ತೀರ್ಥಹಳ್ಳಿಯಲ್ಲಿ 4ಜಿ ವರ್ಸಸ್ 2ಜಿ ಬಿಗಿ ಫೈಟ್
ಆರಗ ಸಹಕಾರಕ್ಕೆ ಆರ್ ಎಂಎಂ ಬೆಂಬಲಿಗರು ಫುಲ್ ಖುಷ್
ಇದೆಂತ ಕಥೆ ಎಂದು ಪಿಳಿ ಪಿಳಿ ಕಣ್ಣು ಬಿಟ್ಟ ನಿಷ್ಠಾವಂತ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು
ತೀರ್ಥಹಳ್ಳಿಯ ರಾಜಕಾರಣ ಕ್ಷಿಪ್ರ ಬೆಳವಣಿಗೆಯ ಕಾರಣಕ್ಕೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಪೈಪೋಟಿ ನಡೆಸಿದರೆ ಬಿಜೆಪಿಯಲ್ಲಿ ಹಾಲಿ ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ಮಂಡಲ ಅಧ್ಯಕ್ಷ ಹೆದ್ದೂರು ನವೀನ್ ನಡುವೆ ಟಿಕೆಟ್ ಗಿಟ್ಟಿಸಿಕೊಳ್ಳಲು ಕೋಲ್ಡ್ ವಾರ್ ಸದ್ದಿಲ್ಲದೆ ಆರಂಭಗೊಂಡಿದೆ.
ಕಳೆದ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್ಸಿನ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥ ಗೌಡರ ಸಂಬಂಧ ಇತ್ತೀಚಿಗೆ ಹಳಸಿದಂತಿದೆ. ಕಳೆದ ಬಾರಿಯೆ ಕೊನೆಯ ಚುನಾವಣ ಸ್ಪರ್ಧೆ ಎಂದು ಹೇಳುತ್ತಿದ್ದ ಆರಗ ಜ್ಞಾನೇಂದ್ರರ ಚುನಾವಣಾ ಸ್ಪರ್ಧೆಯ ಉತ್ಸಾಹ ಇನ್ನೂ ಇಳಿಮುಖವಾಗಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ ಎನ್ನುವ ಮೂಲಕ ನಿವೃತ್ತಿ ಘೋಷಣೆ ಇಲ್ಲವೆಂಬ ಬಲವಾದ ಹೇಳಿಕೆಗಳನ್ನು ತೇಲಿ ಬಿಟ್ಟಿದ್ದಾರೆ. ಇದರೊಂದಿಗೆ ಕಳೆದ ಚುನಾವಣೆಯಲ್ಲಿಯೇ ಟಿಕೆಟ್ ಪಡೆಯಬೇಕಾಗಿದ್ದ ಪಕ್ಷದ ಜೆನ್ ಜೀ ಮತ್ತು ನಿಷ್ಠಾವಂತ ಬಿಜೆಪಿ ಹಿರಿಯರ ಬೆಂಬಲದ ನಡುವೆಯೂ ಆರಗ ಎದುರು ಹೆದ್ದೂರು ನವೀನ್ ಪ್ರಭಾವ ಏನೇನು ಸಾಲುತ್ತಿಲ್ಲವೆಂಬಂತೆ ದೊಡ್ಡ ಮೆಸೇಜ್ ಬಿಜೆಪಿ ಪಾಳಯದಲ್ಲಿ ಹರಿದಾಡುತ್ತಿದೆ. ಉಳಿದಂತೆ ಪಕ್ಷದೊಳಗೆ ಹೊಸ ಮುಖಕ್ಕೆ ಅವಕಾಶ ಬೇಕೆಂಬ ಕೂಗು ಡೊಡ್ಡ ಮಟ್ಟದಲ್ಲಿಯೇ ವ್ಯಕ್ತವಾಗುತ್ತಿದ್ದಂತೆ ತೀರ್ಥಹಳ್ಳಿಯ ಚುನಾವಣೆ 4ಜಿ ಹಂತಕ್ಕೆ ತಲುಪಿದೆ. ಆದರೆ ಟಿಕೆಟ್ ಮಾತ್ರ ಇಬ್ಬರಿಗೆ ಮಾತ್ರ ಸಿಗುವುದರಿಂದ 2ಜಿ ಯಾರಾಗುತ್ತಾರೆಂಬ ಬಿಗಿ ಪೈಟ್ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿದ್ದಂತೆ ತಾಲ್ಲೂಕಿನ ರಾಜಕೀಯ ಚಿತ್ರಣ ತೀವ್ರ ಪಲ್ಲಟಕ್ಕೆ ಸಿಕುಕಿದಂತಾಗಿದೆ. ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸರ್ಕಾರಿ ಶಿಷ್ಟಾಚಾರದ ಅನ್ವಯ ಸರ್ಕಾರಿ ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳುತ್ತಿದ್ದು ಅವರೊಂದಿಗೆ ಶಾಸಕ ಆರಗ ಜ್ಞಾನೇಂದ್ರ ಕೂಡ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಗೃಹಸಚಿವರಾಗುವ ಮುನ್ನ ರಾಜ್ಯ ರಾಜಕಾರಣದಲ್ಲಿ ಹೆಚ್ಚೇನು ಸಕ್ರಿಯವಾಗಿ ಕಾಣಿಸಿಕೊಳ್ಳದ ಆರಗ ಇದೀಗ ಎಲ್ಲಾ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡಿ ಗಮನ ಸೆಳೆಯುತ್ತಿದ್ದಾರೆ.
ಕಳೆದ ವಿಧಾನಸಭೆಯ ಸಂದರ್ಭ ಈ ಭಾರಿ ಹೋಮು ಮುಂದಿನ ಬಾರಿ ಸಿಎಂ ಎಂಬ ಘೋಷಣೆಗಳು ತೀರ್ಥಹಳ್ಳಿಯ ಗಲ್ಲಿಗಲ್ಲಿಗಳನ್ನು ತಲುಪಿತ್ತು. ಅದಕ್ಕೆ ತಕ್ಕಂತೆ ಆರಗರ ಹಾವಭಾವ ಕೂಡ ಬದಲಾಗಿದೆ ಎಂದರೆ ತಪ್ಪಾಗಲಾರದು.
ಇನ್ನೊಂದು ಕಡೆಯಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದ ಕಿಮ್ಮನೆ ರತ್ನಾಕರ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದರು ಸರ್ಕಾರದ ಮಂಡಳಿ ಅಥವಾ ಯಾವುದೇ ಹುದ್ದೆಗಳನ್ನು ಅಲಂಕರಿಸಲಿಲ್ಲ. ಹೀಗಾಗಿ ಶಿಷ್ಟಾಚಾರದ ಪ್ರಕಾರ ಸರ್ಕಾರದ ಯಾವುದೇ ಸಭಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದ ಸ್ಥಿತಿಯಲ್ಲಿದ್ದಾರೆ. ಹೆದ್ದೂರು ನವೀನ್ ಪಕ್ಷದ ಅಧ್ಯಕ್ಷರಾಗಿದ್ದರು ರಾಜಕೀಯವಾಗಿ ಮೇಲುಗೈ ಸಾಧಿಸಲು ಹಲವು ತೊಡಕುಗಳಿವೆ. ಹಾಗಾಗಿ ಅಧ್ಯಕ್ಷಗಿರಿ ಬಿಟ್ಟರೆ ನವೀನ್ ಪಾಲಿಗೂ ಹೆಚ್ಚಿನ ಸೌಲಭ್ಯಗಳು ಇಲ್ಲ.
