ಸೌಹಾರ್ದ ಕಾಯ್ದೆ ತಿದ್ದುಪಡಿ ಸಹಕಾರಿ ವ್ಯವಸ್ಥೆಗೆ ಮಾರಕ

ವರ್ತಕರ ಸೌಹರ್ದ ಸಹಕಾರಿ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ
ಹಿರಿಯ ನಾಗರೀಕರು-ನಿವೃತ್ತ ಸೈನಿಕರಿಗೆ ಕಡಿಮೆ ಬಡ್ಡಿಯಲ್ಲಿ ಬಂಗಾರದ ಸಾಲ
ಸೃಜನಾತ್ಮಕ ಪ್ರಶ್ನೆಗಳೊಂದಿಗೆ ಗಮನ ಸೆಳೆದ ನಿಲೇಶ್‌ ಜವಳಿ

ಠೇವಣಿಗೆ ಸಂಬಂಧಿಸಿದಂತೆ ಸೌಹಾರ್ದ ಕಾಯ್ದೆ ತಿದ್ದುಪಡಿ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಸಹಕಾರಿ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ. ಸೌಹಾರ್ದ ಸಹಕಾರಿಗೆ ಕಾನೂನು ಬದ್ಧವಾಗಿ ನೀಡಿರುವ ಆಯ್ಕೆಯ ಸ್ವಾತಂತ್ರ ಇಲ್ಲವಾಗುತ್ತದೆ. ಠೇವಣಿಯನ್ನು ಸರ್ಕಾರ ಸೂಚಿಸಿದ ಬ್ಯಾಂಕುಗಳಲ್ಲಿ ಇಡಬೇಕೆಂಬ ನಿಯಮ ಜಾರಿಗೊಳ್ಳುವ ಆತಂಕ ಎದುರಾಗಿದೆ ಶನಿವಾರ ತೀರ್ಥಹಳ್ಳಿಯ ವಿದ್ಯಾಧಿರಾಜ ಸಭಾ ಭವನದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ತಾಲ್ಲೂಕು ವರ್ತಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಡಾನ್‌ ರಾಮಣ್ಣ ಹೇಳಿದರು.

ಹಾಲಿ ಬಡ್ಡಿದರಕ್ಕಿಂತಲೂ ಕಡಿಮೆ ಬಡ್ಡಿದರ ಗ್ರಾಹಕರಿಗೆ ನೀಡಬೇಕಾದ ಅನಿವಾರ್ಯ ನಿರ್ಮಾಣವಾಗುತ್ತದೆ. ಸಹಕಾರಿ ವ್ಯವಸ್ಥೆಯ ಲಾಭ ತಲುಪದೆ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಲು ಕಷ್ಟವಾಗುತ್ತದೆ. ತೀರ್ಥಹಳ್ಳಿಯಲ್ಲಿ ಸಹಕಾರಿ ಸಂಸ್ಥೆಗಳ ನಡುವೆ ತೀವ್ರ ಸ್ಪರ್ಧೆ ಇದೆ. ಹಾಗಿದ್ದಾಗಲೂ ವರ್ತಕರ ಸೌಹಾರ್ದ ಸಹಕಾರಿ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಸ್ವಂತ ನಿವೇಶವನ್ನು ಹೊಂದಲಾಗಿದ್ದು ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ಹಿರಿಯ ನಾಗರೀಕರು ಮತ್ತು ಸೈನಿಕರಿಗೆ ಕಡಿಮೆ ಬಡ್ಡಿದರದಲ್ಲಿ ಬಂಗಾರ ಅಡಮಾನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಜಮೀನು ಅಡಮಾನ ಸಾಲ ನೀಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದರು.




ಪ್ರಶ್ನೋತ್ತರ ವೇಳೆಯಲ್ಲಿ ಕಲಾವಿದ ನಿಲೇಶ್‌ ಜವಳಿ ಸೃಜನಾತ್ಮಕ ಪ್ರಶ್ನೆಗಳೊಂದಿಗೆ ಗಮನ ಸೆಳೆದರು. ವರ್ತಕರ ಸೌಹಾರ್ದ ಸಂಘದಲ್ಲಿ ಬೇರೆ ಸಂಘಗಳಿಗಿಂತಲೂ ಹೆಚ್ಚಿನ ಪರಿಶ್ರಮವನ್ನು ಸಿಬ್ಬಂದಿ ವಿನಿಯೋಗಿಸುತ್ತಿದ್ದಾರೆ. ಹಾಗಾಗಿ ಲಾಭಾಂಶವನ್ನು ಕಡಿಮೆ ಘೋಷಣೆ ಮಾಡಿ ಅದರಲ್ಲಿ ಉಳಿದ ಹಣದಲ್ಲಿ ಸಿಬ್ಬಂದಿಯ ವೇತನವನ್ನು ಏರಿಸಬೇಕೆಂಬ ಸಲಹೆ ಸಭೆಯ ಗಮನ ಸೆಳೆಯಿತು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ರಾಮಣ್ಣ ಸಿಬ್ಬಂದಿಗೆ ನಿಯಮಿತವಾಗಿ ಬೋನಸ್‌ ನೀಡಲಾಗುತ್ತಿದೆ ಎಂದರು.

ನಿರ್ದೇಶಕರಾದ ರಾಘವೇಂದ್ರ ಮಲ್ಯ, ಯುವರಾಜ್‌, ಬಳಗಟ್ಟೆ ಗಿರೀಶ್‌, ಕೋಣಂದೂರು ಅಶೋಕ್‌, ಸೊಪ್ಪುಗುಡ್ಡೆ ರಾಘವೇಂದ್ರ, ಮಹಮ್ಮದ್‌ ಶಫಿ, ಚೈತನ್ಯ ಜವಳಿ, ನಾಗರಾಜ್‌, ಸಹನಾ ಭಟ್‌, ಸಿಇಓ ರೂಪಾರಾವ್‌ ಮತ್ತಿತರಿದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post