ಬರ್ಕಣ ಫಾಲ್ಸ್, ಜೋಗಿಗುಂಡಿ ಪ್ರವಾಸಿಗರಿಗೆ ಅನುಕೂಲ
ಆಗುಂಬೆ ಸಮೀಪದ ಮಲ್ಲಂದೂರು ಗ್ರಾಮದ ಬಳಿಯ ಬರ್ಕಣ ಫಾಲ್ಸ್ ಹಾಗೂ ಜೋಗಿಗುಂಡಿ ಕಡೆಗೆ ತೆರಳುವ ರಸ್ತೆಯಲ್ಲಿ ದೊಡ್ಡ ಹೊಂಡಗಳು ಉಂಟಾಗಿ, ರಸ್ತೆ ಸಂಚಾರಕ್ಕೆ ತುಂಬಾ ಅನಾನುಕೂಲವಾಗಿತ್ತು.
ಪ್ರಕೃತಿ ಸೌಂದರ್ಯವನ್ನು ಸವಿಯಲು ದೂರದ ಊರುಗಳಿಂದ ಬರುವ ಪ್ರವಾಸಿಗರಿಗೆ ಈ ರಸ್ತೆಯ ಸ್ಥಿತಿ ತೊಂದರೆ ಮಾತ್ರವಲ್ಲದೆ, ವಾಹನ ಸವಾರರಿಗೆ ಅಪಾಯಕಾರಿಯಾಗುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.
ಈ ಸಮಸ್ಯೆಯನ್ನು ಗಮನಿಸಿದ ಮಲ್ಲಂದೂರಿನ ಯುವಕರಾದ ಮಿಲನ್, ಅಭಿಷೇಕ್, ಅಶ್ವಥ್ ಹಾಗೂ ಅವಿನ್ ಸ್ವಯಂ ಪ್ರೇರಿತರಾಗಿ ಸೇರಿ, ಹೊಂಡಗಳಿಗೆ ಕಲ್ಲುಗಳನ್ನು ಹಾಕಿ ರಸ್ತೆಯನ್ನು ತಾತ್ಕಾಲಿಕವಾಗಿ ಓಡಾಡಲು ಅನುಕೂಲವಾಗುವಂತೆ ಮಾಡಿದ್ದಾರೆ.
ಮಳೆಗಾಲದಲ್ಲಿ ಈ ರಸ್ತೆಯ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು ಗುಂಡಿಯಲ್ಲಿ ನೀರು ತುಂಬಿದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ರಸ್ತೆ ನಿರ್ಮಿಸಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕಿದೆ.