ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರದ ನಾಲ್ಕನೇ ವಾರ್ಷಿಕೋತ್ಸವ

ಇಂದು ‘ವಿದ್ಯುನ್ಮತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ

ತೀರ್ಥಹಳ್ಳಿಯ ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರ (ರಿ) ತನ್ನ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಜುಲೈ 4ರ ಇಂದು ವೈಭವದ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದೆ. ಕೇಂದ್ರದ ವಿದ್ಯಾರ್ಥಿಗಳಿಂದ ಹಲಸಿನ ಹಳ್ಳಿ ನರಸಿಂಹಶಾಸ್ತ್ರಿ ವಿರಚಿತ ‘ವಿದ್ಯುನ್ಮತಿ ಕಲ್ಯಾಣ’ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಲಾಗುತ್ತಿದೆ ಎಂದು ಕಲಾವಿದ ತರಬೇತುದಾರ ಶೈಲೇಶ್ ಹೇಳಿದ್ದಾರೆ.

ಮೂಲತ ತೀರ್ಥಹಳ್ಳಿಯ ದೈತ್ಯ ಪ್ರತಿಭೆ ಹಲಸಿನಹಳ್ಳಿ ನರಸಿಂಹಶಾಸ್ತ್ರೀ ಅವರು ರಚಿಸಿದ ಈ ಕೃತಿ ಬಹಳ ಸವಾಲಿನದಾಗಿದ್ದು ಕಲಾವಿದರು ಎಚ್ಚರಿಕೆಯಿಂದ ಅಭಿನಯಿಸಿದ್ದಾರೆ. ಕಾರ್ಯಕ್ರಮವು ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಇಂದು ಸಂಜೆ 6.30 ಗಂಟೆಗೆ ನಡೆಯಲಿದೆ. ಕಳೆದ ನಾಲ್ಕು ವರ್ಷಗಳಿಂದ ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರವು ತೀರ್ಥಹಳ್ಳಿ ಸೇರಿದಂತೆ ವಿವಿಧ ಶಾಲೆ, ಕಾಲೇಜುಗಳು ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ರಂಗ ಶಿಕ್ಷಣ ಕೇಂದ್ರಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದು, 2025-26ನೇ ಸಾಲಿನ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಈ ವಿಶೇಷ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಪ್ರದರ್ಶನದಲ್ಲಿ ದಿನೇಶ್ ಭಟ್ ಯಲ್ಲಾಪುರ ಭಾಗವತರಾಗಿ, ಶರತ್ ಜಾನೇಕೈ ಮದ್ದಲೆ ಹಾಗೂ ರೋಹಿತ್ ತೀರ್ಥಹಳ್ಳಿ ಚಂಡೆ ವಾದಕರಾಗಿ ಭಾಗವಹಿಸಲಿದ್ದಾರೆ. ಶೈಲೇಶ್ ತೀರ್ಥಹಳ್ಳಿ ನಿರ್ದೇಶನದ ಹೊಣೆ ಹೊತ್ತಿದ್ದು, ಪ್ರಸಾಧನ ಗಜಾನನ ಯಕ್ಷಗಾನ ಸಂಘ ಬ್ರಹ್ಮಾವರ ನಿರ್ವಹಿಸಲಿದೆ. ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ತೀರ್ಥಹಳ್ಳಿಯ ಗುರುರಾಜ ಸೌಂಡ್ಸ್ ಒದಗಿಸಲಿದೆ.

ಯಕ್ಷಗಾನದ ವಿವಿಧ ಪಾತ್ರಗಳಲ್ಲಿ ವಿದ್ಯಾರ್ಥಿಗಳು ಹಾಗೂ ಕಲಾವಿದರು ಅಭಿನಯಿಸಲಿದ್ದು, ಪ್ರಮುಖ ಪಾತ್ರಗಳಾದ ಈಶ್ವರ, ಪಾರ್ವತಿ, ದೇವೇಂದ್ರ, ಜಯಂತ, ವಿದ್ಯುನ್ಮತಿ, ಸುಲೋಚನ ಸೇರಿದಂತೆ ಹಲವಾರು ಪೌರಾಣಿಕ ಪಾತ್ರಗಳಿಗೆ ಯುವ ಕಲಾವಿದರು ಜೀವ ತುಂಬಲಿದ್ದಾರೆ. ಯಕ್ಷಗಾನ ಕಲೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಕಲಾಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂತೆ ಯಕ್ಷಭೂಮಿ ಯಕ್ಷಗಾನ ಅಧ್ಯಯನ ಕೇಂದ್ರದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ 2026-27ನೇ ಸಾಲಿನ ಯಕ್ಷಗಾನ ತರಗತಿಗಳಿಗೆ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಆಸಕ್ತರು 7892151950 ಅಥವಾ 9482937620 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ. ಕಾರ್ಯಕ್ರಮಕ್ಕೆ ತಾಲ್ಲೂಕು ದಂಡಾಧಿಕಾರಿ ಕಛೇರಿ, ಮುಜರಾಯಿ ಇಲಾಖೆ, ಪಟ್ಟಣ ಪಂಚಾಯತ್ ತೀರ್ಥಹಳ್ಳಿ, ನಟಮಿತ್ರರು (ರಿ) ತೀರ್ಥಹಳ್ಳಿ, ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ (ರಿ) ಹಾಗೂ ಶ್ರೀ ಮಾರಿಕಾಂಬಾ ದೇವಸ್ಥಾನದ ಸಹಕಾರ ದೊರೆತಿದೆ. ಯಕ್ಷಗಾನಾಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ ನೀಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮನು ಆರ್ಟ್ಸ್ ಮನೋಜ್ ಮತ್ತು ರೋಹಿತ್ ಉಪಸ್ಥಿತರಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post