ಒಂದು ಕಾಲದಲ್ಲಿ ಪ್ರಾಥಮಿಕ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳೇ ಹಳ್ಳಿಗಾಡಿನ ರೈತರಿಗೆ ಕೃಷಿ ಚಟುವಟಿಕೆಗೆ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲ ನೀಡುವ ಸಂಸ್ಥೆಗಳಾಗಿತ್ತು. ಆ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ರೈತ ಸಮುದಾಯಕ್ಕೆ ಪ್ರತಿ ವರ್ಷದ ಬೇಸಾಯ, ತೋಟ ಕೂರಿಸುವುದು, ಬೇಲಿ ಕೊಟ್ಟಿಗೆ ಇತ್ಯಾದಿಗಳ ಅಭಿವೃದ್ಧಿಗೆ ನಬಾರ್ಡ್ ಅನುದಾನದಲ್ಲಿ ಹಣಕಾಸನ್ನು ಸಾಲ ರೂಪದಲ್ಲಿ ಕೊಡುವ ಪರಿಪಾಠವಿತ್ತು. ಇಂದು ತಲೆ ಎತ್ತಿ ನಿಂತಿರುವ ಮಲೆನಾಡು ಭಾಗ ಬಹುತೇಕ ಅಡಿಕೆ ತೋಟಗಳಿಗೆ ಭೂ ಬ್ಯಾಂಕ್ ಸಾಲ ನೀಡಿದೆ. ಆಡಿಟ್ ವರದಿಯನ್ನು ಸಾರ್ವಜನಿಕವಾಗಿ ಬಿಚ್ಚಿಡಲು ಸಿದ್ಧ ಎಂದು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಸವಾನಿ ವಿಜಯದೇವ್ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಇತ್ತೀಚಿನ ಕೆಲವು ವರ್ಷಗಳಿಂದ ನಬಾರ್ಡ್ ಸಹಕಾರ ಕುಂಠಿತವಾದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಪ್ರಾಥಮಿಕ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಕೃಷಿಕರಿಗೆ ಕೃಷಿ ಚಟುವಟಿಕೆಗೆ ಹಣಕಾಸು ಒದಗಿಸುವಲ್ಲಿ ಹಿಂದೆ ಬಿದ್ದವು. ಪ್ರಸ್ತುತ ರಾಜ್ಯದ ಬಹುತೇಕ ಭೂ ಬ್ಯಾಂಕುಗಳೂ ತಮ್ಮ ಸಿಬ್ಬಂದಿಗೂ ವೇತನ ನೀಡಲು ಪರದಾಡುವ ಪರಿಸ್ಥಿತಿ ಇದೆ. ಬಹುತೇಕ ಎಲ್ಲವೂ ನಷ್ಟದಲ್ಲಿದೆ.
ಆದರೆ ತೀರ್ಥಹಳ್ಳಿ ಭೂ ಬ್ಯಾಂಕ್ ಸಾಲ ವಸೂಲಾತಿ, ವ್ಯವಹಾರ ನಿವ್ವಳ ಲಾಭ, ಸಾಲ ನೀಡಿಕೆಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನದಲ್ಲಿದೆ. ಕಳೆದ ಸುಮಾರು 11 ವರ್ಷಗಳಿಂದ ಶಿಸ್ತುಬದ್ಧ ಕಟ್ಟುನಿಟ್ಟಿನ ವ್ಯವಹಾರವೇ ತೀರ್ಥಹಳ್ಳಿ ಭೂ ಬ್ಯಾಂಕ್ ಪ್ರಗತಿಯ ಮೆಟ್ಟಿಲೇರಲು ಕಾರಣವಾಗಿದೆ. ರಾಜ್ಯದ ಹಲವೆಡೆ ಭೂ ಬ್ಯಾಂಕಿನ ನಷ್ಟದಲ್ಲಿದ್ದರೆ ತೀರ್ಥಹಳ್ಳಿಯ ಭೂ ಬ್ಯಾಂಕ್ ಒಟ್ಟಾರೆಯಾಗಿ ಸುಮಾರು 43.57 ಕೋಟಿ ರೂಪಾಯಿ ವ್ಯವಹಾರ ನಡೆಸಿ ಸುಮಾರು 82 ಲಕ್ಷದ 76 ಸಾವಿರ ರೂಪಾಯಿ ನಿವ್ವಳ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ.
