ಪೊಲೀಸ್ ಠಾಣೆಯಲ್ಲಿ ಹೇಳಿಕೆ ಕೊಟ್ಟ ಕಡಿದಾಳ್ ಯುವಕ ನಾಪತ್ತೆ

ಮಾಜಿ ಗೃಹಸಚಿವರ ತವರಿನಲ್ಲಿ ಕಿಡ್ನಾಪ್ ಪ್ರಕರಣ ತಿರುವು
40 ಲಕ್ಷ ಸಾಲದಲ್ಲಿರುವ ಯುವ ಗುತ್ತಿಗೆದಾರ - ಕೊಟ್ಟ ಮಾತು ತಪ್ಪಿದ ಕಡಿದಾಳ್ ಯುವಕ
ಕೊಟ್ಟ ಹಣ ವಾಪಾಸ್ಸು ಪಡೆಯಲು ಯುವಕರ ಒದ್ದಾಟ - ಕಷ್ಟಪಟ್ಟು ದುಡಿದ ಹಣ ಕಳೆದುಕೊಂಡ ಯುವಕರು

ಎರಡ್ಮೂರು ದಿನಗಳಿಂದ ಮಗ ಕಿಡ್ನಾಪ್ ಆಗಿದ್ದಾನೆ ಎಂದು ತಿಳಿದಿದ್ದ ತಂದೆಯ ಮುಂದೆಯೇ ಯುವಕ ಶನಿವಾರ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷಗೊಂಡಿದ್ದಾನೆ. ಯಾರು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿತ್ತೋ ಅವರೊಂದಿಗೆ ಆಗಮಿಸಿರುವ ಕಡಿದಾಳ್ ಯುವಕ ನಾನು ಕಿಡ್ನಾಪ್ ಆಗಿಲ್ಲ. ನಾನು ಸಾಲ ಪಡೆದುಕೊಂಡ 40 ಲಕ್ಷ ಹಣ ವಾಪಾಸ್ಸು ಕೊಡಬೇಕು. ಅವರೆಲ್ಲರೂ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಹೆಬ್ರಿಯ ಪರಿಚಿತ ಗುತ್ತಿಗೆದಾರರು ನನಗೆ ಹಣ ಕೊಡಬೇಕು. ಅವರಿಂದ ಹಣ ಪಡೆದು ನಿಮ್ಮ ಸಾಲ ಮರುಪಾವತಿ ಮಾಡುತ್ತೇನೆ ಎಂದು ಪೊಲೀಸರ ಮುಂದೆ ಹಾಜರಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟು ಅದೇ ಗುಂಪಿನೊಂದಿಗೆ ಹಿಂದಿರುಗಿದ್ದಾನೆ. ಪೊಲೀಸರು ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದ್ದ ಖುಷಿಯಲ್ಲಿ ಎಲ್ಲರನ್ನೂ ಮನೆಗೆ ಕಳುಹಿಸಿಕೊಟ್ಟಿದ್ದರು. ಆದರೆ...

ಬೆಂಗಳೂರಿನಲ್ಲಿ ಅತ್ಯಂತ ಶ್ರಮ ಜೀವನ ನಡೆಸಿ ಕಷ್ಟಪಟ್ಟ ಹಣದಿಂದ ತೀರ್ಥಹಳ್ಳಿಯಲ್ಲಿ ಸ್ವಂತ ದುಡಿಮೆ ಆರಂಭಿಸಬೇಕು ಎಂಬ ಉದ್ದೇಶದಲ್ಲಿ ಗುಂಪಿನ ಹುಡುಗರು ಜೆಸಿಬಿ, ಲಾರಿ, ಟ್ರಾಕ್ಟರ್ ಕೆಲಸಗಳಿಗೆ ಹೂಡಿಕೆ ಮಾಡಿದ್ದಾರೆ. ಅಂದಿನಿಂದಲೇ ಯುವಕರೆಲ್ಲರೂ ಪರಿಚಿತರು. ಕಡಿದಾಳ್ ಯುವಕ ಈ ನಾಲ್ವರು ಯುವಕರಿಗೆ ಜೆಸಿಬಿ ಕೆಲಸ ಕೊಡಿಸುವ ಮೂಲಕ ಇನ್ನಷ್ಟು ಹತ್ತಿರವಾಗಿದ್ದ. ಆತ ಕೂಡ ಹೆಚ್ಚಿನ ಗುತ್ತಿಗೆ ಕೆಲಸ ಆರಂಭಿಸಬೇಕು ಎಂಬ ಉದ್ದೇಶದಿಂದ ನಾಲ್ವರಿಂದ ಹಣ ಪಡೆದಿದ್ದ. ಆ ಕೆಲಸದಲ್ಲಿ ಲಾಭಾಂಶ ನೀಡುವ ಭರವಸೆ ನೀಡಿದ್ದ. ಗುತ್ತಿಗೆ ಕೆಲಸದಲ್ಲಿ ನಷ್ಟ, ಬಿಲ್ ಆಗದಿರುವಿಕೆಯಿಂದ ಬೇಸತ್ತು ಇನ್ನಷ್ಟು ಭಯಕ್ಕೆ ಒಳಗಾಗಿದ್ದಾನೆ. ಸಾಲ ತೀರಿಸುವ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆ ಸಾಲ ಹಿಂದಿರುಗಿಸುವುದು ಕಷ್ಟವಾಗುತ್ತಿದ್ದಂತೆ ಕಂಗೆಟ್ಟ ಯುವಕ ರಾತ್ರೋ ರಾತ್ರಿ ಮನೆಬಿಟ್ಟು ಕಳೆದ ಆರೇಳು ತಿಂಗಳಿನಿಂದ ಕಣ್ಮರೆಯಾಗಿದ್ದಾನೆ.

