ಮಾಗರವಳ್ಳಿ ಸೊಸೈಟಿಯ ಸುವರ್ಣ ಮಹೋತ್ಸವ ಯಶಸ್ವಿ

ಮಾಗರವಳ್ಳಿ ಸಹಕಾರ ಸಂಘ ವಿಸ್ಮಯದ ರೂಪದಲ್ಲಿ ಬೆಳೆದಿದೆ
ನಬಾರ್ಡ್‌ ಸಾಲಕ್ಕೆ ಡಿಸಿಸಿ ಬ್ಯಾಂಕ್‌ 9% ಬಡ್ಡಿ ಕಟ್ಟಬೇಕು– ಆರ್‌ಎಂಎಂ
ನಿರ್ದೇಶಕರ ವೈಯಕ್ತಿಕ ಹಣದಲ್ಲಿ ಇಂಟರ್‌ ಲಾಕ್‌ ಹಾಕಿಸಿದ ಆಡಳಿತ ಮಂಡಳಿ

ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘಗಳಲ್ಲಿ ಒಂದಾದ ತೀರ್ಥಹಳ್ಳಿಯ ಮಾಗರವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಸ್ಮರಣಿಯ ಯಶಸ್ಸು ಕಂಡಿತು.

ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಕಳೆದ ಐವತ್ತು ವರ್ಷದಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸಿಬ್ಬಂದಿಗಳನ್ನು ಆಹ್ವಾನಿಸಿ ಸನ್ಮಾನ ಮಾಡಿದ್ದು ಭಾವನಾತ್ಮಕ ಸನ್ನಿವೇಶ ಸೃಷ್ಟಿಸಿತು. ಸಾವಿರಾರು ಮಂದಿ ಷೇರುದಾರರು, ಸಂಘದ ಹಿತೈಷಿಗಳು, ಅಭಿಮಾನಿಗಳು ಸುಂದರ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ್ ಗೌಡ ಮಾತನಾಡುತ್ತ ಮುಚ್ಚುವ ಹಂತ ತಲುಪಿದ ಸಂಸ್ಥೆಯನ್ನು ಒಳ್ಳೆಯ ಆಡಳಿತ ಮಂಡಳಿ ಇದ್ದರೆ ಎಂತ ಸಾಧನೆ ಮಾಡಬಹುದು ಎನ್ನುವುದಕ್ಕೆ ಮಾಗರವಳ್ಳಿ ಸಹಕಾರ ಸಂಘ ಉದಾಹರಣೆಯಾಗಿದೆ. ಆಡಳಿತ ಮಂಡಳಿಯ ನಿರಂತರ ಪ್ರಯತ್ನ ಸಂಘದ ಏಳಿಗೆಯನ್ನು ಕೆಲವೇ ವರ್ಷದಲ್ಲಿ ವಿಸ್ಮಯದ ರೂಪದಲ್ಲಿ ಬೆಳೆದಿದೆ. ಇದೇ ರೀತಿ ಶಿವಮೊಗ್ಗ ಡಿಸಿಸಿ ಬ್ಯಾಂಕಿಗೆ ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಆರು ತಿಂಗಳು ಸಿಬ್ಬಂದಿಗೆ ಸಂಬಳ ನೀಡಿರಲಿಲ್ಲ. ತೀರ್ಥಹಳ್ಳಿ ಚನ್ನಗಿರಿ, ಹೊನ್ನಾಳಿ ಭಾಗದ ರೈತರಿಗೆ ಕೇವಲ ಮುರೂವರೆ ಕೋಟಿ ಸಾಲ ನೀಡುವ ಪರಿಸ್ಥಿತಿ ಇತ್ತು. ಆದರೆ ಈಗ ಕೇವಲ ತೀರ್ಥಹಳ್ಳಿಗೆ ನಾನೂರು ಕೋಟಿ ಸಾಲ ನೀಡುತ್ತಿದ್ದೇವೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ ಈಗ ದೇಶದ ಅತ್ಯುತ್ತಮ ಬ್ಯಾಂಕುಗಳಲ್ಲಿ ಒಂದು ಎನ್ನುವ ಹೆಸರು ಮಾಡಿದೆ. ಹತ್ತು ವರ್ಷದ ಹಿಂದೆಯೇ ದೇಶದಲ್ಲಿ ಕಿಸಾನ್‌ ಕ್ರಿಡಿಟ್‌ (ಕೆಸಿಸಿ) ಸಾಲ ವಿತರಿಸಿದ ಮೊದಲ ಸಂಸ್ಥೆಯಾಗಿದೆ ಎಂದರು.

ಬಹುತೇಕ ಸಹಕಾರ ಸಂಘಗಳು ಕೇಂದ್ರ ಸರ್ಕಾರದ ಕಾನೂನಿನಡಿ ಸಿಲುಕಿ ನಲುಗುತ್ತಿವೆ. ರಿಸರ್ವ್‌ ಬ್ಯಾಂಕ್‌, ನಬಾರ್ಡ್‌ ಕೇವಲ ನೊಂದಣಿಗೆ ಮಾತ್ರ ಸೀಮಿತವಾಗಿದೆ. ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಮಾಡಲು ನಬಾರ್ಡಿನಿಂದ ಶೇ 9 ರಷ್ಟು ಬಡ್ಡಿಗೆ ಸಾಲ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ನಬಾರ್ಡ್‌ ಪುನರ್ದನ ಬರೆದ ಬಹಳಷ್ಟು ಕಾಲ ಕಳೆದಿದೆ. ಡಿಸಿಸಿ ಬ್ಯಾಂಕ್‌ ಹೀಗೆ 100 ಕೋಟಿ ಸಾಲ ವಿತರಿಸಿದರೆ 1.20 ಕೋಟಿ ನಷ್ಟ ಅನುಭವಿಸಬೇಕಾಗಿದೆ. ಇದನ್ನು ನೋಡಿ ರಾಜ್ಯ ಸರ್ಕಾರ 1 ಲಕ್ಷ ಸಾಲಕ್ಕೆ 10 ಸಾವಿರ ಸಬ್ಸಿಡಿ ನೀಡುತ್ತಿದೆ. ಏಷ್ಯದಲ್ಲೆ ಮೊದಲು ಎಂಬ ಹೆಗ್ಗಳಿಕೆಯ 1905ರಲ್ಲಿ ಸಣ್ಣರಾಮನಗೌಡ ಸಿದ್ದನಗೌಡ ಪಾಟೀಲರು ಸ್ಥಾಪಿಸಿದ ಕಣಗಿನಹಾಳ ಸಹಕಾರ ಸಂಘ ಮುಚ್ಚುವ ಸ್ಥಿತಿಗೆ ತಲುಪಿದೆ. ನಾನು ಆಫೆಕ್ಸ್ ಬ್ಯಾಂಕ್ ಅಧ್ಯಕ್ಷ ಆಗಿದ್ದಾಗ ಒಂದು ಕೋಟಿ ಅಭಿವೃದ್ದಿಗೆ ಸಹಕಾರ ಮಾಡಿದ್ದೆ. ಆದರೆ ಸಂಘದ ಏಳಿಗೆ ಮಾತ್ರ ಸುಧಾರಣೆಯಾಗಿಲ್ಲ ಎಂದಿದ್ದಾರೆ.

ಸಿಬ್ಬಂದಿ ತಪ್ಪಿನ ಕಾರಣಕ್ಕೆ ಸತ್ಯ ಗೊತ್ತಿದ್ದೂ ಆಗ ನನ್ನ ವಿರುದ್ಧ ಸರಣಿ ಪ್ರತಿಭಟನೆ, ಟೀಕೆ ಮಾಡುತ್ತಿದ್ದವರ ಜಾತಕ ಈಗ ನನ್ನ ಬಳಿ ಬಂದಿದೆ. ಹಣಕಾಸು ಅವ್ಯವಹಾರ ಕುರಿತು ಈಗ ನಾನು ಸಾಕ್ಷಿ ಸಮೇತ ಮಾತಾಡಬಹುದು. ಹಾಗೆ ಮಾಡಿದರೆ ಕಷ್ಟ ಪಟ್ಟು ರೂಪಿಸಿದ ವ್ಯವಸ್ಥೆಗೆ ತೊಂದರೆ ಆಗುತ್ತದೆ ಎಂದು ಸುಮ್ಮನಿರುವೆ. ಆದರೆ ನನ್ನ ವಿರುದ್ಧ ಹಗೆ ಸಾಧಿಸುವಾಗ ಈಗ ಸಿಕ್ಕಿ ಬಿದ್ದವರಿಗೆ ಆ ಪ್ರಜ್ಞೆ ಇರಲಿಲ್ಲವೇ. ವಿನಾಕಾರಣ ಕಾಲೆಳೆದವರು ತಮ್ಮ ತಪ್ಪಿಗೆ ತಾವೇ ಬಲಿಯಾಗುತ್ತಾರೆ. ನಾವೇನು ಮಾಡುವುದು ಬೇಡ ಎಂದರು

