ಜಿಲ್ಲೆಯಲ್ಲಿ ಮಿಂಚಿನ ಸಂಚಲನ ಮೂಡಿಸಿದ ಸಿಎಂ ಡಿ.ಕೆ.ಶಿವಕುಮಾರ್
ಮಧು ಬಂಗಾರಪ್ಪ ನೇತೃತ್ವದಲ್ಲಿ ಯಶಸ್ವಿ ಕಾರ್ಯಕ್ರಮ
ತೀರ್ಥಹಳ್ಳಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಿದ್ದ ಕಸ್ತೂರಿರಂಗನ್ ವರದಿ ವಿರುದ್ಧದ ಹೋರಾಟ ನಿರೀಕ್ಷೆ ಮೀರಿ
ಯಶಸ್ವಿಯಾಗಿದೆ. ಕಾರ್ಯಕ್ರಮ ಏರ್ಪಾಡಿನಲ್ಲಿ ಸ್ಥಳೀಯ ನಾಯಕರ ಪರಸ್ಪರ
ಹೊಂದಾಣಿಕೆ ಕೊರತೆ ಕಾರಣ ಇಡೀ ಕಾರ್ಯಕ್ರಮ ಗೊಂದಲದ ಗೂಡಾಗಿದ್ದರು ನಿರೀಕ್ಷೆಗೂ ಮೀರಿದ ಜನ ಸಂದಣಿ, ಸಿಎಂ ಡಿ.ಕೆ. ಶಿವಕುಮಾರ್
ಪ್ರಬುದ್ಧ ನಡುವಳಿಕೆ, ಟಿಎಪಿಸಿಎಂಎಸ್
ಅಮೃತ ಮಹೋತ್ಸವಕ್ಕೆ ಅಧಿಕೃತ ಅಹ್ವಾನ ಇಲ್ಲದಿದ್ದರೂ ಸೌಜನ್ಯದ ಭೇಟಿ ನೀಡಿದ್ದು ನಾಡಿನ
ಮುಖ್ಯಮಂತ್ರಿ ಒಂದು ಪಕ್ಷಕ್ಕೆ ಸೀಮಿತ ಅಲ್ಲ ಎಂಬ ಸಂದೇಶ ನೀಡಿ ಬಿಜೆಪಿ ಕಾರ್ಯಕರ್ತರ ಮನ ಕೂಡ ಗೆದ್ದಿದೆ.
ಇದರ ಜೊತೆಗೆ ಈ ಕಾರ್ಯಕ್ರಮದ ಯಶಸ್ಸನ್ನು ಸವಾಲಾಗಿ ಸ್ವೀಕರಿಸಿದ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಬ್ಲಾಕ್ ಅಧ್ಯಕ್ಷರಾದ ಮುಡುಬಾ
ರಾಘವೇಂದ್ರ ಹಾಗೂ ಕೆಸ್ತೂರು ಮಂಜುನಾಥ್ ಮೂಲಕ ಇಡೀ ಕಾಂಗ್ರೆಸ್ ತೊಡಗಿಸಿಕೊಳ್ಳುವಂತೆ ಮಾಡಿದ ಉಸ್ತುವಾರಿ ಮಂತ್ರಿ ಮಧು ಬಂಗಾರಪ್ಪ ಕಾರ್ಯ ವೈಖರಿ ಸಿಎಂ ಮೆಚ್ಚುಗೆಗೆ
ಪಾತ್ರವಾಗಿದೆ.
ಈ ಕಾರ್ಯಕ್ರಮ ಮೂಲಕ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಶ್ನಾತೀತ ಕಾಂಗ್ರೆಸ್ ನಾಯಕನಾಗಿ ಮೂಡಿ ಬಂದಿದ್ದಾರೆ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾಗ ತೀರ್ಥಹಳ್ಳಿ ಕಡೆ ಭೇಟಿ ನೀಡಿದ್ದು ಕಡಿಮೆ ಹಾಗೂ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ವಿಷಯದಲ್ಲಿ ಕೊಂಚ ಹಿಂದೆ ಬಿದ್ದಿದ್ದರು ಎನ್ನುವ ಆರೋಪ ಅವರ ಮೇಲಿತ್ತು.
