ಬಿಜೆಪಿ ಪ್ರೀತಿ ಇರುವವರು ಕಾಂಗ್ರೆಸ್ಸಿನಿಂದ ಹೊರಹೋಗಲಿ
ಅಭಿವೃದ್ಧಿ ಆಗುತ್ತಿರುವುದು ಶಾಸಕರು ಮತ್ತು ಅವರ ಹಿಂಬಾಲಕರು
ವೈಯಕ್ತಿಕವಾಗಿ ನಾನೆಂದು ದ್ವೇಷದ ರಾಜಕಾರಣ ಮಾಡುವುದಿಲ್ಲ. ಆದರೆ ಸೈದ್ಧಾಂತಿಕವಾಗಿ ನನ್ನ ಕೊನೆ
ಉಸಿರು ಇರುವ ತನಕವೂ ಬಿಜೆಪಿ ವಿರುದ್ಧ ಹೋರಾಡುತ್ತೇನೆ. ನಮ್ಮದು ಒಗ್ಗೂಡಿಸುವ ಸಿದ್ಧಾಂತವಾದರೆ ವಿಭಜನೆ
ಅವರ ಸಿದ್ಧಾಂತ. ಕಾಂಗ್ರೆಸ್ ಪಕ್ಷದಲ್ಲಿದ್ದು ಬಿಜೆಪಿ ಪರ ಒಲವು ಅಥವಾ ಮೆದು ಧೋರಣೆ ಉಳ್ಳವರು ದಯಮಾಡಿ
ಹೊರಗೆ ಹೋಗಿ ಎಂದು ರಾಹುಲ್ ಗಾಂಧಿ ಅವರೇ ಹೇಳಿದ್ದಾರೆ. ಪಕ್ಷವನ್ನು ಹೀನಾಯವಾಗಿ ಟೀಕಿಸುವ ವಿಜಯೇಂದ್ರ,
ಆರ್.ಅಶೋಕ್, ಬಿ.ವೈ.ರಾಘವೇಂದ್ರ, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಅಂತವರ ಜೊತೆಯಲ್ಲಿ ಕಸ್ತೂರಿ
ರಂಗನ್ ವರದಿ ವಿರೋಧಿಸಿ ಹೆಜ್ಜೆ ಹಾಕುತ್ತೀನಿ ಎನ್ನುವವರು ಏನನ್ನು ಹೇಳಲು ಹೊರಟಿದ್ದಾರೆ. ದಯಮಾಡಿ
ಅವರು ಬಿಜೆಪಿಗೆ ಹೋಗಲಿ ನಾವೆ ಬ್ಯಾಂಡು, ವಾಲಗ ಏರ್ಪಾಡು ಮಾಡಿ ಕಳುಹಿಸಿಕೊಡುತ್ತೇನೆ ಎಂದು ಮಾಜಿ
ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಮುಳುಬಾಗಿಲು ಗ್ರಾಮ ಪಂಚಾಯಿತಿ ಬಿಂತ್ಲಾದಿಂದ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆ, ಪ್ರತಿಭಟನಾ
ಸಭೆಯಲ್ಲಿ ಮಾತನಾಡಿದ ಅವರು, ಗಾಂಧಿ, ಅಂಬೇಡ್ಕರ್, ನೆಹರು ಸಿದ್ಧಾಂತದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ
ನನ್ನ ಕೈಲಾದ ಸೇವೆ ಸಲ್ಲಿಸಿದ್ದೇನೆ. ಕಸ್ತೂರಿ ರಂಗನ್ ವರದಿ ಜಾರಿಗೆ ಬರಲು ನರೇಂದ್ರ ಮೋದಿ ನೇತೃತ್ವದ
ಎನ್‌ಡಿಎ ಸರ್ಕಾರವೇ ಸ್ಪಷ್ಟ ಕಾರಣ. ಜ್ಞಾನೇಂದ್ರ, ಸಂಸದ ರಾಘವೇಂದ್ರ ಅವರ ವಿರುದ್ಧ ಮೊದಲು ಹೋರಾಡಲಿ
ಎಂದು ಆಕ್ರೋಶದಿಂದ ನುಡಿದರು.
