ಮೀಟರ್‌ ಬಡ್ಡಿ ಮಾಫಿಯಾ – ಜೀವಭಯದಲ್ಲಿ ಯುವಕ

ಮಾಜಿ ಗೃಹಸಚಿವರ ಕ್ಷೇತ್ರದಲ್ಲಿ ಯುವಕ ಕಿಡ್ನಾಪ್?‌
ತೀರ್ಥಹಳ್ಳಿಯ ಪರಂಪರೆಗೆ ಕಪ್ಪು ಚುಕ್ಕೆ
ಪೊಲೀಸರನ್ನೇ ಯಾಮಾರಿಸುತ್ತಿರುವ ಕಿಡ್ನಾಪ್‌ ಗ್ಯಾಂಗ್

ಈ ಯುವಕನ ಸ್ಥಿತಿ ಕೇಳಿದ್ರೆ ಭಯವಾಗುತ್ತೆ. ಸುಸಂಸ್ಕೃತ ಪರಂಪರೆಯ ತೀರ್ಥಹಳ್ಳಿಗೂ ಇಂತಹ ಪರಿಸ್ಥಿತಿ ಬಂತೇ ಎಂದು ಯೋಚನೆ ಮಾಡುವ ಪರಿಸ್ಥಿತಿ ಬಂದಿದೆ. ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರ ಊರಿನ ಯುವಕ ಈಗ ಜೀವ ಭಯಕ್ಕೆ ಸಿಕ್ಕಿಕೊಂಡಿದ್ದಾನೆ. ಈ ವಿಷ್ಯ ಬಹಳ ಗುಪ್ತ, ಗುಪ್ತವಾಗಿ ಚರ್ಚೆಯಲ್ಲಿದೆ. ಯುವಕನ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಆ ಯುವಕನಿಗೆ ಏನಾಯ್ತು ಗೊತ್ತಾ?

ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿಯಲ್ಲಿ ಮೇ 23 ರಂದು ಮಟಾ ಮಟಾ ಮಧ್ಯಾಹ್ನ 3.30ರ ಹೊತ್ತಿಗೆ ಕಾರಿನಲ್ಲಿ ಆ ಯುವಕನನ್ನು ಗುಂಪೊಂದು ಕಿಡ್ನಾಪ್‌ ಮಾಡಿಯೇ ಬಿಟ್ಟಿತು. ಬಲವಂತವಾಗಿ ಗುಂಪು ಆತನಿಗೆ ಇನ್ನಿಲ್ಲದ ಕಿರುಕುಳ ನೀಡಿತು. ಕೊಟ್ಟ ಹಣ ಬಡ್ಡಿ ಸಮೇತ ಕೊಡು ಎಂದು ಒತ್ತಡ ಹೇರಿತು. ಕಿಡ್ನಾಪ್‌ ಆದ ಯುವಕ ದಾರಿಕಾಣದಂತಾದ. ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ಯುವಕನನ್ನು ಮನೆಯೊಂದರಲ್ಲಿ ಇರಿಸಲಾಯಿತು. ಈ ವಿಷ್ಯ ಫೋನ್ ಕರೆ ಮೂಲಕ ತಿಳಿದ ಕುಟುಂಬಸ್ಥರು ಎದ್ದೆವೋ ಬಿದ್ದೆವೋ ಎಂದು ಮಾಳೂರು ಪೊಲೀಸ್‌ ಠಾಣೆಗೆ ಹೋಗಿ ವಿಷಯ ಮುಟ್ಟಿಸಿದರು.

ಅಲ್ಲಿಂದಲೇ ನೋಡಿ ಶುರುವಾಯ್ತು… ಕಿಡ್ನಾಪ್‌ ಮಾಡಿದ ಗುಂಪಿನ ಹೊಸ ವರಸೆ. ನಾವು ಕಿಡ್ನಾಪ್‌ ಮಾಡೇ ಇಲ್ಲ. ಆತ ದುಡ್ಡು ಕೊಡಬೇಕಿತ್ತು. ಹಿಡಿದು ಕರೆತಂದಿದ್ದೇವೆ. ಹೋಗಲಿ ಬಿಡಿ ಸ್ಟೇಷನ್‌ಗೆ ಕರೆದುಕೊಂಡು ಬರ್ತೇವೆ ಎಂದು ಹೇಳಿ ಪೊಲೀಸರನ್ನೇ ಎರಡು ದಿನದಿಂದ ಯಾಮಾರಿಸಿದ್ದಾರೆ. ಕಿಡ್ನಾಪ್‌ ಆದ ಯುವಕ ಗುತ್ತಿಗೆ ಕೆಲಸ ಮಾಡುತ್ತಿದ್ದು ಅವರಿವರ ಬಳಿ ಒಂದಿಷ್ಟು ಹಣ ಪಡೆದಿದ್ದಾನೆ. ಬಡ್ಡಿ ಸಮೇತ ಹಣ ಹಿಂದಿರುಗಿಸಲಾಗದೇ ಕೈ ಕೈ ಹಿಸುಕಿಕೊಳ್ಳುತ್ತಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡ ಬಡ್ಡಿ ಮಾಫಿಯಾದ ಕುಳಗಳು ಈಗ ಯುವಕನನ್ನು ಕಿಡ್ನಾಪ್‌ ಮಾಡಿ ಹಣ ವಸೂಲಿಗೆ ಇಳಿದಿದ್ದಾರೆ.