ಅದರಲ್ಲಿ ನಿಜವಿದ್ದರೂ ಕಾರಣ ಅವರ ಇಲಾಖೆ ವ್ಯಾಪ್ತಿ ಮತ್ತು
ಜವಾಬ್ದಾರಿ. ಕಂದಾಯ ಬಿಟ್ಟರೆ ಅತ್ಯಂತ ದೊಡ್ಡ ಹಾಗೂ ಜಟಿಲ ವ್ಯವಸ್ಥೆ ಇರುವ ಶಿಕ್ಷಣ ಇಲಾಖೆ
ಸುಲಭಕ್ಕೆ ನಿಯಂತ್ರಣಕ್ಕೆ ಸಿಗುವುದಿಲ್ಲ. ಮಂತ್ರಿಯಾಗಿ ಮೊದಲ ಒಂದು ವರ್ಷ ಇಲಾಖೆ ಆಳ ಅಗಲ
ಅರ್ಥವಾಗಲು ಅವರಿಗೆ ಬೇಕಾಗಿತ್ತು. ಹೇಳಿ ಕೇಳಿ ಇದು ಜಿ.ಗೋವಿಂದೇಗೌಡ, ಎಚ್.ವಿಶ್ವನಾಥ್, ಕಿಮ್ಮನೆ ರತ್ನಾಕರ್, ಅಂತಹ ದಿಗ್ಗಜರು ಹೆಸರು ಮಾಡಿದ್ದ
ಖಾತೆ.
ಆ ಎಚ್ಚರಿಕೆಯಲ್ಲಿಯೇ ಹೆಜ್ಜೆ ಹಾಕಿದ್ದ ಮಧು ಮೊದಲ ಸಚಿವ ಸಂಪುಟ
ಮುಗಿಯುವಾಗ ಎಲ್ಲ ನಿರೀಕ್ಷೆ ಹುಸಿಗೊಳಿಸಿ ಯಶಸ್ವಿಯಾಗಿದ್ದರು. ಕೆಪಿಎಸ್ಸಿ ಶಾಲೆ, ಸರ್ಕಾರಿ
ಶಾಲೆಗೆ ಸಿಎಸ್‌ಆರ್ ಫಂಡ್ ಪಡೆದುಕೊಂಡು ಮೊಟ್ಟೆ, ರಾಗಿ ಮಾಲ್ಟ್, ಶೂ, ಶಿಕ್ಷಕರ ನೇಮಕಾತಿಗೆ ಪರೀಕ್ಷೆ
ಆಹ್ವಾನ, ಶಾಲೆಯ ಜಾಗಕ್ಕೆ ಹಕ್ಕುಪತ್ರ ಸೇರಿದಂತೆ ಹಲವು ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಸಿದ್ದರಾಮಯ್ಯ
ಸರ್ಕಾರದ ಅತ್ಯಂತ ಕ್ರಿಯಾಶೀಲ ಯುವ ಮಂತ್ರಿಗಳಲ್ಲಿ ಒಬ್ಬರೆಂಬ ಹೆಸರು ಮಾಡಿದ್ದರು.
ಇಷ್ಟಾಗಿಯೂ ಡಿ.ಕೆ.ಶಿವಕುಮಾರ್ ಸಿಎಂ ಆದ ಎರಡನೇ ಅವಧಿಯಲ್ಲಿ ಸಚಿವ ಸಂಪುಟ
ವಿಸ್ತರಣೆ ಆದಾಗ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇರಲಿಲ್ಲ. ಅಲ್ಲಿಗೆ ಅವರ ಕಥೆ ಮುಗಿಯಿತು ಎಂದು
ವಿರೋಧಿಗಳು ಷರಾ ಬರೆದಿದ್ದರು. ಆ ಸಂದರ್ಭದಲ್ಲಿ ಜಿಲ್ಲೆಯಿಂದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್
ಮಂತ್ರಿಗಿರಿಗೆ ಜೋರಾಗಿ ಲಾಭಿ ಮಾಡಿದ್ದರು. ಬೇಳೂರು ಗೋಪಾಲಕೃಷ್ಣರನ್ನು ಮಂತ್ರಿಯಾಗಿಸಲು ಆರ್.ಎಂ.ಮಂಜುನಾಥ
ಗೌಡರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದರು.
