ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ ಶೃಂಗೇರಿ ವಿಧಾನಸಭಾ ಫಲಿತಾಂಶ

ಮತ ಎಣಿಕೆ ಸಿಸಿಟಿವಿ ದೃಶ್ಯ ಲಭ್ಯವಿಲ್ಲ ಎಂದು ಚುನಾವಣಾ ಆಯೋಗ ಸಬೂಬು
ಒಪ್ಪದ ಸುಪ್ರಿಂ ಕೋರ್ಟ್‌ ನಿಂದ ಕಾನೂನು ಕ್ರಮದ ಎಚ್ಚರಿಕೆ

ಚುನಾವಣಾ ಆಯೋಗದ ವಿರುದ್ಧ ರಾಷ್ಟ್ರವ್ಯಾಪಿ ಅಸಮಧಾನ ಮತ್ತು ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆಯ ದಾಳಿ ವಿಪಕ್ಷಗಳಿಂದ ನಡೆಯುತ್ತಿದ್ದಂತೆಯೇ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ರಾಷ್ಟ್ರವ್ಯಾಪಿ ಸದ್ದು ಮಾಡಿದೆ. ಕೆಲ ಸಮಯದಿಂದ ಹಾವು ಏಣಿಯಾಟದಂತೆ ಒಮ್ಮೆ ಹಾಲಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ಇನ್ನೇನು ರಾಜೇಗೌಡರ ಶಾಸಕ ಸ್ಥಾನ ಹೊರಟು ಹೋಗಿ ಡಿ.ಎನ್.ಜೀವರಾಜ್‌ ಶಾಸಕರಾಗೇ ಬಿಟ್ಟರು ಎನ್ನುವ ಮಟ್ಟಿಗೆ ಸಿನಿಮೀಯ ದೃಶ್ಯಗಳು ಈ ಕ್ಷೇತ್ರದ ಚುನಾವಣಾ ಫಲಿತಾಂಶಕ್ಕೆ ಸಾಕ್ಷಿಯಾಗಿದ್ದವು.

2023ರ ವಿಧಾನಸಭಾ ಚುನಾವಣೆಯಲ್ಲಿ ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ಅವರನ್ನು 201 ಮತಗಳಿಂದ ಸೋಲಿಸಿದ್ದರು. 1,811 ಅಂಚೆ ಮತಗಳು ಚಲಾವಣೆಯಾಗಿದ್ದವು. ಆದರೆ ಫಲಿತಾಂಶದ ವಿರುದ್ಧ ಜೀವರಾಜ್‌ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿ ಮರು ಎಣಿಕೆಗೆ ವಿನಂತಿಸಿದ್ದರು. ವಿಚಾರಣೆ ಬಳಿಕ ಹೈಕೋರ್ಟ್‌ ಅಂಚೆ ಮತಗಳ ಮರು ಎಣಿಕೆಗೆ ಆದೇಶ ನೀಡಿತ್ತು.

ಆ ಪ್ರಕಾರ ಇತ್ತೀಚೆಗೆ ಅಂಚೆ ಮತಗಳ ಮರು ಮತ ಎಣಿಕೆ ನಡೆಸಲಾಗಿ 2023ರಲ್ಲಿ ಸಿಂಧುವಾಗಿದ್ದ 1,540 ಮತಗಳಲ್ಲಿ 255 ಮತಗಳು ಮರು ಎಣಿಕೆ ವೇಳೆ ಅಸಿಂಧು ಎಂದು ಘೋಷಣೆಯಾದ ಕಾರಣ 52 ಮತಗಳ ಮುನ್ನಡೆ ಸಾಧಿಸಿದ್ದ ಜೀವರಾಜ್ ಅವರನ್ನು ಚುನಾಯಿತ ಎಂದು ಘೋಷಿಸುವ ಮೂಲಕ ಶಾಸಕರಾಗಿದ್ದ ರಾಜೇಗೌಡರಿಗೆ ಹಿನ್ನಡೆಯಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕಾರಣ ಶಾಸಕರನ್ನಾಗಿ ರಾಜೇಗೌಡ ಅವರನ್ನು ಸುಪ್ರೀಂ ಕೋರ್ಟ್ ಮರುಸ್ಥಾಪಿಸಿತ್ತು.

ಫಲಿತಾಂಶದ ವಿರುದ್ಧ ಟಿ.ಡಿ.ರಾಜೇಗೌಡ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಿನ್ನೆ ನಡೆದಿದ್ದು ಸುಪ್ರಿಂ ಕೋರ್ಟ್‌ ಚುನಾವಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಕಾರಣ ಮರು ಮತ ಎಣಿಕೆಯ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದರೆ, 2023ರ ಮತ ಎಣಿಕೆಯ ವಿಡಿಯೋ ಲಭ್ಯವಾಗುತ್ತಿಲ್ಲ ಎಂದು ಚುನಾವಣಾ ಆಯೋಗದ ವಕೀಲರು ಹೇಳಿದಾಗ ಅದನ್ನು ಒಪ್ಪದ ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಹಾಗೂ ಸಂಜೀವ್‌ ಸಚ್‌ದೇವ್‌ ಅವರ ಪೀಠ ಇದು ನಿಮ್ಮ ಕೆಲಸ. ಮೂಲ ವಿಡಿಯೋ ಎಲ್ಲಿ? ಆ ವಿಡಿಯೋ ಲಭ್ಯವಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ವರ್ಗಾವಣೆಯಾಗಿರುವುದರಿಂದ ದಾಖಲೆಗಳನ್ನು ಒದಗಿಸುವುದು ಕಷ್ಟವಾಗುತ್ತಿದೆ ಎಂದು ವಕೀಲರು ವಾದಿಸಿದರು. ಈ ವಾದವನ್ನು ಪೀಠ ಒಪ್ಪಲಿಲ್ಲ. ಇಂತಹ ನೆಪಗಳನ್ನು ಹೇಳಕೂಡದು ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಹೋದಲ್ಲಿ ಚುನಾವಣಾ ಆಯೋಗದ ವಿರುದ್ಧವೇ ಪ್ರತಿಕೂಲ ಅಭಿಪ್ರಾಯ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಮುಂದಿನ ವಿಚಾರಣೆ ಫೆಬ್ರವರಿ 15ಕ್ಕೆ ನಡೆಯಲಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post