ಅಡಕೆ ಬೆಳೆಯ ಭವಿಷ್ಯ ಅಪಾಯದಲ್ಲಿದೆ

ಅಡಿಕೆ ಗುಣಮಟ್ಟದಲ್ಲಿ ರಾಜಿ ಬೇಡ
ರಾಷ್ಟ್ರೀಕೃತ ಬ್ಯಾಂಕಿಗೆ ಸಹಕಾರಿ ಸಂಸ್ಥೆ ಸಾಲ ನೀಡುತ್ತಿದೆ
ನಬಾರ್ಡ್‌ ಪುನರ್ಧನ ಯೋಜನೆ ಸ್ಥಗಿತಗೊಂಡಿದೆ: ಆರ್‌.ಎಂ.ಎಂ.

ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಮಂಗಳವಾರ ನಡೆದ ಸಹ್ಯಾದ್ರಿ ವಿವಿದೋದ್ದೇಶ ಅಡಕೆ ಬೆಳೆಗಾರರ ಮಾರಾಟ ಸಹಕಾರ ಸಂಘ, ಶರಾವತಿ ಪತ್ತಿನ ಸಹಕಾರ ಸಂಘ, ಸಮೃದ್ಧಿ ಪ್ಲಾಂಟೇಷನ್‌ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿಸಿಸಿ ಬ್ಯಾಂಕ್‌ ಅಧಕ್ಷ ಆರ್‌.ಎಂ. ಮಂಜುನಾಥ ಗೌಡ ಮಾತನಾಡಿ, ಹಿಂದಿನ ಸಾಂಪ್ರಾದಾಯಿಕ ಪದ್ಧತಿಯಲ್ಲಿ ಸಂಸ್ಕರಣೆ ಮಾಡಿ ಗುಣಮಟ್ಟದ ಅಡಕೆ ಪೂರೈಸುವ ಅವಶ್ಯಕತೆ ಇದೆ. ಅಡಕೆ ಧಾರಣೆ ಸ್ಥಿರತೆ  ಕಾಪಾಡಿಕೊಳ್ಳಬೇಕಾದರೆ ರೈತರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದರು.

"ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹುದ್ದೆಯನ್ನು ಹಠ ತೊಟ್ಟು  ಪುನಃ ಸ್ವೀಕರಿಸಿದ್ದೇನೆ. ಸುಳ್ಳು ಆರೋಪ ಹೊರಿಸಿದವರು ಈಗ ಮನೆಯಲ್ಲಿ ಕೂತಿದ್ದಾರೆ. ಸಹಕಾರ ಸಂಸ್ಥೆ ಬೆಳೆಸುವುದು ಸುಲಭದ ಮಾತಲ್ಲ. ಟೀಕೆ ಮಾಡುವ ಕೆಟ್ಟ ಮನಸ್ಥಿತಿಯವರು ಬೇಕಾಬಿಟ್ಟಿ ಮಾತನಾಡುತ್ತಾರೆ. ಪ್ರಾಮಾಣಿಕವಾಗಿ ಸಹಕಾರ ಸಂಸ್ಥೆ ಬೆಳೆಸಿದ ಹೆಮ್ಮೆ  ನನಗಿದೆ. ಬೇರೆಯವರ ಪಾಠದ ಅಗತ್ಯ ಇಲ್ಲ." - ಆರ್‌.ಎಂ.ಮಂಜುನಾಥಗೌಡ

ಕಲಬೆರೆಕೆಯಿಂದಾಗಿ ಮಾರುಕಟ್ಟೆಯಲ್ಲಿ ಧಾರಣೆ ಕುಸಿಯುವಂತಹ ಅಪಾಯಕ್ಕೆ  ಅಡಕೆ ಸಿಲುಕಿದೆ. ಉತ್ತರ ಭಾರತದಿಂದ ಸುಮಾರು 1 ಸಾವಿರ ಲಾರಿಲೋಡ್‌ ಅಡಕೆ ಕಳಪೆ ಕಾರಣಕ್ಕೆ ವಾಪಾಸಾಗಿದೆ. ಚಾಲಿಗೆ  ಬಣ್ಣ ಸೇರಿಸಿ ರಾಶಿ ಇಡಿ ಹೆಸರಲ್ಲಿ  ಅಡಕೆ ಮಾರಾಟ ಮಾಡುತ್ತಿರುವುದು ಅಡಕೆ ಧಾರಣೆ ಕುಸಿತಕ್ಕೆ ಕಾರಣವಾಗುತ್ತಿದೆ. ಸಹಕಾರ ಸಂಸ್ಥೆ, ಎಪಿಎಂಸಿಯಲ್ಲಿ ಅಡಕೆ ಖರೀದಿ, ಮಾರಾಟದ ವ್ಯವಸ್ಥೆಯನ್ನು ರೈತರು ಕಂಡುಕೊಳ್ಳಬೇಕು. ಬೇಡಿಕೆ ಇದ್ದರು ಗುಣಮಟ್ಟದ ಅಡಕೆ ಪೂರೈಕೆಯಲ್ಲಿನ ವ್ಯತ್ಯಾಸ ರೈತರ ಬದುಕು ನಾಶ ಮಾಡುವ ಹಂತಕ್ಕೆ ಮುಟ್ಟಿದೆ.  ಅಡಕೆ ಬೆಳೆ ನಿಷೇಧ ವ್ಯಾಪ್ತಿಗೆ ಸೇರುವ ಆತಂಕ ಇದೆ ಎಂದು ಮಂಜುನಾಥಗೌಡ ಹೇಳಿದರು.