ಕಳೆದ ವರ್ಷವೂ ಸಹ ಶೇಕಡಾ 10 ರಷ್ಟು ಲಾಭಾಂಶ ಷೇರುದಾರ ಸದಸ್ಯರಿಗೆ ವಿತರಿಸಿದ್ದು ಈ ಬಾರಿಯೂ ಶೇಕಡಾ 10 ಲಾಭಾಂಶ ಹಂಚಲು ಆಡಳಿತ ಮಂಡಳಿ ನಿರ್ಧರಿಸಿದೆ. ಕಳೆದ 20 ವರ್ಷಗಳಿಂದಲೂ ಆಡಿಟ್ ವರದಿಯಲ್ಲಿ 'ಎ' ಗ್ರೇಡ್ ಪಡೆದು ಜಿಲ್ಲೆಯ ಸದೃಢ ಹಾಗೂ ಲಾಭಗಳಿಕೆಯ ಭೂ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕಿನ ಷೇರುದಾರ ಸದಸ್ಯರಿಗೆ ಸುಮಾರು 16.79 ಕೋಟಿ ರೂಪಾಯಿ ಸಾಲ ನೀಡಿ ತೀರ್ಥಹಳ್ಳಿ ಭೂ ಬ್ಯಾಂಕಿನ ಇತಿಹಾಸದಲ್ಲೇ ಪ್ರಪ್ರಥಮ ಎಂಬಂತೆ ಸುಮಾರು ಶೇಕಡಾ 88.30 ವಸೂಲಾತಿ ಮಾಡಿ ಇತರೆ ಬ್ಯಾಂಕುಗಳ ಹುಬ್ಬೇರಿಸುವಂತೆ ಆಗಿದೆ.
ಪ್ರಾಮಾಣಿಕ ನಡೆ, ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮ, ಬದ್ಧತೆ ಗಮನಿಸಿರುವ ಷೇರುದಾರರು ತಾವು ಪಡೆದ ಸಾಲವನ್ನು ಅತ್ಯಂತ ಮುತುವರ್ಜಿಯಿಂದ ಮರುಪಾವತಿ ಮಾಡಿ ಬ್ಯಾಂಕಿನ ಅಭಿವೃದ್ಧಿಯಲ್ಲಿ ಕೈಜೋಡಿಸಿರುತ್ತಾರೆ. ಈ ಬ್ಯಾಂಕಿನಲ್ಲಿ ಸುಮಾರು 5508 ಮಂದಿ ಷೇರುದಾರರಿದ್ದು ಬಹುಪಾಲು ಷೇರುದಾರರಿಗೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡುತ್ತಾ ಅವರೆಲ್ಲರ ಆರ್ಥಿಕ ಪ್ರಗತಿಗೆ ತೀರ್ಥಹಳ್ಳಿ ಭೂ ಬ್ಯಾಂಕ್ ಕೈಜೋಡಿಸಿದೆ.
ಭೂ ಬ್ಯಾಂಕ್ ಜನಸ್ನೇಹಿ ಆರ್ಥಿಕ ಸಂಸ್ಥೆ ಆಗಿಸುವಲ್ಲಿ ನಿರಂತರ ಶ್ರಮಿಸಲಾಗುತ್ತಿದ್ದು ವಿವಿಧ ಯೋಜನೆಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಸಾಲ ಪಡೆದ ರೈತರು ಸಕಾಲದಲ್ಲಿ ಕಂತು ಪಾವತಿ ಮಾಡಿ ಹೊಸ, ಹೊಸ ರೈತರಿಗೆ ಬ್ಯಾಂಕಿನ ಸೇವೆ ವಿಸ್ತಾರಗೊಳ್ಳಲು ಸಹಕರಿಸುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾಂಕಿನ ಸರ್ವ ಸದಸ್ಯರ ಮಹಾಸಭೆ ನಡೆಯಲಿದ್ದು ಸದಸ್ಯರು ಸಕಾಲದಲ್ಲಿ ಆಗಮಿಸುವಂತೆಯೂ ಬ್ಯಾಂಕಿನ ಅಧ್ಯಕ್ಷ ಬಸವಾನಿ ವಿಜಯದೇವ್ ಸಂತಸ ವ್ಯಕ್ತಪಡಿಸಿದ್ದಾರೆ.
ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಇ.ಎಸ್. ಶ್ರೀಧರಮೂರ್ತಿ, ವ್ಯವಸ್ಥಾಪಕ ಸಂಜಯ ಇದ್ದರು.