ಡ್ರೋನ್ ಮೂಲಕ ಔಷಧ
ಸಿಂಪಡಣೆ ಅಪಾಯಕಾರಿ
ಕ್ರಮಬದ್ಧ ಪದ್ಧತಿಯಿಂದ
ಎಲೆಚುಕ್ಕಿ ನಿಯಂತ್ರಣ ಸಾಧ್ಯವಿದೆ - ಡಾ. ಗಂಗಾಧರ ನಾಯ್ಕ ಬಿ.
ಎಲೆ ಚುಕ್ಕಿ ರೋಗದ
ಕುರಿತು ನಿರಂತರ ಸಂಶೋಧನೆ ನಡೆಸಲಾಗುತ್ತಿದ್ದು ಫಲಿತಾಂಶ ಆಶಾದಾಯಿಕವಾಗಿದೆ. ಕ್ರಮಬದ್ದ ಔಷಧಿ ಕ್ರಮ
ಅನುಸರಿಸಿ ರೋಗ ನಿಯಂತ್ರಣ ಸಾಧ್ಯವಿದೆ. ತೀರ್ಥಹಳ್ಳಿ, ಸಾಗರ, ಕೊಪ್ಪ, ಕಳಸ ಭಾಗಗಳ ತೋಟಗಳಲ್ಲಿ ನಡೆಸಲಾದ
ಪ್ರಯೋಗಗಳು ಸಮಾಧಾನಕರ ಫಲಿತಾಂಶ ನೀಡಿದೆ ಎಂದು ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಸಸ್ಯರೋಗ ಶಾಸ್ತ್ರ
ವಿಭಾಗದ ಮುಖ್ಯಸ್ಥ ಡಾ.ಬಿ. ಗಂಗಾಧರ ನಾಯ್ಕ ಹೇಳಿದರು.
ಬುಧವಾರ ರಾಮಕೃಷ್ಣಪುರದ
ಕುವೆಂಪು ರಂಗಮಂದಿರದಲ್ಲಿ ತಾಲೂಕು ಕೃಷಿಕ ಸಮಾಜದಿಂದ ಆಯೋಜಿಸಿದ್ದ ರೈತದಿನಾಚರಣೆ ಕಾರ್ಯಕ್ರಮದಲ್ಲಿ
ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ವಿಷಯದ ಕುರಿತು ಮಾತನಾಡಿದರು.
ಭಾರತದಲ್ಲಿ ಅಡಿಕೆ
ಬೆಳೆಯುವ ಪ್ರದೇಶ ಹಾಲಿ 9 ವರೆ ಲಕ್ಷ ಎಕರೆ ಪ್ರದೇಶದಲ್ಲಿದ್ದು 2030ರ ವೇಳೆಗೆ 15 ಲಕ್ಷ ಎಕರೆಗೆ
ವಿಸ್ತರಣೆಯಾಗುವ ಸಾಧ್ಯತೆ ಇದೆ. ಅಸಾಂಪ್ರದಾಯಿಕ ಪ್ರದೇಶಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು ತೆಲಂಗಾಣ
ಮೊದಲ ಸ್ಥಾನ ಪಡೆಯುವ ನಿರೀಕ್ಷೆ ಇದೆ ಮುಂದಿನ ಮೂವತ್ತು ವರ್ಷ ದಲ್ಲಿ ಅಡಿಕೆ ಅದರ ಸಾಂಪ್ರದಾಯಿಕ ಪ್ರದೇಶಗಳಲ್ಲಿ
ಮಾತ್ರ ಉಳಿಯುವ ಸಾಧ್ಯತೆ ಹೆಚ್ಚಿದೆ ಏಕೆಂದರೆ ಪ್ರತಿಕೂಲ ವಾತಾವರಣ ದಲ್ಲಿ ಅದು ಬದುಕುಳಿಯುವ ಸಾಧ್ಯತೆ
ಕಡಿಮೆ ಇದೆ.
ಔಷಧ ಬಳಕೆಯಲ್ಲಿ
ರಸಸಾರ ಮಟ್ಟ (ಪಿಎಚ್) ಗುರುತಿಸಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಹೆಚ್ಚಿನ ಭಾಗಗಳಲ್ಲಿ ಸುಣ್ಣ
ಮತ್ತು ಮೈಲುತುತ್ತ ಪ್ರಮಾಣವನ್ನು ಸರಿಯಾಗಿ ಬೆರೆಕೆ ಮಾಡುವುದಿಲ್ಲ. ಒಂದು ಕೆ.ಜಿ. ತುತ್ತಕ್ಕೆ
400 ಗ್ರಾಂ ಸುಣ್ಣ ಅತ್ಯಂತ ಪರಿಣಾಮಕಾರಿ. ಈ ಅನುಪಾತ ಹೆಚ್ಚುತ್ತ ಹೋದಲ್ಲಿ ಪ್ರಯೋಜನವಾಗುವುದಿಲ್ಲ.
