ನಬಾರ್ಡ್‌ ಪುನರ್ಧನ ಶೇ.23ಕ್ಕೆ ಇಳಿಕೆ

ಬೆಳೆವಿಮೆ ರೈತರ ಪಾಲಿಗೆ ಶಾಪವಾಗುತ್ತಿದೆ
ಕೃಷಿ ವಲಯಕ್ಕೆ ಭಾರಿ ಹೊಡೆತ - ಆರ್.ಎಂ.ಮಂಜುನಾಥ ಗೌಡ

ಕೇಂದ್ರದ 10 ವರ್ಷದ ಅವಧಿಯಲ್ಲಿ ಕೃಷಿ ಕ್ಷೇತ್ರ ಬಹಳ ದೊಡ್ಡ ಹೊಡೆತಕ್ಕೆ ಸಿಲುಕಿದೆ. ಶೇಕಡಾ 80 ರಷ್ಟಿದ್ದ ನಬಾರ್ಡ್‌ ಪುನರ್ಧನ ಕಾರ್ಯಕ್ರಮ ಶೇಕಡಾ 23ಕ್ಕೆ ಕುಸಿದೆ ಎಂದು ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಆರ್‌.ಎಂ. ಮಂಜುನಾಥ ಗೌಡ ಆರೋಪಿಸಿದರು.

ಸಹ್ಯಾದ್ರಿ ಸಂಸ್ಥೆಯ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಂತೆ ವ್ಯವಹರಿಸಲು ನಿರ್ದೇಶನ ನೀಡಲಾಗುತ್ತಿದೆ. ಅದರಂತೆ ಸಹಕಾರ ಸಂಸ್ಥೆಗಳು ವ್ಯವಹಾರ ನಡೆಸಿದರೆ ಯಾವೊಬ್ಬ ರೈತನಿಗೂ ಸಕಾಲಕ್ಕೆ ಸಾಲ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬೆಳೆವಿಮೆ ಕಂಪನಿಗಳು ರೈತರಿಂದ ವಿಮೆ ಸಂಗ್ರಹಿಸಿ ಜಾಗ ಕೀಳುತ್ತಿದ್ದಾವೆ. ನಷ್ಟ ಅನುಭವಿಸಿದರೂ ಬೆಳೆವಿಮೆ ಸಿಗುವುದಿಲ್ಲ. ಹಿಂದೆ ಜಿಲ್ಲಾಧಿಕಾರಿ ಹಂತದಲ್ಲಿದ್ದಾಗ ವಿಮೆ ಸೌಲಭ್ಯ ಚೆನ್ನಾಗಿ ನಡೆಯುತ್ತಿತ್ತು. ಇಂದು ಬೆಳೆವಿಮೆ ರೈತರಿಗೆ ಶಾಪವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಬಾರ್ಡ್‌ನಿಂದ ಕಳೆದ ವರ್ಷ 700 ಕೋಟಿ ಸಾಲ ಪಡೆದಿದ್ದೆವು. ಅದಕ್ಕೆ ಪುನರ್ಧನ 315 ಕೋಟಿ ಬಂದಿದೆ. ಪ್ರಸ್ತುತ ಸಾಲಿನಲ್ಲಿ 1070 ಕೋಟಿ ಸಾಲ ಪಡೆಯಲಾಗಿತ್ತು. ಆದರೆ ಪುನರ್ಧನ ಕೇವಲ 285 ಕೋಟಿ ಮಾತ್ರ ಬಂದಿದೆ. ಹೀಗೆ ಪ್ರತಿವರ್ಷ ಪುನರ್ಧನ ಕಡಿತಗೊಳಿಸಿದರೆ ಬ್ಯಾಂಕ್‌ ನಡೆಸುವುದಾದರೂ ಹೇಗೆ. ನಬಾರ್ಡ್‌ ಕೇಂದ್ರ ಸರ್ಕಾರದ ನೆರವು ಪಡೆಯದಿದ್ದರೆ ಸಹಕಾರಿ, ಕೃಷಿ ಕ್ಷೇತ್ರ ನಷ್ಟಕ್ಕೆ ತಳ್ಳಲ್ಪಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಲ್ಲದೇ ವಾರ್ಷಿಕವಾಗಿ ಏಪ್ರಿಲ್‌ 15ಕ್ಕೆ ಪುನರ್ಧನ ಯೋಜನೆ ಘೋಷಿಸಬೇಕು. ಹಾಗಾದರೆ ಮಾತ್ರ ಬೆಳೆಸಾಲ ವಿತರಣೆ ಮಾಡಬಹುದು. ಆದರೆ ನಬಾರ್ಡ್‌ ಡಿಸೆಂಬರ್‌ ತಿಂಗಳ ಕಟಾವು ಸಂದರ್ಭದಲ್ಲಿ ಹಣ ಮಂಜೂರು ಮಾಡುವುದರಿಂದ ಪ್ರಯೋಜನ ಏನು. ಇಂತಹ ನಿರ್ಲಕ್ಷ್ಯ ಧೋರಣೆ 10 ವರ್ಷಗಳಿಂದ ಪುನರಾವರ್ತನೆ ಆಗುತ್ತಿದೆ ಎಂದು ದೂರಿದರು.

ಡಿಸಿಸಿ ಬ್ಯಾಂಕ್‌ 2,332 ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದೆ. ಅಪೆಕ್ಸ್‌ ಬ್ಯಾಂಕ್‌ ನೀಡುತ್ತಿದ್ದ ಶೇಕಡಾ 20ರ ಸಹಾಯಧನ ಕೂಡ ನಿಂತಿದೆ. ಎಲ್ಲಾ ನಿಯಮಗಳನ್ನು ಮೀರಿ ಶೇ 85 ರಷ್ಟು ಬೆಳೆಸಾಲ ನೀಡುತ್ತಿದ್ದೇವೆ. ಇದರಿಂದ ಮುಚ್ಚುವ ಹಂತದಲ್ಲಿದ್ದ ಸಂಘಗಳು ಸದೃಢಗೊಳ್ಳುತ್ತಿದೆ. ಮಹಿಳಾ ಸಂಘಗಳು ಬೆಳೆಯುತ್ತಿದೆ ಎಂದರು.‌

ಸೌಹಾರ್ದ ಮತ್ತು ಸಹಕಾರಿಯನ್ನು ಪ್ರತ್ಯೇಕವಾಗಿ ವಿಂಗಡಿಸುವುದು ಸರಿಯಲ್ಲ. ಸಹಕಾರಿ ಸಂಸ್ಥೆಗಳ ಮೇಲೆ ಹಾಕಿರುವ ಜಿಎಸ್‌ಟಿ ವಾಪಸ್ಸು ತೆಗೆಯಬೇಕು. ಸ್ವಾಮಿನಾಥನ್‌ ವರದಿ ಜಾರಿಯಾದರೆ ರೈತರಿಗೆ ಅನುಕೂಲವಾಗಲಿದೆ. ಸಂಸ್ಥೆ ಕಟ್ಟುವ ಬದಲು ಕಾಲೆಳೆಯುವ ಸಹಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಬಸವಾನಿ ವಿಜಯದೇವ್‌ ಪತ್ರಿಕಾಗೋಷ್ಟಿಯಲ್ಲಿ ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post