ಜಿಡಿಪಿ ಕುಸಿತದಿಂದ ದೇಶದ ಆರ್ಥಿಕ ಸ್ಥಿತಿ ಇಂದು ತುಂಬಾ ಸೂಕ್ಷ್ಮವಾಗಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ  ಹೆಚ್ಚಿನ ಆದ್ಯತೆ ಸಿಗದ ಪರಿಣಾಮ ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗುವಂತಹ ಸನ್ನಿವೇಶದಲ್ಲಿದೆ. ವಾಣಿಜ್ಯ ಬ್ಯಾಂಕ್‌ಗಳ ವಹಿವಾಟು ಭದ್ರತೆಯಿಂದ ಕೂಡಿಲ್ಲ. ಸಹಕಾರ ಸಂಸ್ಥೆಗಳ ಆರ್ಥಿಕ ಚಟುವಟಿಕೆ ದೇಶದ  ಹಣಕಾಸು ಸ್ಥಿತಿಯನ್ನು ಒಂದಿಷ್ಟು ಸುಭದ್ರವಾಗಿಸಿದೆ ಎಂದು ಮಂಜುನಾಥಗೌಡ ಹೇಳಿದರು.

ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕುಗಳಿಗೆ ಸಹಕಾರಿ ಸಂಸ್ಥೆಗಳು ಸಾಲ ನೀಡುತ್ತಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನು ಭದ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತದ ಜಿಡಿಪಿ ಕುಸಿತಗೊಳ್ಳುತ್ತಿದ್ದು ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಹಕಾರ ಸಂಸ್ಥೆಗೆ ನಬಾರ್ಡ್‌ ನೀಡುತ್ತಿದ್ದ ಶೇಕಡಾ 80 ರಷ್ಟು ಪುನರ್ಧನ ಯೋಜನೆ ಸ್ಥಗಿತಗೊಂಡಿದ್ದು ಸಂಸ್ಥೆ ಆರ್ಥಿಕ ವಹಿವಾಟಿಗೆಗೆ ಮುಳುವಾಗಿದೆ ಎಂದರು.

"ಕೇವಲ ಲಾಭ ಬಯಸಿದರೆ ಸಂಸ್ಥೆಯ ಭವಿಷ್ಯ ಸುಭ್ರದ್ರವಾಗಿರುವುದಿಲ್ಲ. ವಿವಿಧ ಸಂಸ್ಥೆಗಳಲ್ಲಿ ಸುಮಾರು 40 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದೇವೆ. 70 ಕೋಟಿ ಮೌಲ್ಯದ ಆಸ್ತಿ ಮುಖ್ಯರಸ್ತೆಯಲ್ಲಿದೆ. ಅನೇಕ ತೊಂದರೆಗಳ ನಡುವೆ  ಸಹ್ಯಾದ್ರಿ ಸಮೂಹ ಸಹಕಾರ ಸಂಸ್ಥೆಗಳು ನಿರೀಕ್ಷೆಗೂ ಮೀರಿ ಸಾಧನೆ ಮಾಡಿವೆ. ಪಾರದರ್ಶಕ, ಪ್ರಾಮಾಣಿಕ ವ್ಯವಹಾರ ಸಹಕಾರ ಸಂಸ್ಥೆಗಳ ಮುಖ್ಯ ಉದ್ದೇಶ. ಯಾವುದೇ ತಪ್ಪಿದ್ದರೂ ಷೇರುದಾರ ಸದಸ್ಯರು ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳ ಬಹುದು." - ಬಸವಾನಿ ವಿಜಯದೇವ್‌

ವೇದಿಕೆಯಲ್ಲಿ ಶರಾವತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್‌.ವಿ. ಅಜಿತ್‌, ಸಮೃದ್ಧಿ ಪ್ಲಾಂಟೇಷನ್‌ ಸಹಕಾರ ಸಂಘದ ಅಧ್ಯಕ್ಷೆ ರೇವತಿ ಅನಂತಮೂರ್ತಿ, ಹಿರಿಯ ನಿರ್ದೇಶಕರುಗಳಾದ ಬಿ.ಕೆ.  ಅರುಣ್‌ಕುಮಾರ್‌, ಸೀಕೆ ಪ್ರಸನ್ನಕುಮಾರ್‌, ಈಚಲುಬೈಲು ಶಶಿಧರ್‌, ಕೊಲ್ಲೂರಯ್ಯ, ವಿನಂತಿ ಕರ್ಕಿ, ಸಿಇಓ ಚಂದ್ರಕಲಾ ಮತ್ತಿತರರು ಇದ್ದರು. 

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post