ಈ ಸುದ್ದಿ ತಿಳಿದು ಸಾಲ ನೀಡಿದ ಹುಡುಗರ ಎದೆ ಜಸಕ್ ಎಂದಿದೆ. ಇನ್ನೇನಪ್ಪ ಮಾಡೋದು ಎಂದು ಯೋಚನೆಗೆ ಬಿದ್ದಿದ್ದಾರೆ. ಹೀಗಿರುವಾದ ಶಿವಮೊಗ್ಗ ನಗರದಲ್ಲಿ ಆಟೋದಲ್ಲಿ ಓಡಾಡುತ್ತಿರುವಾಗ ಯುವಕ ಪತ್ತೆಯಾಗಿದ್ದಾನೆ. ಅಲ್ಲಿಂದ ಹಾಗೆಯೇ ಆಟೋದಲ್ಲಿಯೇ ಮಾಳೂರಿಗೆ ಕರೆದುಕೊಂಡು ಬಂದು ಸೆಟ್ಲುಮೆಂಟ್ ಮಾತುಕತೆ ನಡೆದಿದೆ. ಯುವಕ ಕಥೆ ಆರಂಭಿಸಿದ್ದಾನೋ ಅಲ್ಲಿಂದಲೇ ಬೆಂಗಳೂರಿಗೆ ಕರೆದುಕೊಂಡು ಹೋಗಿ ಹಣಕಾಸಿನ ಬಗ್ಗೆ ಬಹಳವಾಗಿ ವಿಚಾರಿಸಿ ಹಿಂಪಡೆಯುವ ಉಪಾಯ ಮಾಡಿದ್ದಾರೆ.

ಮನೆಯೊಂದಿಗೆ ಮಾತುಕಥೆ ನಡೆಸುತ್ತಿದ್ದ ಯುವಕ ಇದ್ದಕ್ಕಿಂದ್ದಂತೆ ಯಾವಾಗ ಕರೆ ಮಾಡುವುದು ನಿಲ್ಲಿಸಿದ್ದಾನೋ ಆಗ ಮನೆಯವರಿಗೆ ಅನುಮಾನ ಬಂದು ಪೊಲೀಸ್ ಸ್ಟೇಷನ್ ಅಲೆದಾಟ ಆರಂಭಿಸಿದ್ದಾರೆ. ಅಷ್ಟಕ್ಕೂ ಠಾಣೆ ತಿರುಗಾಟದ ಸುದ್ದಿ ತಿಳಿದ ಯುವಕ ಖುದ್ದಾಗಿ ಠಾಣೆಯ ಮುಂದೆ ಹಾಜರಾಗಿದ್ದಾನೆ. ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಅಲ್ಲಿಂದ ತಂದೆ ಮತ್ತು ತಮ್ಮನ ಜೊತೆಗೆ ಮನೆಗೆ ತೆರಳಿದ್ದಾನೆ.

ಸುಖಾಂತ್ಯ ಎನ್ನುತ್ತಿರುವಾಗಲೇ ಭಾನುವಾರ ಬೆಳಿಗ್ಗೆ ಶಿವಮೊಗ್ಗ ಲಾಡ್ಜ್ ನಲ್ಲಿ ಲಗೇಜ್ ಇದೆ ತಂದು ಬಿಡುತ್ತೇನೆ. 11 ಗಂಟೆಗೆ ತೀರ್ಥಹಳ್ಳಿಗೆ ಬರುತ್ತೇನೆ. ಇಲ್ಲಿಂದ ಹೆಬ್ರಿಗೆ ಹೋಗಿ ಅಲ್ಲಿನ ಗುತ್ತಿಗೆದಾರರಿಂದ ಹಣ ಪಡೆದು ಸಾಲ ಹಿಂದಿರುಗಿಸುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿರುವ ಯುವಕ ಶಿವಮೊಗ್ಗದಲ್ಲಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಇದೀಗ ಹುಡುಗರ ಗುಂಪಲ್ಲದೇ ಪೊಲೀಸರಿಗೂ ತಲೆಬಿಸಿ ಆರಂಭವಾಗಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post