ಎಸ್.ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಇವರಿಗಿಂತಲೂ ಕಡಿಮೆ ವಯಸ್ಸಿಗೆ ಅವರ
ನೀಲಿ ಕಣ್ಣಿನ ಹುಡುಗನಾಗಿ ಮೊದಲ ಸಲ ಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಆ ಋಣನವನ್ನು ಬಂಗಾರಪ್ಪರ ಮಗನಾದ ಮಧು ಅವರಿಗೆ ಪುನಃ
ಶಿಕ್ಷಣ ಖಾತೆ ನೀಡಿ ಮಂತ್ರಿಯಾಗಿಸಿ ತೀರಿಸಿದರು.
ಹಾಗೆ ನೋಡಿದರೆ ಮಧು ಕೇವಲ ಬಂಗಾರಪ್ಪ ಹೆಸರಲ್ಲಿ ನಿರಾಯಸವಾಗಿ ಶಾಸಕ, ಮಂತ್ರಿ ಆಗಲಿಲ್ಲ. ಬಂಗಾರಪ್ಪ ತೀರಿಕೊಳ್ಳುವ ಹೊತ್ತಿಗೆ ಅವರ ಜನಪರ ಕೊಡುಗೆಗಳಾದ ಬಗರ್ ಹುಕುಂ, ಗ್ರಾಮೀಣ ಕೃಪಾಂಕ, ಆರಾಧನ, ಅಕ್ಷಯ, ರೈತರಿಗೆ ಉಚಿತ ವಿದ್ಯುತ್ ಮುಂತಾದವು ಹಿನ್ನೆಲೆಗೆ ಸರಿದು ಯಡಿಯೂರಪ್ಪ ತಂತ್ರಗಾರಿಕೆ ರಾಜಕೀಯ ಮುನ್ನೆಲೆಗೆ ಬಂದಿತ್ತು. ಬಂಗಾರಪ್ಪರ ಭದ್ರಕೋಟೆ ಸೊರಬದಲ್ಲಿ ಅವರ ಒಂದು ಕಾಲದ ಶಿಷ್ಯ ಹರತಾಳು ಹಾಲಪ್ಪರೆ ಭೇದಿಸಿ ಬಿಜೆಪಿಯಿಂದ ಗೆದ್ದುಬಿಟ್ಟರು. ಸ್ವಂತ ಅಣ್ಣ ಕುಮಾರ್ ಬಂಗಾರಪ್ಪರೇ ಎದುರಾಳಿ ಆಗುವ ವಿಚಿತ್ರ ಸನ್ನಿವೇಶ ಎದುರಾಗಿತ್ತು.
ಹೀಗೆಲ್ಲಾ ರಾಜಕೀಯದ ಸೋಲು, ನಿರಾಸೆಯ ನಡುವೆ ಡಿ.ಕೆ.ಶಿವಕುಮಾರ್ ಕಾಳಜಿ ಮತ್ತು ಆಹ್ವಾನದ ಮೇರೆಗೆ
ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದ್ದ ಮಧು ಸುಮ್ಮನೆ ಕೂರಲಿಲ್ಲ. ಪಕ್ಷಕ್ಕೆ ಆಗಮಿಸಿದ ಅವರು ಆರಿಸಿಕೊಂಡಿದ್ದು ಜನಪರ ರಾಜಕಾರಣವನ್ನು ಬಗರ್ ಹುಕುಂ ರೈತರ ಪರ ಅವರು ನಡೆಸಿದ ಸೊರಬದಿಂದ
ಬೆಂಗಳೂರುವರೆಗಿನ ಪಾದಯಾತ್ರೆ ಅವರಿಗೆ ರೈತರಲ್ಲಿ ವಿಶ್ವಸನೀಯ ನಂಬಿಕೆ ತಂದು ಕೊಟ್ಟಿತು. ಮುಂದೆ
ಅದು ಎಲ್ಲ ವಿರೋಧ ಎದುರಿಸಿ ಸೊರಬ ಶಾಸಕ ಆಗುವ ದಾರಿಗೆ ತಂದು ನಿಲ್ಲಿಸಿತು.