ತೀರ್ಥಹಳ್ಳಿಯಲ್ಲಿ ಮೀಟರ್‌ ಬಡ್ಡಿ ದಂಧೆ ಅದು ಎಷ್ಟರ ಮಟ್ಟಿಗಿದೆ ಎಂದರೆ ಬಡ್ಡಿಗೆ ಹಣ ಪಡೆದರೆ ಯಾವ ಸಂಸಾರವೂ ಉಳಿಯಲು ಸಾಧ್ಯವಿಲ್ಲ. ಅಂತಹದ್ದೊಂದು ಭೀಕರ ಸನ್ನಿವೇಶ ಸೃಷ್ಟಿಯಾಗಿದೆ. ಮಾಜಿ ಗೃಹಸಚಿವರ ಕ್ಷೇತ್ರದಲ್ಲಿ ನಡೆಯುತ್ತಿರುವ ಮೀಟರ್‌ ಬಡ್ಡಿ ದಂಧೆ ತಡೆಯುವುದಕ್ಕೆ ಕಾನೂನಿಗೆ, ಅಧಿಕಾರಿಗಳಿಗೇ ಸಾಧ್ಯವೇ ಆಗಿಲ್ಲ. ಬಡ್ಡಿ ಮಾಫಿಯಾದ ಹಿಡಿತಕ್ಕೆ ಸಿಕ್ಕ ಕಿಡ್ನಾಪ್‌ ಆದ ಯುವಕ ಈಗ ಪಡಬಾರದ ಕಷ್ಟ ಪಡುತ್ತಿದ್ದಾನೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.

ಪೊಲೀಸರಿಗೂ ಬಗ್ಗದ ಕಿಡ್ನಾಪ್‌ ಗ್ಯಾಂಗ್

ಈ ಕಿಡ್ನಾಪ್‌ ಗ್ಯಾಂಗ್‌ ಸಣ್ಣಾಟದ ಆಟ ಆಡುತ್ತಿಲ್ಲ. ಪೊಲೀಸರಿಗೆ ಬಹಳ ಚುರುಕಾಗಿ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಪೊಲೀಸರು ಕಿಡ್ನಾಪ್‌ ಗ್ಯಾಂಗ್‌ ಹುಡುಗರನ್ನು ಸಂಪರ್ಕಿಸಿ ತಕ್ಷಣ ಸ್ಟೇಷನ್‌ಗೆ ಬರುವಂತೆ ಖಡಕ್‌ ಸೂಚನೆ ಕೊಟ್ಟರು ಕಿಡ್ನಾಪ್‌ ಗ್ಯಾಂಗ್‌ ಬಗ್ಗಿಲ್ಲ. ಅಲ್ಲದೇ ಕಿಡ್ನಾಪ್‌ ಗ್ಯಾಂಗ್ ಪೊಲೀಸರೆಂದರೆ ಸಸಾರ ಮಾಡುತ್ತಿದೆ. ಈಗ ಬದ್ವಿ, ಸ್ವಲ್ಪ ಕಾಯಿರಿ. ಅವನಿಗೇನು ಮಾಡಿಲ್ಲ. ದುಡ್ಡು ಕೊಡಬೇಕಿತ್ತು ಕರ್ಕೊಂಡು ಹೋಗಿದ್ದೀವಿ. ಅದ್ರಲ್ಲೇನ್‌ ತಪ್ಪಿದೆ. ಕಾನೂನು ನಮಗೂ ಗೊತ್ತು ಅಂತ ಪೊಲೀಸರಿಗೆ ಅವಾಜ್‌ ಹಾಕುವ ಮಟ್ಟಕ್ಕೆ ಗ್ಯಾಂಗ್‌ ಸ್ಟ್ರಾಟರ್ಜಿ ವರ್ಕೌಟ್‌ ಮಾಡುತ್ತಿರುವುದು ಪೊಲೀಸರಿಗೆ ತಲೆನೋವು ತಂದಿದೆ.‌

ಎಸ್ಪಿ ಮದ್ಯ ಪ್ರವೇಶ ಮಾಡುವರೇ...?