ಜನಪರ ಕಾಳಜಿಗೆ ಹಾಗೂ ಬಿಜೆಪಿಗೆ ಸಂಬಂಧವೇ ಇಲ್ಲ. ಅಭಿವೃದ್ಧಿ ಹೆಸರಿನಲ್ಲಿ ತೀರ್ಥಹಳ್ಳಿಯಲ್ಲಿ
ಶಾಸಕ ಆರಗ ಜ್ಞಾನೇಂದ್ರ ಮತ್ತು ಅವರ ಹಿಂಬಾಲಕರು ಎಲ್ಲಿ ಆಸ್ತಿ ಕೊಂಡಿದ್ದಾರೆಯೋ ಅಲ್ಲಿ ರಿಂಗ್ ರೋಡ್
ಹೋಗುತ್ತಿದೆ. ಕಿತ್ತನಗದ್ದೆಯಲ್ಲಿ ಒಂದು ಎಕರೆ ಭೂಮಿಯನ್ನು 7ವರೆ ಕೋಟಿಗೆ ಕೊಳ್ಳುತ್ತಾರೆ. ನನ್ನ
ಬಳಿ 5ವರೆ ಎಕರೆ ಜಮೀನಿದ್ದು ನನಗೂ ಎಕರೆಗೆ ಅಷ್ಟೇ ಹಣ ನೀಡಿ ಕೊಳ್ಳುವುದಾದರೆ ಧಾರಾಳವಾಗಿ ಕೊಟ್ಟು
ನನ್ನ ಸಾಲ ತೀರಿಸಿಕೊಂಡು ನೆಮ್ಮದಿಯಾಗಿರುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಸಚಿವ ಎಸ್.ಮಧು ಬಂಗಾರಪ್ಪ ಮಾತನಾಡಿ, ಕಾಂಗ್ರೆಸ್
ಸರ್ಕಾರ ಉಳುವವನೆ ಹೊಲದೊಡೆಯ, ಪಾರಂಪರಿಕ ಅರಣ್ಯವಾಸಿ, ಬಗರ್‌ಹುಕುಂ, ರೈತರ ಪಂಪ್ ಸೆಟ್‌ಗಳಿಗೆ ಉಚಿತ
ವಿದ್ಯುತ್, ಅನ್ನಭಾಗ್ಯ ಹೀಗೆ ನೂರಾರು ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಅಂತಹ ಒಂದು ಕಾರ್ಯಕ್ರಮವನ್ನಾದರು
ಬಿಜೆಪಿ ನೀಡಿದ್ದರೆ ತೋರಿಸಲಿ. ಕಸ್ತೂರಿ ರಂಗನ್ ವರದಿಯನ್ನು ಜಾರಿ
ಮಾಡುತ್ತೇವೆ ಎಂಬ ಬಗ್ಗೆ ಹಸಿರುಪೀಠಕ್ಕೆ ಅಫಿಡೆವಿಡ್ ಸಲ್ಲಿಸಿದ್ದೇ 2014ರ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ. ಇದರ ವಿರುದ್ಧ ಒಂದು ತಿಂಗಳಲ್ಲಿ ಲಕ್ಷಾಂತರ
ರೈತರನ್ನು ಸೇರಿಸಿ ಹೋರಾಟ ಮಾಡುತ್ತೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎಂ.ರಮೇಶ್ ಹೆಗ್ಡೆ
ಮಾತನಾಡಿ,
ಪ್ರತಿಯೊಂದು ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುತ್ತೇವೆ
ಎಂದು ಅಫಿಡೆವಿಡ್ ಹಾಕಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಇವೆಲ್ಲವೂ ಸ್ಪಷ್ಟವಾಗಿ
ದಾಖಲೆಗಳಲ್ಲಿದೆ. ಇದನ್ನು ಮರೆಮಾಚುವುದು ಏಕೆ ಎಂದು ಹೇಳಿದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಸ್ತೂರಿ ರಂಗನ್
ವಿರುದ್ಧ 2016ರ
ಸಚಿವನಾಗಿದ್ದ ಅವಧಿಯಲ್ಲಿ ಗ್ರಾಮವಾರು ಸಭೆ ನಡೆಸಿ ಅರಣ್ಯ ಸಚಿವ ರಮಾನಾಥ ರೈಗೆ ವರದಿ ಸಲ್ಲಿಸಿದ್ದೆ.
ನನ್ನಂತೆಯೇ ಮಲೆನಾಡು ಭಾಗದ ಶಾಸಕರ ವರದಿ ಆಧರಿಸಿ ಕೇಂದ್ರಕ್ಕೆ ಸಿದ್ದರಾಮಯ್ಯ ನೇತೃತ್ವದಲ್ಲಿ ಬೇಡ ಎಂಬ ವರದಿ
ಸಲ್ಲಿಸಿದ್ದೇವೆ. ಇದೀಗ ಬಿಜೆಪಿ ಜನಸಾಮಾನ್ಯರಿಗೆ ತೊಂದರೆ ಕೊಡಲು ವರದಿ ಜಾರಿಗೆ ಮುಂದಾಗಿದೆ ಎಂದು ಹೇಳಿದರು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಪರಿಸರ ಸೂಕ್ಷ್ಮ
ವಲಯ ಗುರುತಿಸಿರುವ ಒಟ್ಟಾರೆ ಪ್ರದೇಶದಲ್ಲಿ 4 ಸಾವಿರ ಹೆಕ್ಟೇರ್
ಪ್ರದೇಶದಲ್ಲಿ ಜನವಸತಿ ಇದೆ. ಮರಣಶಾಸನ ಆಗಲು ಬಿಡುವುದಿಲ್ಲ ಹೇಳಿದರು.