ಇದೀಗ ರಾಜಕೀಯವಾಗಿ ಮತ್ತೊಂದು ಸುತ್ತಿನ ಬೆಳವಣಿಗೆಗೆ ತೀರ್ಥಹಳ್ಳಿ ಸಾಕ್ಷಿಯಾಗಿದೆ. ಶನಿವಾರ ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ತ್ರೈಮಾಸಿಕ ಸಭೆ ನಡೆಯಬೇಕಿತ್ತು. ಈ ಬಗ್ಗೆ 15 ದಿನಗಳ ಹಿಂದೆಯೇ ಪ್ರಕಟಣೆ ಹೊರಡಿಸಲಾಗಿತ್ತು. ಯಾವಾಗ ಮಂಜುನಾಥ ಗೌಡರ ಪಾದಯಾತ್ರೆ ಹೊಸನಗರದ ಕಾರಣಗಿರಿಯಿಂದ ಹೊರಡುತ್ತದೆ ಎಂಬ ಬಗ್ಗೆ ಮಾಹಿತಿ ದೊರೆಯಿತೋ ಇದ್ದಕ್ಕಿದ್ದ ಹಾಗೆ ಕಸ್ತೂರಿ ರಂಗನ್ ಪಾದಯಾತ್ರೆ ನೆಪದಲ್ಲಿ ತ್ರೈಮಾಸಿಕ ಸಭೆ ಮುಂದೂಡಲಾಯಿತು.
ಹೊಸನಗರ ತಾಲ್ಲೂಕು ಸಾಗರ ಮತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಂಚಿ ಹೋಗಿದೆ. ಹೀಗಾಗಿ ರಾಜಕೀಯ ಶಕ್ತಿ ಪ್ರದರ್ಶಿಸಲು ಮುಂದಾಗಿರುವ ಮಂಜುನಾಥ ಗೌಡರ ಬೆನ್ನಿಗೆ ತೀರ್ಥಹಳ್ಳಿಯಿಂದ ಶಾಸಕ ಆರಗ ಜ್ಞಾನೇಂದ್ರ ನಿಂತುಕೊಂಡರೆ ಸಾಗರದಿಂದ ಬೇಳೂರು ಗೋಪಾಲಕೃಷ್ಣ ಕೈಜೋಡಿಸಿದ್ದಾರೆ. ಇದು ಮಂಜುನಾಥ ಗೌಡರ ರಾಜಕೀಯ ಬೆಳವಣಿಗೆಗೆ ಸಹಕಾರಿಯಾಗಬಹುದು ಎಂಬ ಮಾತುಗಳು ಕೇಳಿಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ಪ್ರಶ್ನಿಸಬೇಕಿದ್ದ ವಿಚಾರಕ್ಕೆ ಬಿಜೆಪಿಯ ಬೆಂಬಲ ಪಡೆದು ಹೋರಾಟ ರೂಪಿಸುವುದು ರಾಜಕಾರಣದ ಗೊಂದಲಗಳನ್ನು ಎತ್ತಿ ಹಿಡಿಯುವಂತಿದೆ. ಅಲ್ಲದೇ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಬಿ.ಸ್ವಾಮಿರಾವ್ ಪ್ರತಿಭಟನೆಯ ಭಾಗವಾದರು. ಇದು ಪಕ್ಷಾತೀತ ಹೋರಾಟ ಎಂದು ಮೇಲ್ನೋಟಕ್ಕೆ ಕಂಡರು ಶಕ್ತಿ ಪ್ರದರ್ಶನದ ವೇದಿಕೆ ಎನ್ನಬಹುದಾಗಿದೆ.
