ವೈವಿಧ್ಯಮಯ ಪ್ರಸ್ತುತಿ, ಆಕರ್ಷಕ ಹಿಮ್ಮೇಳ
ಕಾರ್ಯಕ್ರಮಕ್ಕೆ ಆಗಮಿಸಿ ಘನತೆ ಹೆಚ್ಚಿಸಿದ ಶ್ರೀ ಶ್ರೀ ನಿರ್ಮಲಾನಂದನಾಥ ಶ್ರೀಗಳು
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖಾ ಮಠದ 36ನೇ ವಾರ್ಷಿಕೋತ್ಸವದ ಪ್ರಯುಕ್ತ ಆರಗದಲ್ಲಿ ಬುಧವಾರ ಸಂಜೆ 5 ಗಂಟೆಯಿಂದ
ಆರಂಭಗೊಂಡ ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಕೀರ್ತನೋತ್ಸವ ಅಪಾರ ಯಶಸ್ಸು
ಕಂಡಿತು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷರಾದ ಶ್ರೀ ಶ್ರೀ
ನಿರ್ಮಲಾನಂದನಾಥ ಮಹಾಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀ ಪ್ರಸನ್ನನಾಥ
ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕೀರ್ತನೋತ್ಸವದ ನೇತೃತ್ವ ವಹಿಸಿದ್ದ ಶ್ರೀ ಶ್ರೀ ಸಾಯಿಕೀರ್ತಿನಾಥ
ಸ್ವಾಮೀಜಿ ಹಲವು ಕೀರ್ತನೆಗಳನ್ನು ಅತ್ಯುತ್ತಮವಾಗಿ ಪ್ರಸ್ತುತಪಡಿಸುವ ಮೂಲಕ ಸಭಿಕರ ಗಮನ ಸೆಳೆದರು.
ಖ್ಯಾತ ಹಿಂದೂಸ್ಥಾನಿ ಸಂಗೀತಗಾರ ವಿದ್ವಾನ್ ಹುಮಾಯುನ್ ಹರ್ಲಾಪುರ ಅದ್ಬುತವಾಗಿ ಕೀರ್ತನೆಗಳನ್ನು ಹಾಡುವ ಮೂಲಕ ಶೋತೃಗಳಲ್ಲದೇ ವೇದಿಕೆಯ ಮುಂಭಾಗದಲ್ಲಿದ್ದ
ಶ್ರೀಗಳಿಬ್ಬರೂ ತಲೆದೂಗಿ ಗಾಯನವನ್ನು ಮನದುಂಬಿಕೊಂಡರು.
ಇವರ ಜೊತೆಗೆ ವಿದ್ವಾನ್
ನೌಶಾದ್ ಹರ್ಲಾಪುರ, ವಿದ್ವಾನ್
ನಿಷಾದ್ ಹರ್ಲಾಪುರ ವೈವಿಧ್ಯಮಯ ಕೀರ್ತನೆಗಳನ್ನು
ಸಾದರಪಡಿಸಿದರು. ಸಹಗಾಯನದಲ್ಲಿ ವಿದ್ವಾನ್ ರಘುರಾಮ್ ಮೈಸೂರು, ವಿದ್ವಾನ್ ಅಂಜಿನಪ್ಪ ಬೆಂಗಳೂರು ಹಾಗೂ ಶ್ರೀ
ರವಿ ಆದಿಚುಂಚನಗಿರಿ ಸಾಥ್ ನೀಡಿದರು.
ಹಿಮ್ಮೇಳದಲ್ಲಿ ಕೊಳಲು ವಿದ್ವಾನ್ ಆನಂದಾಮೃತ, ಮ್ಯಾಂಡೊಲಿನ್ ವಿದ್ವಾನ್ ಪ್ರಸನ್ನ
ಮೈಸೂರು, ಮೃದಂಗ ವಿದ್ವಾನ್
ಎ.ಎಸ್.ಎನ್.ಸ್ವಾಮಿ, ಘಟಂ ವಿದ್ವಾನ್
ಶ್ರೀಶೈಲ, ಮೋರ್ಸಿಂಗ್ ವಿದ್ವಾನ್
ಲಕ್ಷ್ಮೀನಾರಾಯಣ, ಖಂಜಿರ ವಿದ್ವಾನ್
ಆರ್. ಕಾರ್ತಿಕ್, ತಬಲಾ ವಿದ್ವಾನ್
ಶಶಾಂಕ್, ಮೃದಂಗ ಮಾಸ್ಟರ್
ಚಿರಾಗ್ ಸಹಕರಿಸಿದರು.
ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಶೋತೃಗಳು ಎಲ್ಲಾ ಕಲಾವಿದರ ಗೀತೆಗಳನ್ನು ಹೃತ್ಪೂರ್ವಕವಾಗಿ
ಆನಂದಿಸಿದರು. ಆದರೆ ಧ್ವನಿವರ್ದಕದ ಕಳಪೆ ಗುಣಮಟ್ಟ ಕೊಂಚಮಟ್ಟಿನ ಕಡಿಮೆ ಸ್ವರಸ್ಥಾಯಿ ಹೊಂದಿರುವ ಗಾಯಕರು
ಹಾಡುವಾಗ ಪದೇ ಪದೇ ತೊಂದರೆ ನೀಡುತ್ತಿತ್ತಲ್ಲದೇ ಸ್ಪಷ್ಟವಾಗಿ ಸಂಗೀತವನ್ನು ಆಸ್ವಾದಿಸುವುದಕ್ಕೆ ಅಡ್ಡಿಯುಂಟು
ಮಾಡುತ್ತಿತ್ತು.
ಶಿವಮೊಗ್ಗ ಶಾಸಕ ಚನ್ನಬಸಪ್ಪ, ಕರ್ನಾಟಕ ರಾಜ್ಯ
ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ
ಸಿರಿಬೈಲು ಧರ್ಮೇಶ್ ಮುಂತಾದವರು ಇದ್ದರು.