ಬಂಗಾರಪ್ಪರ ನಾಮಬಲ ಸಹಜವಾಗಿಯೇ ಮಂತ್ರಿ ಸ್ಥಾನವನ್ನು ತಂದುಕೊಟ್ಟಿತು. ಬಳಿಕ
ಅವರ ಅತೀ ದೊಡ್ಡ ಸಾಧನೆ ಎಂದರೆ ಶರಾವತಿ ಸಂತ್ರಸ್ತರ ಸಮಸ್ಯೆಗೆ ಅಂತ್ಯ ಹಾಡಲು ಪ್ರಾಮಾಣಿಕವಾಗಿ
ಪ್ರಯತ್ನ ಮಾಡಿದ್ದು. ನಾಡಿಗೆ ಬೆಳಕು ನೀಡಲು ತಮ್ಮ ಜಮೀನು ಮನೆ ಕುಟುಂಬ
ಎಲ್ಲವನ್ನು ತ್ಯಾಗ ಮಾಡಿದ್ದ ರೈತರಿಗೆ ಇಂದಿಗೂ ಪುನರ್ವಸತಿ ಆಗಿಲ್ಲ.
ಈ ವಿಷಯದಲ್ಲಿ ಅವರು ಮಾಜಿ ಮಂತ್ರಿ ಕಾಗೋಡು ತಿಮ್ಮಪ್ಪರ ಮಾರ್ಗದರ್ಶನ ಪಡೆದು ಬಹುತೇಕ ತಾಂತ್ರಿಕ ಲೋಪ ಪರಿಹರಿಸಿ ಸುಮಾರು 9500 ಹೆಕ್ಟರ್ ಸಾಗುವಳಿ ಪ್ರದೇಶವನ್ನು ಸಂತ್ರಸ್ತರಿಗೆ ಕೊಡಿಸುವ ಪ್ರಯತ್ನ ಅಂತಿಮ ಹಂತದಲ್ಲಿ ಇದೆ. ಕೆಲ ತಾಂತ್ರಿಕ ಸಮಸ್ಯೆಯನ್ನು ಕೇಂದ್ರ ಹಾಗೂ ಕೋರ್ಟ್ ಮುಂದೆ ಬಗೆ ಹರಿಸಿಕೊಳ್ಳುವ ಹಂತದಲ್ಲಿದೆ.