ಬಿಜೆಪಿ ರಾಜಕೀಯ ದಾಳವಾಗಿ ಒಡೆಯುವ ತಂತ್ರದ ಜೊತೆಗೆ ಪಕ್ಷದೊಳಗಿನ ನಾಯಕತ್ವವನ್ನು ಇಬ್ಬಾಗ ಮಾಡುವ ಧೋರಣೆ ಮುಂದುವರೆಸಿದಂತಿದೆ. ಕೇಂದ್ರ ಪರಿಸರ ಸಚಿವಾಲಯ ಹೊರಡಿಸಿದ ಕಸ್ತೂರಿ ರಂಗನ್ ಅಧಿಸೂಚನೆ ಕರಡು ಕುರಿತಂತೆ ರಾಜ್ಯ ಸರ್ಕಾರದ ವಿರೋಧಗಳನ್ನು ಪರೀಕ್ಷಿಸಲು 2022 ರಲ್ಲಿ ಸಂಜಯ್ ಕುಮಾರ್ ನೇತೃತ್ವದ ಸಮಿತಿ ರಚನೆಯಾಗಿದ್ದು ಅದು 2027 ರ ಹೊತ್ತಿನ ವರೆಗೆ ವಿರೋಧಗಳನ್ನು ಆಲಿಸುವ ಕೆಲಸ ಮಾಡಲಿದೆ. ಅಂದರೆ 7ನೇ ಕರಡು ಸೂಚನೆ ಸದ್ಯಕ್ಕೆ ಮುಂದೂಡುವ ಹಂತದಲ್ಲಿದ್ದು ವಿಧಾನಸಭೆ ಚುನಾವಣೆ ಹೊತ್ತಿಗೆ ಮತ್ತೊಮ್ಮೆ ಸದ್ದು ಮಾಡುವ ಸಂದರ್ಭ ಎದುರಾಗಲಿದೆ. ಹಾಗಾಗಿ ಇದೀಗ 7ನೇ ನೋಟಿಫಿಕೇಷನ್ ಜಾರಿಗೊಳಿಸಿ 60 ದಿನಗಳ ಗಡುವು ನೀಡಿತ್ತು.
ಯಾರು ಏನು ಮಾಡಬೇಕೆಂಬ ಕನಿಷ್ಟ ಜ್ಞಾನ ಇಲ್ಲದ ಹೊತ್ತಿನಲ್ಲಿ ಕೇವಲ ರಾಜಕಾರಣದ ಲಾಭ ಪಡೆಯುವುದು ಸರಿಯೇ ಎಂಬ ಪ್ರಶ್ನೆಗಳು ಕೇಳಿ ಬರುವಂತಿದೆ. ಒಟ್ಟಿನಲ್ಲಿ ತೀರ್ಥಹಳ್ಳಿಯ 4ಜಿ ರಾಜಕಾರಣದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಬಹುದಾದ 2ಜಿ ಯಾರೆಂಬ ಕೌತುಕದ ನಡುವೆ ಯಾರು ಯಾರ ಬೆನ್ನಿಗೆ ಎಲುಬಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬೀಳಬೇಕಿದೆ.
ಇತ್ತೀಚೆಗೆ ಸಿರಿಬೈಲು ಧರ್ಮೇಶ್ ಪತ್ರಿಕಾಗೋಷ್ಟಿಯೊಂದರಲ್ಲಿ ಆರ್.ಎಂ.ಮಂಜುನಾಥ ಗೌಡರು ಬಿಜೆಪಿ ಸೇರಿದರೆ ಅಚ್ಚರಿ ಇಲ್ಲ ಎಂಬ ಹೇಳಿಕೆ ವಿವಿಧ ಸ್ವರೂಪಕ್ಕೆ ತಿರುಗುತ್ತಿದೆ. ಅದಕ್ಕೆ ಹೋಲಿಕೆಯಾಗುವಂತೆ ರಾಜಕೀಯ ಚರ್ಚೆ, ಸಂದರ್ಭ, ಸನ್ನಿವೇಶ ಸೃಷ್ಟಿಯಾಗುತ್ತಿದ್ದು ಯಾವ ಬಣ್ಣ ತಳೆಯುತ್ತದೆ ಎಂದು ಕಾದು ನೋಡಬೇಕಿದೆ.