ಸಭೆ ಬಹಿಷ್ಕರಿಸಿ ಹೊರನಡೆದ ಪೂರ್ಣೇಶ್ ಕೆಳಕೆರೆ
ಆರಗ ಜ್ಞಾನೇಂದ್ರ - ಪೂರ್ಣೇಶ್ ನಡುವೆ ವಾಕ್ ಸಮರ
ತೀರ್ಥಹಳ್ಳಿಯ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಪೂರ್ಣೇಶ್ ಕೆಳಕೆರೆ ತಾಲ್ಲೂಕು ಪಂಚಾಯಿತಿ ಆಡಳಿತ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಡಿಪಿ ಸಭೆಯ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ಸಭಾ ನಿರ್ಣಯದಂತೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ನಾವೇಕೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಪ್ರಶ್ನಿಸಿದರು.
ಆಗ ಶಾಸಕ, ಸಭೆಯ ಅಧ್ಯಕ್ಷ ಆರಗ ಜ್ಞಾನೇಂದ್ರ ಮಧ್ಯೆ ಪ್ರವೇಶಿಸಿ ಇದು ಪ್ರತಿಭಟನಾ. ಅಲ್ಲಪ್ಪ ಅನುಪಾಲನ ವರದಿ ಮೇಲೆ ಚರ್ಚೆ ಮಾಡು ಎಂದು ತಾಕೀತು ಮಾಡಿದರು. ಪ್ರತಿಯಾಗಿ ಪೂರ್ಣೇಶ್ ಸಭೆಯ ಸದಸ್ಯ ಕಾರ್ಯದರ್ಶಿ, ತಾಲ್ಲೂಕು ಪಂಚಾಯಿ ಇಓ ಶೈಲಾ ಅವರನ್ನು ಹೊರಗೆ ಕಳಿಸಬೇಕು ಎಂದು ಒತ್ತಾಯಿಸಿದರು.
ಅದೆಲ್ಲ ಆಗಲ್ಲ ನೀನು ಸ್ವಲ್ಪ ಕುತ್ಕೋ ಎಂದು ಆರಗ ಗದರುವ ಧ್ವನಿಯಲ್ಲಿ ಹೇಳುತ್ತಿದ್ದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೂರ್ಣೇಶ್ ಕೆಳಕೆರೆ ದಿಕ್ಕಾರ... ದಿಕ್ಕಾರ... ಇಓ ಮೇಡಂಗೆ ದಿಕ್ಕಾರ. ನಾನು ಸಭೆಯನ್ನು ಬಹಿಷ್ಕರಿಸುತ್ತಿದ್ದೇನೆ ಎಂದು ಸಭೆಯ ಹೊರ ನಡೆದರು. ಅವರು ಹೊರ ನಡೆದ 10 ನಿಮಿಷಗಳಲ್ಲಿ ಅನುಪಾಲನ ವರದಿ ಮೇಲಿನ ಚರ್ಚೆ ಬರ್ಕಾಸ್ತು ಆಯಿತು ಎಂದು ಆರಗ ಘೋಷಿಸಿದರು.
ಪೂರ್ಣೇಶ್-ಆರಗ ನಡುವಿನ ಜಟಪಟಿಯನ್ನು ಉಳಿದ ನಾಮನಿರ್ದೇಶಿತ ಸದಸ್ಯರು ಮೌನವಾಗಿ ಕುಳಿತು ನೋಡುತ್ತ ಕುಳಿತರೇ ಹೊರತು ಅವರ ಜೊತೆಗೆ ಕೈಜೋಡಿಸಲಿಲ್ಲ. ಸಭೆ ಆರಂಭವಾಗಿ ಒಂದು ಗಂಟೆಯಾದರು ಮೈಕ್ ದುರಸ್ಥಿ ನಡೆಯುತ್ತಿದ್ದುದು ಈ ಸಭೆಯನ್ನು ತಾಲ್ಲೂಕು ಪಂಚಾಯಿತಿ ಎಷ್ಟು ಅಸಡ್ಡೆಯಿಂದ ಆಯೋಜಿಸುತ್ತಿದೆ ಎನ್ನುವುದಕ್ಕೆ ನೈಜ ಉದಾಹರಣೆಯಾಗಿ ಕಾಣಿಸುತ್ತಿತ್ತು.