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಬಹುತ್ವದ ಭಾರತ ಕಟ್ಟಲು ಸಹಕಾರ ರಂಗ ಬೆಳವಣಿಗೆಯಾಗಬೇಕು. ಕೇವಲ ಸರ್ಕಾರದ ಶ್ರಮದಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ವಾಣಿಜ್ಯ ಬ್ಯಾಂಕು, ಮಂಡಿ ಸಾಲ ನಂಬಿದ್ದರೆ ಬಡವರ ಪರಿಸ್ಥಿತಿ ಬೀದಿಗೆ ಬರುತ್ತಿತ್ತು. ಭ್ರಷ್ಟಚಾರ ಮೋಸಕ್ಕೆ ಕಡಿವಾಣ ಹಾಕಬೇಕು. ಮನುಷ್ಯತ್ವ, ಮಾನವೀಯತೆ ಮೇಲೆ ವ್ಯವಸ್ಥೆ ಕಟ್ಟಬೇಕು. ವ್ಯವಸ್ಥೆ ಹಾಳಾಗುತ್ತಿರುವುದು ಕಲಿತವರಿಂದಲೇ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಲ್ಲಿರುವುದು ಅನಕ್ಷರಸ್ತರಲ್ಲ. ಬದಲಾಗಿ ವಿದ್ಯಾವಂತರೆ ಭ್ರಷ್ಟಾಚಾರದ ಉಗಮ ಕೂಡ ಇಲ್ಲೇ ಆಗುತ್ತಿದೆ. ಇದರ ವಿರುದ್ಧ ಈಗಿನ ಯುವ ಪೀಳಿಗೆ ಎಚ್ಚರಗೊಳ್ಳದೆ ಹೋದರೆ ಮುಂದಿನ ಹದಿನೈದು ಇಪ್ಪತ್ತು ವರ್ಷಗಳಲ್ಲಿ ದೇಶವೇ ನಾಶವಾಗುತ್ತದೆ ಎಂದು ಎಚ್ಚರಿಸಿದರು

ಸಂಘದ ಹುಟ್ಟು ಬೆಳವಣಿಗೆಗೆ ಕುರಿತು ಮಾತನಾಡಿದ ಅಧ್ಯಕ್ಷ ಈ. ಬಿ. ಶಶಿಧರ್ “ಕೋಡ್ಲು, ಮಾಗರವಳ್ಳಿ, ಮುಳುಬಾಗಿಲು ಸಂಘಗಳನ್ನು ವಿಲೀನಗೊಳಿಸಿ 1977ರಲ್ಲಿ ಸಂಘ ಆರಂಭಗೊಂಡಿದೆ. ಟೀಕೆಯನ್ನು ಮೀರಿ ಸಹಕಾರ ಸಂಘವನ್ನು ಕಟ್ಟುವ ಪ್ರಯತ್ನ ಯಶಸ್ವಿಯಾಗುತ್ತಿದೆ. ವಸತಿಗೃಹ, ಕಾಂಪೌಂಡ್‌ ನಿರ್ಮಾಣ ಮಾಡಿದ್ದು ನಿರ್ದೇಶಕರ ವೈಯಕ್ತಿಕ ಹಣದಲ್ಲಿ ಇಂಟರ್‌ ಲಾಕ್‌ ಹಾಕಿಸಿದ್ದೇವೆ. ನಾನು ಈ ಸಂಘಕ್ಕೆ ಬಂದಿದ್ದು ಆಕಸ್ಮಿಕ. ಆದರೆ ಷೇರುದಾರ ಸದಸ್ಯರು ತೋರಿದ ವಿಶ್ವಾಸ ಮುಂದೆ ಸಾಗಲು ಪ್ರೇರಣೆ ನೀಡಿತು. ಒಂದೇ ಆಲೋಚನೆಯ ಗೆಳೆಯರು ಉತ್ತಮ ಕಾರ್ಯದರ್ಶಿ, ಸಿಬ್ಬಂದಿ ಕಾರಣದಿಂದ ಸಂಘ ಪ್ರಗತಿಯಾಗಿದೆ. ಈ ಸಂದರ್ಭದಲ್ಲಿ ಸಂಘವನ್ನೂ ಕಟ್ಟಿ ಬೆಳೆಸಿದ ಪ್ರತಿಯೊಬ್ಬ ಹಿರಿಯರನ್ನು ನೆನಪು ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಸಹ್ಯಾದ್ರಿ ಸಮೂಹ ಸಂಸ್ಥೆಯ ಅಧ್ಯಕ್ಷ ಬಸವಾನಿ ವಿಜಯದೇವ್‌ ಮಾತನಾಡಿ, ಶಶಿಧರ ಒತ್ತಾಯದ ಮೇಲೆ ಡಿಸಿಸಿ ಬ್ಯಾಂಕ್‌ ಶಾಖೆಯನ್ನು ಕಮ್ಮರಡಿಯಿಂದ ಕೈಮರಕ್ಕೆ ತರಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಮಾತ್ರ ಡಿಸಿಸಿ ಬ್ಯಾಂಕ್‌ ವ್ಯವಹಾರ ನಡೆಸಬೇಕೆಂಬ ಕಾನೂನು ಇದಕ್ಕೆ ಸಹಕರಿಸಿತ್ತು. ಕಮ್ಮರಡಿಯಲ್ಲಿ ವ್ಯವಹಾರ ನಡೆಸಲು ಹೆಚ್ಚಿನ ಅವಕಾಶ ಇರಲಿಲ್ಲ. ಕೈಮರಕ್ಕೆ ಬಂದ ನಂತರ ಬ್ಯಾಂಕ್‌ ವ್ಯವಹಾರ ಹೆಚ್ಚಾಗಿದೆ. ನೆಂಟಸ್ಥಿಗೆ, ಪಕ್ಷ, ಜಾತಿ ನೋಡಿದ್ರೆ ಸೊಸೈಟಿ ಕಟ್ಟಲು ಆಗುವುದಿಲ್ಲ. ಕಾನೂನು ತೊಡಕುಗಳನ್ನು ಸಂಸ್ಥೆ ಮೀರಿ ಬೆಳೆಯಬೇಕು. ಕಾನೂನು ಕಾಯುತ್ತಿದ್ದರೆ ಸಂಸ್ಥೆ ಹಾಳಾಗುತ್ತದೆ ಎಂದು ಹೇಳಿದರು.

ಉಪಾಧ್ಯಕ್ಷ ಮಹೇಂದ್ರ, ನಿರ್ದೇಶಕರಾದ ಅರುಣ್‌ ಶಂಕರಮನೆ, ಕೊರಕೋಟೆ ಶ್ರೀನಿವಾಸ್‌, ಸಂತೋಷ್‌ ಹೆಗ್ಡೆ, ಪ್ರಭಾಕರ್‌, ಹರೀಶ್‌, ಮಹೇಶ್‌, ಉಷಾ ಭಾಸ್ಕರ್‌, ಪ್ರೇಮಾ ಪಾಂಡೇಶ್‌, ದಯಾನಂದ್‌, ಸಿಇಓ ಮಂಜುನಾಥ್ ಇದ್ದರು.ಸಸಿಗೊಳ್ಳಿ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಮಹೇಂದ್ರ ಸ್ವಾಗತ, ಶಂಕರ್ ಮನೆ ಅರುಣ್ ಪ್ರಸ್ತಾಪ, ಸಂತೋಷ ಹೆಗಡೆ ವಂದನೆಯನ್ನು ಉಮೇಶ್ ಪ್ರಾರ್ಥನೆಯನ್ನು ನಿರ್ವಹಿಸಿದರು.

ಈ ಸಂಧರ್ಭದಲ್ಲಿ ಸಂಘದ ಹುಟ್ಟು ಬೆಳವಣಿಗೆ ಕುರಿತು ಪತ್ರಕರ್ತ ಮೋಹನ್ ಮುನ್ನೂರು ಸಂಪಾದಕತ್ವದಲ್ಲಿ ಹೊರ ತಂದ ಸುವರ್ಣ ಪಥ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post