ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಪಶ್ಚಿಮಘಟ್ಟ ವಾಸಿಗಳು ಬಲಿ
ಕಸ್ತೂರಿ ರಂಗನ್ ವರದಿ ವಿರುದ್ಧ ಆರಗ ಜ್ಞಾನೇಂದ್ರ ಕೆಂಡಮಂಡಲ
ಮೊದಲೇ ಅರಣ್ಯ ಕಾನೂನು ಸುಳಿಯಲ್ಲಿ ಹೈರಾಣಾಗಿದ್ದೇವೆ. ಈಗ ಅದು ಸಾಲದು
ಎನ್ನುವಂತೆ ಕಸ್ತೂರಿ ರಂಗನ್ ವರದಿ ಆತಂಕ.
ವರ್ಷಕ್ಕೊಮ್ಮೆ ನಮ್ಮೂರಿನ ಕಾಡು ಸುತ್ತಾಡುವಜನ ನಮಗೆ ಪರಿಸರದ ಪಾಠ ಮಾಡುತ್ತಾರೆ ಪ್ರಶ್ನಿಸುತ್ತಾರೆ. ಹಾಗಾದರೆ
ನಾವು ಪಶ್ಚಿಮಘಟ್ಟ ಪ್ರದೇಶದಲ್ಲಿ ಹುಟ್ಟಿದ್ದು ತಪ್ಪೇ ಎಂದು ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ
ವ್ಯಕ್ತ ಪಡಿಸಿದ್ದಾರೆ .
ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಲ್ಲಿನ ಶಾಂತವೇರಿ ಗೋಪಾಲಗೌಡ
ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜನಾಂದೋಲನ ಸಭೆಯಲ್ಲಿ ಅವರು ಮಾತನಾಡಿ, ಕಾಯ್ದೆಯ ತೂಗುಕತ್ತಿಗೆ ಸಿಲುಕಿ ನಿತ್ಯ
ಆತಂಕದಿಂದ ಬದುಕುವ ಸ್ಥಿತಿ ಎದುರಾಗಿದೆ ಎಂದು ಬೇಸರಿಸಿದರು.
1932ರ ಮಹರಾಜರ
ಕಾಲದ ಆಡಳಿತದಲ್ಲಿ ಮಂಜೂರಾದ ಹಕ್ಕುಪತ್ರ,
ಸಾಗುವಳಿ ಚೀಟಿ ರದ್ದಾಗುವ ಹಂತಕ್ಕೆ ತಲುಪಿದೆ. ಅರಣ್ಯ ಇಲಾಖೆಯನ್ನು ಪ್ರಶ್ನಿಸಿದರೆ 1925ರಲ್ಲಿ ಅರಣ್ಯ
ಅಧಿಸೂಚನೆಗೊಂಡಿದೆ ಎಂಬ ಸಬೂಬು ದೊರೆಯುತ್ತದೆ. ಇಂತಹ ದುರ್ದಿನದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ
ಗುರುತಿಸಿದೆ ಜನವಸತಿ ಎಲ್ಲಿಗೆ ಹೋಗಬೇಕು ಎಂದು ಹೇಳಿದ ಅವರು .
ಜಾಗತಿಕ ಮಟ್ಟದಲ್ಲಿ ಪರಿಸರಕ್ಕೆ ಹಾನಿ ಮಾಡುವ ಬಹುರಾಷ್ಟ್ರೀಯ
ಕಂಪನಿಗಳ ಲಾಬಿ ನಮಗೆ ಗೊತ್ತಿದೆ. ಅವುಗಳ ದೇಣಿಗೆಯಲ್ಲಿ ಬದುಕುತ್ತಿರುವ ಗೋವಾ ಫೌಂಡೇಷನ್
ಸೇರಿದಂತೆ ಇತರೆ ಪರಿಸರ ಆಸಕ್ತ ಗುಂಪುಗಳು ಹಸಿರುಪೀಠಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಏಕಪಕ್ಷೀಯ ಆದೇಶಗಳ ಮೂಲಕ ಘಟ್ಟ ಸಾಲಿನ ಬದುಕು ಮುರಾಬಟ್ಟೆ ಆಗುವಂತ ಸ್ಥಿತಿ
ನಿರ್ಮಿಸುತ್ತಿದ್ದಾರೆ ಎಂದು ದೂರಿದರು.
ಇಲ್ಲಿನ ನೆಲವಾಸಿಗಳು ಭೂಮಿಯ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ.
ನಾಗರೀಕ ಸೌಲಭ್ಯದಿಂದ ವಂಚಿಸಿ ಒಕ್ಕಲೆಬ್ಬಿಸುವ ಕುತಂತ್ರ ಅರಣ್ಯ, ಪರಿಸರ ಕಾಯ್ದೆಯಡಿ ನಿರ್ಮಾಣ ಮಾಡಲಾಗುತ್ತಿದೆ.
ಅರಣ್ಯ ಪ್ರದೇಶದಿಂದ ಹೊರಗೆ ಹೋಗುತ್ತೇವೆ ಎಂದರೂ ಪರಿಹಾರ ಕೊಡುವುದಿಲ್ಲ. ಪರಿಹಾರಕ್ಕಾಗಿಯೇ ₹1200 ಕೋಟಿ
ಮೀಸಲಿರಿಸಿದೆ. ಆದರೆ ಅಧಿಕಾರಿಗಳು ಕಿಕ್ ಬ್ಯಾಕ್ ಸಿಗುವುದಿಲ್ಲ ಸುಮ್ಮನೆ ಕುಳಿತಿದ್ದಾರೆ
ಎಂದು ಆರೋಪಿಸಿದ್ದಾರೆ .