ಜಿಲ್ಲೆಯಲ್ಲಿ ಮೀಟರ್‌ ಬಡ್ಡಿ ಮಾಫಿಯಾಕ್ಕೆ ಬುದ್ದಿ ಕಲಿಸಲೇಬೇಕೆಂದು ಹೊರಟಿರುವ ಜಿಲ್ಲೆಯ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ ಯುವಕನ ರಕ್ಷಣೆಗೆ ಮುಂದಾದರೇ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಯುವಕನ ಕುಟುಂಬಕ್ಕೆ ನೆರವಾದೀತು. ಈಗಾಗಲೇ ಬಡ್ಡಿ ಮಾಫಿಯಾದ ಕಿರುಕುಳಕ್ಕೆ ಸಿಕ್ಕು ನಲುಗಿರುವ ಯುವಕ ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ರಕ್ಷಣೆಗೆ ನೆಚ್ಚಿಕೊಂಡಂತಿದೆ.

ಮಾಜಿ ಗೃಹಸಚಿವರ ಕ್ಷೇತ್ರದಲ್ಲಿ ಇದೇನ್‌ ಕಥೆ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಉಗ್ರ ಟೀಕೆ ಮಾಡುತ್ತಿರುವ ಮಾಜಿ ಗೃಹಸಚಿವರು, ಕ್ಷೇತ್ರದ ಶಾಸಕರ ತವರು ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗಿದೆ ಎಂಬ ಪ್ರಶ್ನೆ ಇದೀಗ ಸಹಜವಾಗಿದೆ.  ಮರಳು, ಮಣ್ಣು, ಮೀಟರ್‌ ಬಡ್ಡಿ, ಟಿಂಬರ್‌, ಗಾಂಜಾ, ಮಟ್ಕಾ, ಇಸ್ಪೀಟ್‌, ಅಕ್ರಮ ಹೆಂಡದ ದಂಧೆಯ ತವರಾದಂತಿರುವ ತೀರ್ಥಹಳ್ಳಿಗೆ ಕಳಂಕ ಪದೇ ಪದೇ ಎದುರಾಗುತ್ತಿದೆ. ಮಾಜಿ ಗೃಹಸಚಿವರು ಸದ್ಯಕ್ಕೆ ಕ್ಷೇತ್ರದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆಗಳ ಕಡೆಗೆ ಗಮನ ಹರಿಸುವ ಅವಶ್ಯಕತೆ ಇದೆ. ಬಹುತೇಕ ಅಧಿಕಾರಿಗಳು ದಂಧೆಕೋರರ ಜೊತೆಗೆ ಶಾಮೀಲಾಗಿದ್ದಾರೆ ಎಂಬ ಆರೋಪ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕ್ಷೇತ್ರದ ಶಾಸಕರು, ಮಾಜಿ ಗೃಹಸಚಿವರು ಇಂತಹ ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುತ್ತಿಲ್ಲ. ಪ್ರಶ್ನೆಯೂ ಮಾಡುತ್ತಿಲ್ಲ. ಅಧಿಕಾರಿಗಳ ಇಂತಹ ವರ್ತನೆ ವಿರುದ್ಧ ಪತ್ರ ಬರೆದು ಸರ್ಕಾರದ ಗಮನಕ್ಕೆ ತರುತ್ತಿಲ್ಲ. ಕ್ಷೇತ್ರದ ಪರಿಸ್ಥಿತಿ ಹೀಗಿದೆ ಎಂದು ಗೊತ್ತಾಗುತ್ತಿದ್ದಂತೆ ಕ್ಷೇತ್ರ ಪ್ರತಿನಿಧಿಸಿದ್ದ ಮಾಜಿ ಮುಖ್ಯಮಂತ್ರಿಯ ತವರೂರಿನ ಯುವಕ ಅತಿ ಸುಲಭವಾಗಿ ಕಿಡ್ನಾಪ್‌ ಆಗಿದ್ದು ಜೀವ ಭಯದಲ್ಲಿ ನರಳುತ್ತಿರುವ ಯುವಕನಿಗೆ ಮಾಜಿ ಗೃಹಸಚಿವರು ರಕ್ಷಣೆ ನೀಡುವರೇ ಎಂಬ ಪ್ರಶ್ನೆ ಸಾರ್ವಜನಿಕವಾಗಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post