‌ಯಶಸ್ವಿಯಾಗಿ ನಡೆದ ಪತ್ರಿಕಾ ದಿನಾಚರಣೆ

ಅನಿಷ್ಠತನಕ್ಕೆ ಪತ್ರಿಕೆ ಗುರಾಣಿ ಆಗಬಾರದುಆರಗ ಜ್ಞಾನೇಂದ್ರ
ನಾಗರೀಕ ಸಮಾಜ ಜಾತಿ, ಧರ್ಮದ ಅಂದಕಾರದಲ್ಲಿ ಕಳೆದು ಹೋಗಿದೆ – ಕಿಮ್ಮನೆ ರತ್ನಾಕರ್‌
ವೃತ್ತಿ ಬದ್ಧತೆ ಉಳ್ಳವರನ್ನು ಬೆಂಬಲಿಸಬೇಕು – ಆರ್.ಎಂ. ಮಂಜುನಾಥ ಗೌಡ
ಪತ್ರಕರ್ತ ಮಾತ್ರ ಅಲ್ಲ ರಾಜಕಾರಣಿಗಳೂ ಸುಧಾರಿಸಬೇಕು – ಟೆಲೆಕ್ಸ್‌ ರವಿಕುಮಾರ್

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಯಶಸ್ವಿಯಾಗಿ ಲಯನ್ಸ್‌ ಭವನದಲ್ಲಿ ನೆರವೇರಿತ್ತು. ವರ್ಣ ರಂಜಿತವಾಗಿ ಮೂಡಿ ಬಂದ ಈ ಸಮಾರಂಭದಲ್ಲಿ ಒಂದಿಷ್ಟು ದಿಟ್ಟವಾದ ಅನಿಸಿಕೆ, ಚರ್ಚೆ ಹಾಗೂ ಸಾರ್ವಜನಿಕ ಜೀವನದಲ್ಲಿ ಮಹತ್ವದ ಸಾಧನೆ ಸಲ್ಲಿಸಿದ ವಿವಿಧ ಕ್ಷೇತ್ರಗಳ ಸಾಧಕರು ಪ್ರತಿಭಾವಂತದನ್ನು ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಲಾಗಿತ್ತು. ಅಲ್ಲದೇ ಸ್ಥಳೀಯ ಪತ್ರಿಕಾ ಬಳಗದಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಮಾಮೂಲಿ ಸಮಾರಂಭದಂತಾಗದೆ ಒಂದಷ್ಟು ವಿಚಾರ ಸಂಘರ್ಷಕ್ಕೂ ಈ ಪತ್ರಿಕಾ ದಿನಾಚರಣೆ ಕಾರಣವಾಗಿದ್ದು ಸಭಾಂಗಣದಲ್ಲಿ ಸಂಪೂರ್ಣ ತುಂಬಿ ಹೋಗಿದ್ದ ಸಭಿಕರಿಗೆ ಕುತೂಹಲ ಹುಟ್ಟಿಸಿತ್ತಲ್ಲದೇ ವಿವಿಧ ಆಯಾಮಗಳ ಅನಿಸಿಕೆಗಳನ್ನು ಕೇಳುವ ಅವಕಾಶವನ್ನು ಸೃಷ್ಟಿಸಿತ್ತು.

ಮೊದಲಿಗೆ ಈ ಚರ್ಚೆಗೆ ನಾಂದಿ ಹಾಡಿದ್ದು ಮಾಜಿ ಗೃಹಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರರ ನೇರ ಮಾತುಗಳು. ಪತ್ರಿಕೆ ಲಾಭದಾಯಕ ದಂಧೆ ಅಲ್ಲ. ಪೀತ ಪತ್ರಿಕೋದ್ಯಮ ಇಡೀ ಸಮಾಜಕ್ಕೆ ಮಾರಕ. ವೈಯಕ್ತಿಕ ಅನಿಷ್ಠತನ ಮುಚ್ಚಿಕೊಳ್ಳಲು ಪತ್ರಿಕೆಯನ್ನು ಗುರಾಣಿಯಾಗಿ ಬಳಸಿಕೊಳ್ಳುವ ಕಾಲ ಈಗ ಹೊರಟು ಹೋಗಿದೆ. ವೈಯಕ್ತಿಕ ತೇಜೋವಧೆ ಮಾಡಿದರೆ ಈಗ ಮುಲಾಜಿಲ್ಲದೇ ಕೋರ್ಟಿಗೆ ಎಳೆಯುತ್ತಾರೆ. ಸಮಾಜಕ್ಕೆ ಪೂರಕವಾದ ಪತ್ರಿಕೋದ್ಯಮಕ್ಕೆ ಈಗಲೂ ಗೌರವ ಇದೆ. ಯಾರದ್ದೋ ಚಾರಿತ್ರ್ಯ ಹರಣಕ್ಕೆ ಬರವಣಿಗೆ ಮಾಡುವುದು ಸಲ್ಲದು. ಅದರಿಂದಾಗುವ ಸಂಕಟ ಬರಸಿಕೊಂಡವರಿಗೆ ಮಾತ್ರ ಗೊತ್ತಾಗುತ್ತದೆ ಎಂದರಲ್ಲದೇ ತೀರ್ಥಹಳ್ಳಿ ಪತ್ರಕರ್ತರ ಸಂಘದ ಅಭಿವೃದ್ಧಿಗೆ ನಾನು ಸದಾಕಾಲ ಸ್ಪಂದಿಸಿದ್ದೇನೆ. ಪತ್ರಿಕಾಭವನ ನಿರ್ಮಾಣಕ್ಕೆ ಕೈಲಾದ ಕೊಡುಗೆ ನೀಡಿದ್ದೇನೆ ಎಂದರು.