“ಮಾಧವ
ಗಾಡ್ಗೀಲ್ ವರದಿ ಕೈಬಿಟ್ಟಿಲ್ಲ. ಅದನ್ನು ಸರಳೀಕರಣ,
ಪುನರ್ ಪರಿಶೀಲನೆಗಾಗಿ ಕಸ್ತೂರಿ ರಂಗನ್ ಸಮಿತಿ ರಚನೆ ಮಾಡಿದ್ದಾರೆ. ಹೊಸದಾಗಿ ಮನೆ
ನಿರ್ಮಿಸುವುದು ಕೂಡ ಅಪರಾಧ. ವರದಿಯಲ್ಲಿ
ಪ್ರಸ್ತುತ ಇರುವ ನಿಯಂತ್ರಿತ ಸಂಸ್ಥೆಗಳನ್ನು ಹಾಗೆ ಇಟ್ಟುಕೊಳ್ಳಬೇಕೆಂಬ ಹೇಳಿಕೆ ನೀಡಿದೆ. ಅಂದರೆ
ಮರ ಕಡಿಯಲೆಂದೆ ಹುಟ್ಟಿಕೊಂಡಿರುವ ಕರ್ನಾಟಕ ಅರಣ್ಯ ಇಲಾಖೆಯನ್ನು ಕಾಯ್ದೆಯಡಿ ಪೋಷಿಸಬೇಕು.
ವನ್ಯಜೀವಿ ಕಾಯ್ದೆಯಡಿ ರಸ್ತೆಗೆ ಬಿದ್ದ ಮರ ತೆಗೆಯುವಂತಿಲ್ಲ. ಅಲ್ಲೇ ಮರ ಲಡ್ಡಾಗುವಂತೆ
ಮಾಡಬೇಕು. ಹಾಗಾದರೆ ರಸ್ತೆ ಸಂಪರ್ಕದ ಕಥೆ ಏನು” ಎಂದು ದಿಕ್ಸೂಚಿ ಭಾಷಣ ಮಾಡಿದ ದಿಗಂತ್
ದಿಂಬೈಲು ಕೇಳಿದರು.
ಅಧಿಕಾರಿಗಳ ಪ್ರಕಾರ ಸುಸ್ಥಿರ ಅಭಿವೃದ್ಧಿ ಎಂದರೆ ಏನು. ಕೃತಕ ಬೆಳಕು
ಬೇಕೆನ್ನುವ ನಾಗರೀಕ ಸಮಾಜ ಉಷ್ಣ ವಿದ್ಯುತ್ ಸ್ಥಾವರ, ಜಲ ವಿದ್ಯುತ್ ಘಟಕಕ್ಕೆ ಪ್ರೋತ್ಸಾಹ ನೀಡಬೇಕೆನ್ನುವುದು ಹಾಸ್ಯಸ್ಪದ.
ಪ್ರತಿ 725 ದಿನಕ್ಕೊಮ್ಮೆ
ಪರಿಸರ ಸೂಕ್ಷ್ಮ ವಲಯ ಕರಡು ಜಾರಿ ಮಾಡುತ್ತದೆ. ಪರಿಸರ ಉಳಿಸಲು ಅರಣ್ಯ ಕಾಯ್ದೆಗಳು ಸಾಕು.
ಈಗಾಗಲೇ ಮುಗಿದು ಹೋದ ಮುಳುಗಡೆ ಸಂತ್ರಸ್ತರ ಕಣ್ಣೀರು ಅಳಿಸಲು ಯಾವ ಆಡಳಿತಕ್ಕೂ ಸಾಧ್ಯವಾಗಿಲ್ಲ.
ವರದಿ ಜಾರಿಯಾದೆ ಅದೇ ಸ್ಥಿತಿ ಮುಂದೆ ಜರುಗಲಿದೆ ಎಂದರು.
“ಕಸ್ತೂರಿ
ರಂಗನ್ ವರದಿ ಅಧ್ಯಯನಕ್ಕೆ ಯೋಗ್ಯವಾದ ಮಾಹಿತಿ ನೀಡಿದೆ. ಆದರೆ ಬದುಕುವುದಕ್ಕೆ ಅಲ್ಲ.
ಅಸ್ಥಿತ್ವದಲ್ಲಿ ಇರುವ ಕಂದಾಯ, ಪಂಚಾಯತ್, ಮುನ್ಸಿಪಾಲ್, ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಗಳನ್ನು
ವರದಿಯಲ್ಲಿ ಸೇರಿಸಿದರೆ ಬದುಕು ಶೇಕಡಾ 50 ರಷ್ಟು
ನಿರಾಳವಾಗಲಿದೆ” ಎಂದು ಮುಖಂಡ ಬೆಳ್ಳೂರು ತಿಮ್ಮಪ್ಪ ಹೇಳಿದರು.
ಸಭೆಯ ನಂತರ ಪಾದಯಾತ್ರೆ ಮೂಲಕ ತಾಲ್ಲೂಕು ಕಚೇರಿ ಮುಂಭಾಗ ಜಮಾಯಿಸಿ
ತಹಶೀಲ್ದಾರ್ ಎಸ್.ರಂಜಿತ್ ಮೂಲಕ ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟರು.