ಪೊಲೀಸರ ಬಂದೋಬಸ್ತಿನಲ್ಲಿ ಮ್ಯಾಮ್ಕೋಸ್ ಸಭೆ

ಷೇರುದಾರರ ಪ್ರಶ್ನೆಗಳಿಗೆ ಗದ್ದಲ, ಹಾರಿಕೆಯೇ ಉತ್ತರ
ಅಡಿಕೆ ತುಂಬಿದ ಮೂರು ಲಾರಿ ಎಲ್ಲೋಯ್ತು ? -ಸಿ.ಬಿ.ಈಶ್ವರ್
ಅಕ್ರಮ ಸಾಬೀತಾದರೆ ಹಣ ವಾಪಾಸ್ಸು ಕಟ್ತೀರಾ - ಕಡ್ತೂರು ದಿನೇಶ್
ಶಿವಮೊಗ್ಗದಲ್ಲಿ ನಡೆದ ಮ್ಯಾಮ್ ಕೋಸ್ ಸರ್ವ ಸದಸ್ಯರ ಸಭೆ ಸಂಘದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಮಾರ್ಪಟ್ಟಿತ್ತು. ಪ್ರಥಮ ಬಾರಿಗೆ ಪೊಲೀಸ್ ಬಂದೋಬಸ್ತಿನಲ್ಲಿ ಮ್ಯಾಮ್ ಕೋಸ್ ಸಭೆ ನಡೆಸಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು. ಷೇರುದಾರರಿಂದ ವ್ಯಾಪಕವಾದ ಟೀಕೆಗಳು, ಪ್ರಶ್ನೆಗಳ ಮಹಾಪೂರ ಉದ್ಬವಿಸಿದ್ದರಿಂದ ಪೊಲೀಸ್ ಭದ್ರತೆಯಲ್ಲಿ ಸಭೆ ನಡೆಸಿದರೂ ಪ್ರಶ್ನೆಗಳಿಗೆ ಅಸಂಬದ್ಧ ಉತ್ತರ, ಪ್ರಶ್ನೆ ಕೇಳಿದ ಕೂಡಲೇ ವಿಷಯಾಂತರ ಮಾಡುವ ಸವಕಲು ತಂತ್ರದ ಮೊರೆ ಹೋದ ಹಾಗೆ ಕಂಡು ಬಂತು .

ಮ್ಯಾಮ್ಕೋಸ್ ಇತ್ತೀಚೆಗೆ ತೀರ್ಥಹಳ್ಳಿಯ ಕಿತ್ತನಗದ್ದೆಯಲ್ಲಿ ಒಂದು ಎಕರೆ ಜಮೀನು 7ವರೆ ಕೋಟಿಗೆ ಖರೀದಿಸಿತ್ತು. ಅದಾದ ಬಳಿಕ ಸಹಕಾರ ಭಾರತಿಯ ಪ್ರಮುಖರಿಂದಲೇ ವ್ಯಾಪಕ ಟೀಕೆಗೊಳಗಾದ ಹಿನ್ನಲೆಯಲ್ಲಿ ಸಭೆಯ ಕುತೂಹಲ ಹೆಚ್ಚಾಗಿತ್ತು. ಇದೇ ಪ್ರಶ್ನೆಯನ್ನು ಮುಂದುವರೆಸಿದ ಅನೇಕರು ಈಗಾಗಲೇ ಪಾಲಿಟೆಕ್ನಿಕ್ ಕಾಲೇಜು ಸಮೀಪ ದುರ್ಗಾ ಕ್ರಾಸ್ ನಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಮ್ಯಾಮ್ ಕೋಸ್ ಗಾಗಿ ಒಂದು ಎಕರೆ ಜಾಗ ಮೀಸಲಿರಿಸಲಾಗಿದೆ. ಅದನ್ನು ಯಾಕೆ ಬಳಕೆ ಮಾಡಿಕೊಳ್ಳಲಿಲ್ಲ ಎಂಬ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದರು.

