ. 2012ರಲ್ಲಿ ಮೊದಲ ಬಾರಿ ಸಂಘದ ಚುಕ್ಕಾಣಿ ಹಿಡಿದ ಅವರು ಮುಂದೆ 2021 ರಿಂದ ಇಲ್ಲಿಯತನಕ ಒಟ್ಟಾರೆ 4 ಅವಧಿಗೆ ಅಧ್ಯಕ್ಷರಾಗಿದ್ದಾರೆ. ಬಹುತೇಕ ಎಲ್ಲಾ ಅವಧಿಗಳಲ್ಲೂ ಅವರ ಸಿಂಡಿಕೇಟ್ ಭಾರಿ ಬಹುಮತದೊಂದಿಗೆ ಆಯ್ಕೆಯಾಗಿರುವುದು ಅವರ ದಕ್ಷತೆ ಹಾಗೂ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ಇತ್ತೀಚೆಗಷ್ಟೆ ಸಂಘವು ತನ್ನ 50ನೇ ವರ್ಷದ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಅರ್ಥ ಪೂರ್ಣವಾಗಿ ಆಚರಿಸಿಕೊಂಡಿದ್ದು ಈ ಸಂದರ್ಭಕ್ಕೆ ಸರಿಯಾಗಿ ಅವರಿಗೆ ಸಹಕಾರಿ ಶ್ರೇಷ್ಟ ಪ್ರಶಸ್ತಿ ದೊರೆತಿರುವುದು ಸಂಭ್ರಮಕ್ಕೆ ಕಾರಣವಾಗಿದೆ.
ಕಂಪದಗದ್ದೆ ಸುರೇಶ್ ಶತಮಾನ ಕಂಡಿರುವ ಕೋಣಂದೂರು ಪ್ರಾಥಮಿಕ ಪತ್ತಿನ ಸಹಕಾರ ಸಂಘಕ್ಕೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಹಕಾರ ರಂಗದ ಚಟುವಟಿಕೆಗಳ ಜೊತೆಗೆ ಹತ್ತು ಹಲವು ಆಸಕ್ತಿಯುಳ್ಳ ಸುರೇಶ್ ಕಂಪದಗದ್ದೆ ಆಗ್ರೋಟೆಕ್ ಎಂಬ ವಿಶಿಷ್ಟ ರೀತಿಯಲ್ಲಿ ಅಡಿಕೆ ಸುಲಿಯುವ ಯಂತ್ರದ ತಯಾರಿಕ ಘಟಕವನ್ನು ಸ್ಥಾಪಿಸಿ ಜನಪ್ರಿಯರಾಗಿದ್ದಾರೆ. ಇದರ ಜೊತೆಗೆ ಕೋಣಂದೂರು ಭಾಗದಲ್ಲಿ ಕೃಷಿ ಉಪಕರಣಗಳ ಮಾರಾಟ ಮಾಡುತ್ತಿರುವ ಅವರು ಸಂಘದ ಅಧ್ಯಕ್ಷರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ನಡೆದ 73ನೇ ರಾಜ್ಯ ಸಹಕಾರಿ ಸಪ್ತಾಹದಲ್ಲಿ ಈ ಪ್ರಶಸ್ತಿಗಳನ್ನು ಇವರಿಬ್ಬರಿಗೂ ನೀಡಲಾಗಿದ್ದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದ್ದರು. ಸಹಕಾರ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಗಣ್ಯರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.