ಜವಳಿ ನಿಗಮ ಮಂಡಳಿಯ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ, ಎಂಎಡಿಬಿ
ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಜಿಲ್ಲಾ
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ, ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಕೆಸ್ತೂರು ಮಂಜುನಾಥ, ಗ್ರಾಮಾಂತರ ಅಧ್ಯಕ್ಷ ಮುಡುಬ
ರಾಘವೇಂದ್ರ, ಮುಖಂಡರಾದ ಡಾ.ಶ್ರೀನಿವಾಸ ಕರಿಯಣ್ಣ, ಕಡ್ತೂರು ದಿನೇಶ್, ಕಲಗೋಡು ರತ್ನಾಕರ, ರಮೇಶ್ ಶಂಕರಘಟ್ಟ, ಶಚೀಂದ್ರ ಹೆಗ್ಡೆ, ರತ್ನಾಕರ ಎನ್ ಶೆಟ್ಟಿ ಮತ್ತಿತರರು ಇದ್ದರು.
ಸಭೆಯ ಸ್ವಾರಸ್ಯಗಳು
ಕಿಮ್ಮನೆ ಕುರಿತು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಕಿಮ್ಮನೆ ಜ್ಞಾನ ಭಂಡಾರವಿದ್ದಂತೆ. ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು “ಈ ಬಾರಿ ಕಿಮ್ಮನೆ ಉಳಿದವರು ಸುಮ್ಮನೆ” ಎಂದಾಗ ಖುಷಿಯಾಯಿತು. ನಿಜವಾಗಿಯೂ ಈ ಬಾರಿ ಕಿಮ್ಮನೆ ಉಳಿದವರು ಸುಮ್ಮನೆಯೇ… ಎಂದು ಹೇಳಿದಾಗ ಸಭೆಯಲ್ಲಿ ಹರ್ಷೋದ್ಗಾರ ಎದ್ದಿತು.
ಇಡೀ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದು ಬ್ಲಾಕ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಆಗಾಗ ಕಾರ್ಯಕ್ರಮದ ಮಧ್ಯೆ ಎಡವಟ್ಟಾಗುತ್ತಿದ್ದುದು ಹೊಸದಾಗಿ ತೀರ್ಥಹಳ್ಳಿ ಪ್ರಚಾರ ಸಮಿತಿ ಅಧ್ಯಕ್ಷರುಗಳಾದ ವಾಸುಕಿ ಮತ್ತು ಕೇಳೂರು ಮಿತ್ರ ತಿದ್ದುಪಡಿ ಮಾಡಲು ಹೊರಟಾಗ ಕೆಸ್ತೂರು ಮೈಕ್ ಆನ್ ಇದೆ ಎಂಬುದನ್ನು ಮರೆತು ಜೋರಾಗಿ ಅವರಿಗೆ ಗದರಿಸಿ ವಾಪಾಸ್ಸು ಕಳಿಸುತ್ತಿದ್ದು ರಂಜನೀಯವಾಗಿ ಕಂಡು ಬಂತು.
ಕಾರ್ಯಕರ್ತರುಗಳು ಈ ಸಭೆಯಲ್ಲಿ ಕಾಂಗ್ರೆಸ್ ಪ್ರೇಮವನ್ನು ನಿಷ್ಠೆಯಿಂದ ತೋರಿದರು. ಸಹಕಾರ ವೇದಿಕೆ ಹೆಸರಿನಲ್ಲಿ ಮಂಜುನಾಥ ಗೌಡರ ಕಾರ್ಯಕ್ರಮಕ್ಕೆ ಬಂದವರಲ್ಲಿ ಒಬ್ಬರೂ ತಪ್ಪಿಸಿಕೊಳ್ಳದೇ ಈ ಕಾರ್ಯಕ್ರಮಕ್ಕೂ ಬಂದು ಶತಾಯಗತಾಯ ಕಿಮ್ಮನೆಯವರಿಗೂ ಮುಖ ತೋರಿಸಿ ಸಂಭವನೀಯ ಅಪಾಯಗಳಿಂದ ಪಾರಾದರು?
