ಸರ್ಕಾರಕ್ಕೆ ಕೇಳಿ ಸಾಹಿತ್ಯ ರಚಿಸಬೇಕಾ..?
ಶ್ರೀಪತಿ ಹಳಗುಂದ ಪ್ರಶ್ನೆ

ಶನಿವಾರ ಬಂಟರ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಶಿಕ್ಷಕಿ ನಾಗರತ್ನ ಕೆ.ಎಸ್. ನಿಲ್ಸ್ಕಲ್ ಅವರ ದೀಪ ಕವನ ಸಂಕಲನ ಪುಸ್ತಕ ಬಿಡುಗಡೆಗೊಂಡಿತು.
ಪುಸ್ತಕ ಬಿಡುಗಡೆಗೊಳಿಸಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಉದ್ದೇಶ ಪೂರ್ವಕವಾಗಿ ಪಠ್ಯ ಪುಸ್ತಕ ಸಮಿತಿ ಬಸವಣ್ಣ, ನಾರಾಯಣಗುರು, ಕುವೆಂಪು ಮುಂತಾದ ವೈಚಾರಿಕ ಕ್ರಾಂತಿಕಾರಿಗಳಿಗೆ ಅವಮಾನ ಮಾಡಲಾಗಿದೆ. ಫಾರ್ವರ್ಡ್ ಮಾಡುವುದು ಸೈಬರ್ ಕ್ರೈಂ ಎಂಬುದು ಸಮಿತಿಯ ಅಧ್ಯಕ್ಷರಿಗೆ ಗೊತ್ತಿರಲಿಲ್ಲವಾ. ನಾಡಗೀತೆಗೆ ಅವಮಾನ ಮಾಡುವುದೂ ನಾಡ ದ್ರೋಹದ ಕೆಲಸ ಎಂದರು.
ಪುಸ್ತಕ ಕುರಿತು ಮಾತನಾಡಿದ ಸಾಹಿತಿ ಶ್ರೀಪತಿ ಹಳಗುಂದ, ನಿಮ್ಮ ಸಾಹಿತ್ಯ ತೆಗೆದಿದ್ದೇವೆ ಎಂಬ ಪೋನ್ ಕರೆ ಯಾವ ಕ್ಷಣದಲ್ಲಿಯಾದರೂ ಸರ್ಕಾರದಿಂದ ಬರಬಹುದು ಎಂಬ ಆತಂಕ ಎದುರಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಸಾಹಿತ್ಯ ಬರೆಯುವುದು ಕಷ್ಟಕರವಾಗುತ್ತಿದೆ. ಅಂಕು ಡೊಂಕುಗಳನ್ನು ತಿದ್ದುವಂತಹಂತಹ ಸಾಹಿತಿಗಳಿಗೆ ಎಚ್ಚರಿಕೆ ಘಂಟೆ ನೀಡಲಾಗುತ್ತಿದೆ. ಸಾಹಿತ್ಯ ಒಂದೇ ರಾತ್ರಿಯಲ್ಲಿ ಬದಲಾವಣೆ ಬಯಸಬಾರದು. ಮಾಗಿದಷ್ಟು ಸಾಹಿತ್ಯದ ಭಾವ ವೃದ್ಧಿಯಾಗಬೇಕು. ಸಾಹಿತ್ಯದೊಳಗೆ ಪ್ರೀತಿ, ಪ್ರೇಮ, ಭಾವನೆ, ಕಷ್ಟ, ಸುಖ, ದುಖಃ ಮುಂತಾದ ಆಯಾಮಗಳು ಇರಬೇಕು. ಆ ಮಾದರಿಯಲ್ಲಿ ಕವನ ಸಂಕಲನ ಯಶಸ್ವಿಯಾಗಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ಜೆ. ರಮೇಶ್ ಮಾತನಾಡಿ, 20ನೇ ಶತಮಾನದಲ್ಲಿ ಅಂಧಕಾರ ಹೆಚ್ಚಾಗುತ್ತಿದ್ದು ದೇವಸ್ಥಾನಗಳು ಬೆಳೆಯುತ್ತಿವೆ . ಈಚೆಗೆ ಸಾಹಿತ್ಯದ ಜ್ಞಾನ ಇಲ್ಲದವರು ಸಾಹಿತಿಗಳನ್ನು ಹಿಯಾಳಿಸುವ, ಟೀಕಿಸುವ ಪ್ರವೃತ್ತಿ ಬೆಳೆಯುತ್ತಿದೆ. ಶಿಕ್ಷಣ ಕ್ಷೇತ್ರವನ್ನು ಜ್ಞಾನದಿಂದ ಅಜ್ಞಾನಕ್ಕೆ ದೂಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ವಹಿಸಿ ಮಾತನಾಡಿದರು. ಹಿರಿಯ ಸಾಹಿತಿ ಡಾ.ಜೆ.ಕೆ. ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಆನಂದಕುಮಾರ್, ಲೇಖಕಿ ನಾಗರತ್ನ ಕೆಎಸ್ ನಿಲ್ಸಕಲ್ ಮಾತನಾಡಿದರು. ತಾಲ್ಲೂಕು ಕಸಾಪ ಕಾರ್ಯದರ್ಶಿ ಸೌಳಿ ನಾಗರಾಜ್ ಸ್ವಾಗತಿಸಿದರು. ಶಿಕ್ಷಕ ಎನ್.ಜಿ. ಸ್ವಾಮಿ ನಿರೂಪಿಸಿದರು.