ಬಳಿಕ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ನಾಗರೀಕ ಸಮಾಜ ಜಾತಿ, ಧರ್ಮದ ಅಂಧಕಾರದಲ್ಲಿ ಕಳೆದುಹೋಗಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೆಯ ಪಾತ್ರ ಮಹತ್ವ ಪಡೆದುಕೊಂಡಿದೆ. ಅವ್ಯವಸ್ಥೆಯನ್ನು ಆಯ್ಕೆ ಮಾಡಿ ಸಮಾಜದ ಮುಂದಿಡಬೇಕು. ಜವಾಬ್ದಾರಿಯುತ ಪತ್ರಕರ್ತನಿಗೆ ಸ್ವಲ್ಪವಾದರೂ ಸಾಹಿತ್ಯದ ಅಭಿರುಚಿ ಇರಬೇಕು. ಆಕರ್ಷಕ ವರದಿಗಾರಿಕೆಗೆ ಅದು ಅವಶ್ಯಕ. ಬರೆದುದ್ದನ್ನು ಹತ್ತಾರು ಬಾರಿ ಓದಿ ಪ್ರಾಮಾಣಿಕವಾಗಿ ಓದುಗರ ಮುಂದಿಡಬೇಕು. ಇಲ್ಲವಾದಲ್ಲಿ ಅನರ್ಥ ಸಂಭವಿಸುವ ಸಾಧ್ಯತೆ ಇರುತ್ತದೆ. ಆಳವಾದ ಸಾಮಾಜಿಕ ಪ್ರಜ್ಞೆ ಇದ್ದಲ್ಲಿ ಹೇಳಬೇಕಾದದನ್ನು ಎರಡೇ ಸಾಲಿನಲ್ಲಿ ಹೇಳುವ ಕಲೆಗಾರಿಕೆ ಇರುತ್ತದೆ. ಬಾಬರಿ ಮಸೀದಿ ಧ್ವಂಸಗೊಂಡಾಗ ಲಂಕೇಶ್‌ ಜೀವ ಪವಿತ್ರ ಇಟ್ಟಿಗೆ ಪವಿತ್ರವಲ್ಲ ಎಂಬ ಪದ ಪ್ರಯೋಗಿಸಿದ್ದರು. ಅದು ಪ್ರಜ್ಞಾವಂತರ ಹೃದಯವನ್ನು ಕಲಕಿತ್ತು. ಇಂದಿಗೂ ಅದು ಸತ್ಯವಾಗುತ್ತಲೇ ಇರುವುದು ಅವರ ದೃಷ್ಟಿಕೋನಕ್ಕೆ ಸಾಕ್ಷಿ ಎಂದರಲ್ಲದೇ ಎಲೆಕ್ಟ್ರಾನಿಕ್‌ ಮಾದ್ಯಮಗಳು ವೇಗವಾಗಿ ಸುದ್ದಿ ನೀಡುವ ಹಪಾಹಪಿಗೆ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಪರದಾಡುತ್ತಿವೆ. ಮುದ್ರಣ ಮಾದ್ಯಮವೇ ಈಗಲೂ ಗೌರವ ಉಳಿಸಿಕೊಂಡಿದೆ ಎಂದರು.

ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಆರ್‌.ಎಂ. ಮಂಜುನಾಥ ಗೌಡ ಮಾತನಾಡಿ, ಜನರ ಬವಣೆ, ಭಾವನೆ ಹಂಚಿಕೊಳ್ಳುತ್ತಿದ್ದ ನಿರ್ಭೀತ ಪತ್ರಿಕಾರಂಗ ಮರೆಯಾಗಿದೆ. ತಮ್ಮ ವೈಯಕ್ತಿಕ ಹಿತಾಸಕ್ತಿಯ ಕೆಲಸಗಳು ಆಗಲಿಲ್ಲ ಎಂದಾಕ್ಷಣ ಅದನ್ನು ಕೂಡ ಸಮುದಾಯಕ್ಕೆ ಆರೋಪಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ತೇಜೋವಧೆ ಮಾಡುವ ಚಾಳಿ ಈಗ ಹೆಚ್ಚಾಗುತ್ತಿದೆ. ಇದರ ಜೊತೆ ಅಲ್ಪ ಪ್ರಮಾಣದಲ್ಲಾದರೂ ವೃತ್ತಿ ಬದ್ಧತೆ ಇರುವ ಪ್ರಾಮಾಣಿಕರೂ ಇದ್ದಾರೆ. ಇವರನ್ನು ಬೆಂಬಲಿಸಬೇಕಾದದ್ದು ಪ್ರಜ್ಞಾವಂತರ ಕರ್ತವ್ಯವಾಗಿದೆ. ಯಾವುದೇ ಸುದ್ದಿಯ ಅನಗತ್ಯ ವೈಭವೀಕರಣ ಸುದ್ದಿ ಮಹತ್ವವನ್ನೇ ಹಾಳು ಮಾಡುತ್ತದೆ ಎಂದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಟೆಲೆಕ್ಸ್‌ ರವಿಕುಮಾರ್‌ ಮಾತನಾಡಿ, ವಾಸ್ತವದಲ್ಲಿ ಪತ್ರಕರ್ತರ ಪರಿಸ್ಥಿತಿ ದಯಾನೀಯವಾಗಿದೆ. ಯಾರೋ ಒಂದಿಷ್ಟು ಪತ್ರಕರ್ತರು ಹಾದಿ ತಪ್ಪಿದ್ದಾರೆ ಎಂದಾಕ್ಷಣ ಇಡೀ ಸಮೂಹವನ್ನು ಅನುಮಾನದ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ. ಕೋವಿಡ್‌ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಪತ್ರಕರ್ತರು ಸಾವಿಗೀಡಾದರು. ಬಹಳಷ್ಟು ಸಂಸಾರಗಳಲ್ಲಿ ಶವ ಸಂಸ್ಕಾರ ಮಾಡದ ದುಸ್ಥಿತಿ ಇತ್ತು. ಟೀಕಿಸುವ ಮೊದಲು ಮಂತ್ರಿಗಳಾಗಿ, ಶಾಸಕರಾಗಿ ಪತ್ರಿಕಾ ಸಮುದಾಯಕ್ಕೆ ಪ್ರಮಾಣಿಕ ಕೊಡುಗೆ ಏನೆಂಬುದನ್ನು ಸಂಬಂಧಿಸಿದವರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ನಾಗರೀಕರಾಗಿ ಅವರಿಗೆ ದಕ್ಕಬೇಕಾದ ಕನಿಷ್ಟ ಆರೋಗ್ಯ, ವಿಮೆ, ಕಡೇ ಪಕ್ಷ ಅತ್ಯಂತ ಚಿಕ್ಕ ನಿವೇಶನವನ್ನಾದರೂ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ತೀರ್ಥಹಳ್ಳಿಯಂತಹ ಸುಸಂಸ್ಕೃತ ಊರಿನಲ್ಲಿ ಇಲ್ಲಿಯವರೆಗೆ ಪತ್ರಿಕಾ ಭವನ ಇಲ್ಲ ಎಂಬುದೇ ವಿಪರ್ಯಾಸದ ಸಂಗತಿ. ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದ್ದರಲ್ಲದೇ ಭಾರತದ ಪತ್ರಿಕೋದ್ಯಮ ಬಂಡವಾಳಶಾಹಿ ಆರ್ಥಿಕತೆಯಿಂದ ಕ್ರಮೇಣ ಉದ್ಯಮವಾಗಿ ಬದಲಾಗುತ್ತಿದೆ. ಪತ್ರಿಕಾರಂಗ ಹಾಗೂ ಪತ್ರಕರ್ತರನ್ನು ರಾಜಕಾರಣಿಗಳೇ ನಿಯಂತ್ರಿಸಲು ಶುರುಮಾಡಿದಾಗ ಅವರ ಅಭಿವೃದ್ಧಿಯಾಗುತ್ತದೆ ಹೊರತು ಜನತೆಯ ಕಷ್ಟ ಪರಿಹಾರ ಆಗುವುದಿಲ್ಲ. ಒಳ್ಳೆಯ ಸಮಾಜ ನಿರ್ಮಾಣದಲ್ಲಿ ಪತ್ರಕರ್ತ ಮಾತ್ರ ಪ್ರಾಮಾಣಿಕವಾಗಿದ್ದರೆ ಸಾಲುದು ರಾಜಕಾರಣಿಗಳು ಕೂಡ ಅದೇ ರೀತಿ ಇರಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ಪ್ರೊ. ನಟರಾಜ್‌ ಅರಳಸುರಳಿ, ಒಂದು ಕಾಲದಲ್ಲಿ ಪತ್ರಿಕೆಗಳು ಜನ ಜೀವನದ ಪ್ರತಿಬಿಂಬವಾಗಿದ್ದವು. ಹಿಂದಿನ ತಲೆಮಾರಿಗಳ ಪ್ರತಿಭಾವಂತರನ್ನು ರೂಪಿಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿದ್ದವು. ವಾರಗಟ್ಟಲೆ ಸುದ್ದಿ ತಲುಪುವುದು ತಡವಾಗಿದ್ದರೂ ಜನತೆ ಕಾಯುತ್ತಿದ್ದರು. ಲಂಕೇಶ್‌ ಪತ್ರಿಕೆ ಆ ಕಾಲದಲ್ಲಿ ಸರ್ಕಾರವನ್ನೇ ಅಲ್ಲಾಡಿಸುವಷ್ಟು ವಿಶ್ವಾಸಾರ್ಹ ಪತ್ರಿಕೆಯಾಗಿ ಬೆಳೆದಿತ್ತು, ಈಗ ಎಲ್ಲದಕ್ಕೂ ವಾಟ್ಸಪ್‌ ಬಳಸುವ ಗೀಳು ಹೆಚ್ಚುತ್ತಿದೆ. ಆದರೆ ಪ್ರಜ್ಞಾವಂತರು ವಾಟ್ಸಪ್‌ನಲ್ಲಿ ಬಂದಿರುವುದು ಸತ್ಯವೋ ಸುಳ್ಳೋ ಎಂಬುದನ್ನು ದಿನಪತ್ರಿಕೆನ್ನು ನೋಡಿಯೇ ತೀರ್ಮಾನಿಸುವ ಮಟ್ಟಿಗಾದರೂ ವೃತ್ತ ಪತ್ರಿಕೆಗಳು ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀರ್ಥಹಳ್ಳಿ ಘಟಕದ ಅಧ್ಯಕ್ಷ ಮೋಹನ್‌ ಮುನ್ನೂರು ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರ ಪರವಾಗಿ ಜಿ.ಎಸ್.‌ ನಾರಾಯಣ ರಾವ್‌ ಮಾತನಾಡಿದರು.