ಕಿತ್ತನಗದ್ದೆಯ ಏಕನಿವೇಶನ ಕನ್ ವರ್ಷನ್ ಮಾಡಿದ ಹಿನ್ನಲೆಯಲ್ಲಿ ದುಬಾರಿ ಬೆಲೆ ಕೊಟ್ಟಿದ್ದೇವೆ ಎಂದು ಹೇಳಿರುವ ಆಡಳಿತ ಮಂಡಳಿಗೆ ಪ್ರಶ್ನೆ ಮಾಡಿ ಕನ್ ವಷನ್ ಭೂಮಿಗೆ ಮಾಡಿದರೆ ಸಾಲದು ಅದಕ್ಕೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯಗಳನ್ನು ಮಾಡಿಕೊಡಬೇಕಾಗುತ್ತದೆ. ಈಗ ಮ್ಯಾಮ್ಕೋಸ್ ಅದಕ್ಕಾಗಿ ಹೆಚ್ಚುವರಿ ಹಣ ಮೀಸಲಿಡಬೇಕಾಗುತ್ತದೆ. ಆಗ ಕೇವಲ ಭೂಮಿಯ ವೆಚ್ಚವೇ ಹೆಚ್ಚಾಗಿ ನಷ್ಟ ಆಗುವುದಿಲ್ಲವೇ ಎಂದಾಗ ಷೇರುದಾರನ ವೇಷದಲ್ಲಿ ಅಲ್ಲಿಗೆ ಬಂದಿದ್ದ ವೃದ್ಧ ರಿಯಲ್ ಎಸ್ಟೇಟ್ ವ್ಯಾಪಾರಿ ಒಬ್ಬರು ಅಲ್ಲಿ 2000 ಬೆಲೆ ಇದೆ ಒಂದು ಸಾವಿರಕ್ಕೆ ನಾನೇ ಕೊಳ್ಳುತ್ತೇನೆ ಎಂದು ಘೋಷಿಸಿ ಸ್ವಪಕ್ಷಿಯರಿಂದಲೇ ತೀವ್ರ ಟೀಕೆಗೆ ಗುರಿಯಾಗಿರುವ ಈ ವ್ಯವಹಾರಕ್ಕೆ ಏನೇನೂ ಸಂಕೋಚ ಇರದೇ ಬೆಂಬಲ ನೀಡಿದರು..!

ಮತ್ತೊಬ್ಬ ತೀರ್ಥಹಳ್ಳಿಯ ಸಹಕಾರಿ ಇಷ್ಟು ದೊಡ್ಡ ದರ ನೀಡಿ ಮ್ಯಾಮ್ಕೋಸ್ ಭಾರಿ ಅಸ್ತಿ ಮಾಡಿರುವುದು ಹೆಮ್ಮೆಯ ವಿಚಾರ ಅವರಿಗೆ ಚಪ್ಪಾಳೆ ಮೂಲಕ ಅಭಿನಂದನೆ ಹೇಳಬೇಕು ಎಂದು ರೋಮಾಂಚನಗೊಂಡು ನುಡಿದು ಈ ಅವ್ಯವಹಾರದ ಆರೋಪಕ್ಕೆ ರಕ್ಷಣೆ ನೀಡುವ ಪ್ರಯತ್ನ ನಡೆಸಿದರು.

ಸಹಕಾರ‌ ಭಾರತೀಯ ಷೇರುದಾರರು ಸಂಸ್ಥೆಯ ವ್ಯವಹಾರವನ್ನು ಕಟುವಾಗಿ ಟೀಕಿಸಿ ಅಕ್ರಮದ ಸರಮಾಲೆಯೇ ಸಂಸ್ಥೆಯಲ್ಲಿ‌ ತುಂಬಿ ಹೋಗಿದೆ ಎಂಬ ಅಭಿಪ್ರಾಯವನ್ನು ಮುಂದಿಟ್ಟರು. ಗೋಣಿಚೀಲ ಖರೀದಿ, ಸಾಲ ವಿತರಣೆ, ಅಡಿಕೆ ಮಾರಾಟ ನಿಯಮ ಬದ್ಧವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳನ್ನು ಹೊರಿಸಿದರು.