ಬದಲು ಹಣ ವ್ಯರ್ಥವಾಗುತ್ತದೆ. ವಿಪರೀತ ಮಳೆ ಸಂದರ್ಭದಲ್ಲಿ ಬೋರ್ಡೋ ದ್ರಾವಣಕ್ಕೆ 1 ಕೆ.ಜಿ. ಬೆಲ್ಲ
ಸೇರಿಸಿ ಇಡುವುದರಿಂದ 2, 3 ದಿನಗಳ ಕಾಲ ಔಷಧ ಕೆಡದಂತೆ ಕಾಪಾಡಬಹುದು. ಕೊಳೆರೋಗ ನಿಯಂತ್ರಣ ಸಂಶೋಧನೆ
ಅಂತಿಮ ಹಂತದಲ್ಲಿದೆ. ಬೋರ್ಡೋ ದ್ರಾವಣ ಬಳಕೆಯ ಬದಲಾಗಿ ಅಡಕೆ ಮರದ ಬುಡಕ್ಕೆ ಔಷಧ ಹಾಕುವ ಸಂಶೋಧನೆ
ಪ್ರಗತಿಯಲ್ಲಿದೆ
ಡ್ರೋನ್ ಮೂಲಕ ಅಡಿಕೆ
ಗೆ ಔಷದಿ ಸಿಂಪಡನೇ ಅತ್ಯಂತ ಅಪಾಯಕಾರಿ ಅದನ್ನು ಒಪ್ಪಲಾಗದು ಅದರಿಂದ ಉಪಯೋಗ ಕ್ಕಿಂತ ಅಪಾಯಕಾರಿ. ಹಿಂದಿನ
ವರ್ಷಕ್ಕೆ ಹೋಲಿಸಿದರೆ ಸರಾಸರಿ ಮಟ್ಟದಲ್ಲಿ ಶೇ 17ರಷ್ಟು ಅಡಿಕೆ ಎಲೆಚುಕ್ಕಿ ರೋಗ ಕಡಿಮೆ ಆಗಿದೆ.
ಜವಳು ಭೂಮಿಯಲ್ಲಿ ಚುಕ್ಕಿ ರೋಗ ಜೀವಂತವಾಗಿ ಹೆಚ್ಚು ಕಾಲ ಬದುಕುತ್ತದೆ. ಪರ್ಯಾಯ ಪದಾರ್ಥಗಳಿಗೆ ಅಡಕೆಯನ್ನು
ಬಳಕೆ ಮಾಡುವ ಕಡೆಗೆ ಚಿಂತನೆ ನಡೆಸಬೇಕು. ಜಾನುವಾರುಗಳ ಆಹಾರ ಪದಾರ್ಥ ಕುರಿತಂತೆ ಚೀನಾ ಮಹತ್ವದ ಸಂಶೋಧನೆ ನಡೆಸಿದೆ ಎಂದರು.
“ಮ್ಯಾಮ್ಕೋಸ್
ವತಿಯಿಂದ ಪ್ರಯೋಗಾಲಯ ವರದಿ ಪಡೆದು ಗುಣಮಟ್ಟದ ಮೈಲುತುತ್ತ ಸರಬರಾಜು ಮಾಡಲಾಗುತ್ತಿದೆ. ಔಷಧಿಯ ಗುಣಮಟ್ಟವನ್ನು
ಸಾರ್ವಜನಿಕವಾಗಿ ತಿಳಿಸಲು ನಾವು ಸಿದ್ದರಿದ್ದೇವೆ” ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್
ಹೇಳಿದರು.
ತಾಲೂಕು ಕೃಷಿಕ ಸಮಾಜದ
ಅಧ್ಯಕ್ಷ ಹೊಸಮನೆ ಸತೀಶ್, ಕೆ.ಜೆ.ನಿರಂಜನ, ಕೆ.ಎ.ವಸುಪಾಲ, ತನಿಕಲ್ ರಾಜಣ್ಣ, ಕೆ.ಗುಣಕರ ಅಪ್ಪು ಶೆಟ್ಟಿ,
ಎಸ್.ಟಿ.ಸುಧಾಕರ, ವಡೇಗದ್ದೆ ಕೃಷ್ಣಮೂರ್ತಿ, ಎಸ್.ಎನ್.ದಿನೇಶ್, ಬಿ.ಡಿ.ಪ್ರಭಾಕರ, ಮಹೇಶ್ ಎಚ್.ಎಸ್.,
ಎಚ್.ಎಂ.ರವಿ, ಕಡಿದಾಳು ತಾರಾನಾಥ, ಸಿ.ಬಿ.ಈಶ್ವರ್, ಹುಂಚದಕಟ್ಟೆ ವೆಂಕಟೇಶ್, ಪ್ರಗತಿಪರ ಕೃಷಿಕ
ಕೊಳಕೊಡಿಗೆ ಸತ್ಯಪ್ರಕಾಶ್, ಮಣ್ಣು ವಿಜ್ಞಾನಿ ನಿರಂಜನ ಕೆ.ಎಸ್. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್
ಇದ್ದರು.