ವೇದಿಕೆಯಲ್ಲಿ ನಾರಾಯಣ ಗುರು ವಿಚಾರ ವೇದಿಕೆ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ, ಡಿವೈಎಸ್ಪಿ ಗಜಾನನ ಸುತಾರ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಮುಖ್ಯಾಧಿಕಾರಿ ಕುರಿಯಕೊಸ್‌, ಜಿಲ್ಲಾ ಸಂಘದ ಉಪಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್‌, ಜಿಲ್ಲಾ ವಿಶೇಷ ಪ್ರತಿನಿಧಿ ಟಿ.ಕೆ. ರಮೇಶ್‌ ಶೆಟ್ಟಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮುರುಘರಾಜ್‌ ಕೋಣಂದೂರು, ಹಿರಿಯ ಪತ್ರಕರ್ತ ಡಿ.ಎಸ್.‌ ವಿಶ್ವನಾಥ ಶೆಟ್ಟಿ ಇದ್ದರು.

ಉದ್ಘಾಟನೆಯನ್ನು ಜಾದೂ ಕಲಾವಿದ ನಿಶ್ಚಲ್‌ ಜಾದೂಗಾರ್‌ ವಿಶಿಷ್ಟವಾಗಿ ನೆರವೇರಿಸಿದರು. ಶೇಷಾದ್ರಿ ಆರಂಭಗೀತೆ ಹಾಡಿದರು. ವಂದನಾರ್ಪಣೆಯನ್ನು ಸಂಘದ ಉಪಾಧ್ಯಕ್ಷ ಸಂತೋಷ್‌ ಕುಮಾರ್‌ ನೆರವೇರಿಸಿದರು. ರಾಮಚಂದ್ರ ಕೊಪ್ಪಲು, ಗಾಯತ್ರಿ ಶೇಷಗಿರಿ ಕಾರ್ಯಕ್ರಮ ನಿರೂಪಿಸಿದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post