ಸಹಕಾರ ಭಾರತಿಯ ಮುಖಂಡ, ಮಾಜಿ ಮ್ಯಾಮ್ಕೋಸ್ ಸದಸ್ಯ, ಎಪಿಎಂಸಿ ಸದಸ್ಯ ಸದಾಕಾಲ‌ ಕಠೋರ ನಿಲುವುಗಳಿಂದ  ಮುಲಾಜಿಲ್ಲದೆ ವ್ಯವಸ್ಥೆಯನ್ನು ಪ್ರಶ್ನಿಸುವಂತಹ ಸಿ.ಬಿ.ಈಶ್ವರ್ ಮುಂದಿಟ್ಟ ಪ್ರಶ್ನೆಗಳು ವ್ಯವಸ್ಥೆಯ ಲೋಪವನ್ನು ಎತ್ತಿ ಹಿಡಿದವು. 2018 ರಲ್ಲಿ ಸಂಸ್ಥೆಯೂ ಕಳುಹಿಸಿದ ಅಡಿಕೆ ಚೀಲಗಳನ್ನು ತುಂಬಿಸಿದ ಲಾರಿ ನಾಪತ್ತೆಯಾಗಿದೆ. ಸುಮಾರು 4 ಕೋಟಿ ವೆಚ್ಚ ಇದರಿಂದ ನಷ್ಟವಾಗಿದೆ. ಪ್ರಸ್ತಕ್ತ ಸಾಲಿನಲ್ಲಿಯೂ ಒಂದು ಲಾರಿ ನಾಪತ್ತೆಯಾಗಿದೆ. ಕೋಟ್ಯಾಂತರ ರೂಪಾಯಿ ವೆಚ್ಚದ ಲಾರಿ ಮಾರಾಟಕ್ಕೆ ಕಳುಹಿಸಿ ಉತ್ತರದಾಯಿತ್ವ ಮರೆತರೆ ಹೇಗಾಗುತ್ತದೆ. ಸಂಸ್ಥೆಗೆ ಆದ ನಷ್ಟವನ್ನು ಹೇಗೆ ಭರಿಸಬೇಕು ಎಂಬ ಪ್ರಶ್ನೆ ಮಾಡುತ್ತಿದ್ದಂತೆ ನಾಪತ್ತೆಯಾದ ಲಾರಿ ಪತ್ತೆಯಾಗಿಲ್ಲ ಎಂಬ ಉತ್ತರವು ಸಿಕ್ಕಿರುವುದು ಷೇರುದಾರರ ಎದೆ ನಡುಗಿಸಿತು.

ಮ್ಯಾಮ್ಕೋಸ್ ಹಗರಣಗಳ ಭೂಮಿ ಖರೀದಿಸುವ ತಿಳುವಳಿಕೆ ಪತ್ರ, ಜಾಹೀರಾತು ನೀಡುವ ಮುನ್ನ ಸಹಕಾರ ಇಲಾಖೆಯ ಅನುಮತಿ ಪಡೆಯಬೇಕಿದೆ. ಯಾಕೆ ಅನುಮತಿ ಪಡೆಯಲಿಲ್ಲ. ಅ‌ನುಮತಿ ಇಲ್ಲದೆ ಜಮೀನು ಖರೀದಿ ಮಾಡಿದ್ದು ಸರ್ಕಾರ ಇದನ್ನು ಅಕ್ರಮ ಎಂದು ರೆಜೆಕ್ಟ್ ಮಾಡಿದರೆ ಆಡಳಿತ ಮಂಡಳಿ ಮಾಡಿರುವ ವ್ಯವಹಾರವನ್ನು ರದ್ದುಪಡಿಸುತ್ತದೆಯೇ. ಜಮೀನನ್ನು ಮೂಲ ವಾರಸುದಾರರಿಗೆ ಹಿಂದಿರುಗಿಸಿ ಹಣವನ್ನು ಸಂಸ್ಥೆಗೆ ಜಮೆ ಮಾಡಲು ತಯಾರಿದ್ದೀರ ಎಂದು ಸಹಕಾರಿ ಮುಖಂಡ ಕಡ್ತೂರು ದಿನೇಶ್ ಪ್ರಶ್ನಿಸಿದರು.
ಮ್ಯಾಮ್ ಕೋಸ್ ಆಡಳಿತ ಮಂಡಳಿ ಪ್ರಶ್ನೆ ಕೇಳುತ್ತಿದ್ದಂತೆ ಪೆಚ್ಚಾಗಿ ಉತ್ತರಿಸದೆ ಮೌನವಹಿಸಿತ್ತು. ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ನಿರ್ದೇಶಕರು ಪರಸ್ಪರ ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡರೇ ವಿನಃ ಉತ್ತರಿಸುವ ಗೋಜಿಗೆ ಹೋಗಲಿಲ್ಲ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post