ಇದು ಯಶಸ್ವಿಯಾದಲ್ಲಿ ಮಾಜಿ ಮುಖ್ಯಮಂತ್ರಿಯಾದ ಎಸ್.ಬಂಗಾರಪ್ಪ, ದೇವರಾಜ ಅರಸು ಅವರ ನಂತರ ಅತಿ
ಹೆಚ್ಚು ರೈತರಿಗೆ ಭೂಮಿ ಹಕ್ಕು ಕೊಡಿಸಿದ ಖ್ಯಾತಿ ಮಧು ಅವರದ್ದಾಗಲಿದೆ. ಅಲ್ಲದೇ
ಬಂಗಾರಪ್ಪರಂತೆ ಇನ್ನೊಂದಿಷ್ಟು ಅಧ್ಯಯನ, ಚುರುಕುತನ ರೂಢಿಸಿಕೊಂಡರೆ ನಿಸಂಶಯವಾಗಿ ಸಿದ್ದರಾಯಮ್ಯ ನಂತರ
ಬಹುತೇಕ ಖಾಲಿ ಬೀಳುವ ಹಿಂದುಳಿದ ಸಮುದಾಯದ ನಂಬಿಕೆಯ ನಾಯಕನಾಗುವ ಲಕ್ಷಣವು ಅವರಲ್ಲಿದೆ. ಆದರೆ ಆ ಕಠಿಣ
ಹಾದಿಯಲ್ಲಿ ಅವರು ಇನ್ನು ಪರಿಶ್ರಮದಿಂದ ಕ್ರಮಿಸಬೇಕಾಗಿದೆ ಎನ್ನುವುದು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರ
ಅಭಿಪ್ರಾಯವಾಗಿದೆ. ವಾಸ್ತವವಾಗಿ ಮೊನ್ನೆಯ ಕಸ್ತೂರಿ ರಂಗನ್ ವರದಿ ವಿರೋಧಿಸಿ
ಏರ್ಪಡಿಸಲಾಗಿದ್ದ ಸಿಎಂ ಶಿವಕುಮಾರ್ ತೀರ್ಥಹಳ್ಳಿ ಭೇಟಿ ವ್ಯವಸ್ಥೆ ದೊಡ್ಡ
ಟಾಸ್ಕ್ ಆಗಿತ್ತು. ಅದರ ಯಶಸ್ಸಿಗೆ ಅವರು ನೆಚ್ಚಿದ್ದು ಕಿಮ್ಮನೆ
ರತ್ನಾಕರ್ ಅವರನ್ನು.
ಕಿಮ್ಮನೆ ಬಿಂತ್ಲದಿಂದ ನಡೆಸಿದ ಪಾದಯಾತ್ರೆಯನ್ನು ಭರ್ಜರಿ ಯಶಸ್ಸು
ಕಾಣುವಂತೆ ಮಾಡಿದ್ದರು ಮತ್ತು ಈ ಕಾರ್ಯಕ್ರಮಕ್ಕೂ ಮಧು ಆಗಮಿಸಿ ಬಲ ತುಂಬಿದ್ದರು. ಅಲ್ಲದೇ ಸ್ವತಃ ಕಿಮ್ಮನೆ
ಸಿಎಂ ಶಿವಕುಮಾರ್ ಆಗಮನದ ಕಾರ್ಯಕ್ರಮ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿಯೇ ಮುನ್ನಡೆಯಲಿದೆ ಎಂದು
ಘೋಷಿಸಿದ್ದರು. ಅದರಂತೆ ಸಿಎಂ ಆಗಮನ, ಸಭೆ, ಸಂವಾದ ಸಣ್ಣ ಪುಟ್ಟ ಲೋಪದೋಷಗಳ
ನಡುವೆ ಭರ್ಜರಿ ಯಶಸ್ಸು ಕಂಡಿದೆ. ಮೊದಲ ಅವಧಿಯಲ್ಲಿ ಸಚಿವ ಗಿರಿ, ಜಿಲ್ಲಾ ಉಸ್ತುವಾರಿ ಎರಡನ್ನು ಏಕಕಾಲದಲ್ಲಿ
ನಿಭಾಯಿಸುವ ಗೊಂದಲಗಳು ಕಂಡರೆ ಎರಡನೇ ಅವಧಿಯ ಆರಂಭದಿಂದಲೇ ಚುರುಕುತನ ತೋರಿರುವ ಮಧು ವಿಧಾನಸಭಾ ಚುನಾವಣೆಗೆ
ಹೆಚ್ಚೇನು ಸಮಯ ಇರದ ಈ ಹೊತ್ತಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಗೆಲ್ಲಿಸುವ
ಜವಾಬ್ದಾರಿ ಹೊರಲು ತಯಾರಾಗುತ್ತಿದ್ದಾರೆ ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ನೀಡಿದ್ದಾರೆ ಎಂಬ
ಅಭಿಪ್ರಾಯ ಕಾರ್ಯಕರ್ತರದ್ದು.



.jpeg)