50ಕ್ಕೂ ಹೆಚ್ಚು ಹಲಸಿನ ಮರಗಳ ಹನನ

ಶೀರೂರು, ಪಡುವಳ್ಳಿ ಗ್ರಾಮದಲ್ಲಿ ಮರಗಳ ಕಟಾವು ದಂಧೆ
ಅರಣ್ಯ ಪ್ರದೇಶದಲ್ಲಿ ನಾಟ ತಯಾರಿ – ಅಧಿಕಾರಿಗಳು ಶಾಮೀಲು..?

ತೀರ್ಥಹಳ್ಳಿ ತಾಲ್ಲೂಕಿನ ಪಡುವಳ್ಳಿ, ಶೀರೂರು, ಬೆಟಗೇರಿ, ಜಾವಗಲ್ಲು ಗ್ರಾಮದ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ವಿಪರೀತ ಪ್ರಮಾಣದಲ್ಲಿ ವಿವಿಧ ಜಾತಿಯ ಕಾಡು ಮರಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆಗೆ ಮರ್ಜಿ ಮಾಡಿಕೊಂಡು ಕಡಿದ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಸ್ಥಳೀಯ ಪ್ರಮುಖ ನಾಯಕರು, ಮುಖಂಡರು ಇದಕ್ಕೆ ಬೆಂಬಲಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.

ಕಳೆದ 4 ವರ್ಷಗಳಿಂದ ಹೊನ್ನೇತ್ತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಹಲಸಿನ ಮರ ಕಡಿದಿರುವ ದಂಧೆ ಇನ್ನಷ್ಟು ಸಕ್ರೀಯವಾಗಿದೆ. ಆಗುಂಬೆ ವಲಯಾರಣ್ಯ ವಿಭಾಗದ ಕೆಲ ಅಧಿಕಾರಿಗಳ ನೆರವಿನಿಂದ ಅರಣ್ಯದೊಳಗೆ ಸಂಪೂರ್ಣ ಪ್ರಮಾಣದಲ್ಲಿ ನಾಟ ತಯಾರಿಸಿ ವಿವಿಧ ಭಾಗಗಳಿಗೆ ಸಾಗಾಣೆ ಮಾಡುತ್ತಿದ್ದಾರೆ ಎಂಬ ಗಂಭೀರ ಸ್ವರೂಪದ ದೂರುಗಳು ಇದೀಗ ಹೆಚ್ಚುತ್ತಿದೆ. ಗೃಹಪಯೋಗಿ ವಸ್ತುಗಳ ತಯಾರಿಕೆಗಾಗಿಯೇ ಹಣಕ್ಕಾಗಿ ಮರಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ಹಿರಿಯ ಅಧಿಕಾರಿಗಳಿಗೆ ದೂರುಗಳು ಸಲ್ಲಿಕೆಯಾಗುತ್ತಿದೆ.


ಶೀರೂರು ಸರ್ಕಾರಿ ಶಾಲೆಯ ಸಮೀಪದಲ್ಲೇ ಬೃಹತ್‌ ಗಾತ್ರದ ಹಲಸಿನ ಮರವೊಂದನ್ನು ದಂಧೆಕೋರರು ಕೆಡವಿದ್ದಾರೆ. ಅಲ್ಲದೇ ನೂರಾರು ಆಕೇಶಿಯಾ ಮರಗಳನ್ನು ಎಲ್ಲೆಂದರಲ್ಲಿ ಕಡಿದು ನಾಟ ತಯಾರಿಸಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರು ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ. ಸರ್ಕಾರ ಅರಣ್ಯ ಸಿಬ್ಬಂದಿಗೆ ಯಾವ ಕಾರಣಕ್ಕೆ ವೇತನ ನೀಡಬೇಕು ಎಂದು ಪ್ರಶ್ನಿಸುತ್ತಿರುವ ಗ್ರಾಮಸ್ಥರು ಅಧಿಕಾರಿಗಳಿಗೆ ಸಂಬಳದ ಬದಲು ದಂಧೆಗೆ ಅವಕಾಶ ಮಾಡಿ ಕೊಡಿ ಎಂದು ಬೇಡಿಕೆ ಸಲ್ಲಿಸುತ್ತಿದ್ದಾರೆ.

ಹಿಂದೆಮ್ಮೆ ಮಲೆನಾಡನ್ನು ವ್ಯಾಪಿಸಿದ್ದ ಶ್ರೀಗಂಧದ ಕಳ್ಳ ಸಾಗಾಣೆಯಾಗುತ್ತಿದ್ದ ಜಾಗದಲ್ಲಿ ಇದೀಗ ಅತೀ ಹೆಚ್ಚು ಬೆಲೆಗೆ ಮಾರಾಟವಾಗುವ ಹಲಸಿನ ಮರ ಸೇರಿಕೊಂಡಿದೆ. ಯಾವ ಭಾಗದಲ್ಲಿ ಹಲಸಿನ ಮರ ಇದೆ ಎಂಬ ಬಗ್ಗೆಯೂ ದಂಧೆಕೋರರು, ಅಧಿಕಾರಿಗಳ ಸಮ್ಮುಖದಲ್ಲಿ ರೌಂಡ್‌ ಟೇಬಲ್‌ ಚರ್ಚೆ ನಿತ್ಯ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮರಗಳ ಹನನವಾದ ಬಳಿಕ ಅದನ್ನು ಮಿಷನ್‌ ಬಳಸಿ ಅಲ್ಲಿಯೇ ನಾಟ ಮಾಡುತ್ತಿದ್ದು ಅರಣ್ಯ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಪಡುವಳ್ಳಿಯ ಕಿರು ಅರಣ್ಯ ಪ್ರದೇಶದಲ್ಲಿ ಹಲಸಿನ ಮರ ಕಡಿದಿರುವ ಪ್ರಕರಣವನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಆರಂಭಿಸಿದೆ. ಶಿವಮೊಗ್ಗ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಸಂರಕ್ಷಣಾಧಿಕಾರಿ ಮರಕಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು ಸ್ಥಳಕ್ಕೆ ತೀರ್ಥಹಳ್ಳಿಯ ಉಪವಿಭಾಗದ ಅರಣ್ಯಾಧಿಕಾರಿ ಮಧುಸೂದನ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post