ಅದೃಷ್ಟವಂತ ಆರಗ ಜ್ಞಾನೇಂದ್ರ

ಗೃಹಸಚಿವರಿಗೆ ತಲೆ ಸರಿ ಇಲ್ವಾ...
ಪೊಲೀಸರಿಗೆ ವಿವೇಚನಾ ಶಕ್ತಿ ಇಲ್ಲ ಯಾಕೆ...
ಡಿವೈಎಸ್ಪಿ ಕಚೇರಿ ಎದುರು ಮುಂದುವರೆದ ಕಿಮ್ಮನೆ ಪ್ರತಿಭಟನೆ
ಠಾಣೆ ಮುಂಭಾಗ ಅಹೋರಾತ್ರಿ ಹೋರಾಟ
ಪ್ಲೀಸ್ ಸಾರ್ ನೀವು ರೆಸ್ಟ್ ತಗೊಳ್ಳಿ -ಡಿವೈಎಸ್ಪಿಗೆ ಕಿಮ್ಮನೆ ಸಲಹೆ

ನಾನು ರಾಜಕೀಯವನ್ನು‌ ಪವರ್, ದುಡಿಮೆ, ದುಡ್ಡಿಗಾಗಿ ಆಯ್ಕೆ ಮಾಡಿಕೊಂಡಿಲ್ಲ. ಎಫ್ಐಆರ್ ನಲ್ಲಿ ದಾಖಲಾದ ಮೂವರು ಕಾಂಗ್ರೆಸ್ ಕಾರ್ಯಕರ್ತರು ಸ್ಪಾಟ್ ನಲ್ಲಿ ಇದ್ದರೆ ನಾನು ಮುಂದಿನ ಚುನಾವಣೆಗೆ ಕಂಟೆಸ್ಟ್ ಮಾಡಲ್ಲ. ದುರುದ್ದೇಶ ಪೂರಕವಾಗಿ ಪ್ರಕರಣದಲ್ಲಿ ಭಾಗಿಯಾಗದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ. ಸಿಸಿಟಿವಿ ಪ್ಯೂಟೇಜ್ ಚೆಕ್ ಮಾಡಿ ಹೇಳಿ. ತನಿಖೆ ಮಾಡದೆ ನಿರಪರಾಧಿಗಳ ಮೇಲೆ ಪ್ರಕರಣ ದಾಖಲಿಸುವ ಉದ್ದೇಶ ಏನಿತ್ತು. ಒಬ್ಬರು ಶುಕ್ರವಾರ ವಿದೇಶಕ್ಕೆ ದುಡಿಮೆಗಾಗಿ ತೆರಳುತ್ತಿದ್ದು ಪ್ರಕರಣ ರಾಜಿ ಮಾಡಿಸುವ ಸಲುವಾಗಿ ತಿರುಚಲಾಗಿದೆ. 'ಬಿ' ರಿಪೋರ್ಟ್ ಹಾಕುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ತೀರ್ಥಹಳ್ಳಿ ಡಿವೈಎಸ್ಪಿ ಕಚೇರಿ ಮುಂಭಾಗ ಅಹೋರಾತ್ರಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಗೋಗರೆದ ಡಿವೈಎಸ್ಪಿ
ಪ್ಲೀಸ್ ಸಾರ್ ಆಫೀಸ್ ಗೆ ಬನ್ನಿ. ನೀವು ಮೊದಲ ಭಾರಿ ಇಲ್ಲಿಗೆ ಬಂದಿದ್ದೀರಾ. ನನ್ನ ಕಚೇರಿಗೆ ಬಂದಿಲ್ಲ. ಪರ್ಸನಲ್ ಇಂಟ್ರಸ್ಟ್ ತೆಗೆದುಕೊಂಡು ಪ್ರಕರಣ ಇತ್ಯರ್ಥ ಮಾಡುತ್ತೇನೆ. ಆರೋಪಿಗಳು ಅಲ್ಲದವರಿಗೆ 'ಬಿ' ರಿಪೋರ್ಟ್ ನೀಡುತ್ತೇನೆ ಎಂದು ಪುಸಲಾಯಿಸಿ ಗೋಗರೆದರು. ಅದನ್ನು ನಯವಾಗಿ, ನಾಜೂಕಿನಿಂದ ಅಲ್ಲಗಳೆದು ನೀವು ಮಾಡಿದೆಲ್ಲ ಸಾಕು. ಪರವಾಗಿಲ್ಲ ನೀವು ರೆಸ್ಟ್ ತೆಗೆದುಕೊಳ್ಳಿ ನಾನು 'ಬಿ' ರಿಪೋರ್ಟ್ ನೀಡುವ ವರೆಗೆ ಮನೆಗೆ ಹೋಗಲ್ಲ ಎಂದು ಪಟ್ಟು ಹಿಡಿದರು.

ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಬ್ಬ ಅದೃಷ್ಟವಂತ ರಾಜಕಾರಣಿ ಇದ್ದರೆ ಅದು ಆರಗ ಜ್ಞಾನೇಂದ್ರ ಮಾತ್ರ. ಕುದೊಡ್ಡಿಗೆ ಜಾನುವಾರು ರೀತಿ ಅವರು ಏನು ಮಾಡುವುದು ಬೇಡ. ಊರೆಲ್ಲ ಅಲೆದಾಡಿ ಮೆಂದು, ಮೈಯಾಳು ಮಾಡಿ ಬಂದರೆ ಸಾಕು. ಬಿಜೆಪಿ ಪಕ್ಷ ಕಾರು, ಜೀಪು, ಮನೆ, ಆಸ್ತಿ ಕೊಟ್ಟು ಸಂತೈಸುತ್ತೆ. 1987 ರಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ನಿರಂತರ ಅಧಿಕಾರ ಅನುಭವಿಸಿದ್ದಾರೆ. 15 ವರ್ಷ ಶಾಸಕರಾಗಿದ್ದರು ತೀರ್ಥಹಳ್ಳಿಯ ಮೂಲೆ ಮೂಲೆಗೆ ರಸ್ತೆ ಮಾಡಲು ಆಗಿರಲಿಲ್ಲ. ಅಧಿಕಾರ, ಹಣ ಅನುಭವಿಸಿಯೂ ಬಡವ ಎನ್ನುವ ಸೋಗು ಬಿಡಲಿಲ್ಲ. ನಾನು ಶಾಸಕನಾದ ನಂತರ ರಸ್ತೆಗಳನ್ನು ನಿರ್ಮಾಣ ಮಾಡಿದ್ದೇನೆ.‌ ಈಗ ಅವುಗಳನ್ನೇ ತೋರಿಸಿ ಅಭಿವೃದ್ದಿ ಎನ್ನುತ್ತಿದ್ದಾರೆ ಎಂದು ಕಿಮ್ಮನೆ ದೂರಿದರು.

ಕಳೆದ ವರಮಹಾಲಕ್ಷೀ ವ್ರತದ ಸಂದರ್ಭ 5000 ಮಹಿಳೆಯರಿಗೆ ಕೊಟ್ಟ ಬೆಳ್ಳಿ ನಾಣ್ಯದ ಮೂಲ ಯಾವುದು. ಪಿಂಪ್ ಸ್ಯಾಂಟ್ರೊ ರವಿಯಿಂದ ವರ್ಗಾವಣೆ ದಂಧೆಗಾಗಿ ತೆಗೆದುಕೊಂಡ ಹಣವಿರುವ ಸಾಧ್ಯತೆ ಇದೆ. ಗೃಹಸಚಿವರ ಪ್ರಭಾವದಿಂದ ಪೊಲೀಸರು ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. “ಎಸ್‌ಪಿ, ಡಿವೈಎಸ್‌ಪಿ ಬಿಟ್ಟು ಯಾವನೇ ಬರಲಿ. ಆಡಳಿತದಲ್ಲಿ ನ್ಯಾಯ ಬೇಡ್ವ. ಪೊಲೀಸರಿಗೆ ತೀರ್ಥಹಳ್ಳಿಯಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿಲ್ಲವೆ. ಅಧಿಕಾರಿಗಳು ಹೊಟ್ಟೆಗೆ ತಿನ್ನಲ್ವ. ಆರಗ ಜ್ಞಾನೇಂದ್ರರಂತ ಕೆಟ್ಟ ವ್ಯಕ್ತಿ ಯಾರು ಇಲ್ಲ. ಅವರಿಗೆ ತಲೆ ಸರಿ ಇಲ್ವಾ. ಪೊಲೀಸರಿಗೆ ವಿವೇಚನಾ ಶಕ್ತಿ ಇಲ್ಲವೆ” ಎಂದು ಕಿಡಿಕಾರಿದರು.

ತೀರ್ಥಹಳ್ಳಿಯಲ್ಲಿ ಗಲಾಟೆ, ದೊಂಬಿ, ಅಕ್ರಮ ವಹಿವಾಟು ನಡೆಯದಂತೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಗಳನ್ನು ರಾತ್ರಿ ಪೊಲೀಸರೇ ಬಂದ್‌ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಭಾಗಿಯಾಗಿರುವ ಅಕ್ರಮ ದಂಧೆ, ಮರಳು ಮಾಫಿಯಾ ಮುಚ್ಚಲು ಗೃಹಸಚಿವರು ಅಧಿಕಾರದ ಬಲ ಪ್ರಯೋಗಕ್ಕೆ ಇಳಿದಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಿಮ್ಮನೆ ಮನೆ ಮೇಲೆ ಇಡಿ ರೈಡು ಅಂತ ಗುಲ್ಲೆಬ್ಬಿಸುತ್ತಾರೆ.‌ ಶಾಸಕರ ಲೆಟರ್ ಪಡೆಯಲು ಯಾರಾದರು ತೆಗೆದುಕೊಂಡು ಹೋದರೆ ಇವನು ನಮ್ಮವನಾ ಅಥವಾ ಬೇರೆಯವನ ಅಂತ ಪಕ್ಷದ ಅಧ್ಯಕ್ಷರಿಗೆ ಫೋನ್ ಹಾಯಿಸ್ತಾರೆ. ಮಕ್ಕಳ ಹಾಸ್ಟೆಲ್ ಸೀಟು ಕೊಡುವುದಕ್ಕು ಪಕ್ಷ ಭೇದ ತೋರುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ಮಂಗಳವಾರ ರಾತ್ರಿ ಹೋಟೆಲ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ನಡುವಿನ ಹಲ್ಲೆ ವಿವಾದ ಸೃಷ್ಟಿಸಿದ್ದು ಗಂಭೀರ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಮಧ್ಯೆ ಗಲಾಟೆಯಲ್ಲಿ ಪಾಲ್ಗೊಳ್ಳದ ಮೂವರ ಮೇಲೆ ಪ್ರಕರಣ ದಾಖಲಿಸಿದ್ದು ಪ್ರತಿಭಟನೆಗೆ ಮುಖ್ಯ ಕಾರಣ. ಒಟ್ಟು ಬಿಜೆಪಿಯ 3, ಕಾಂಗ್ರೆಸ್ ನ 5 ಜನರ ಮೇಲೆ ಎಫ್ಐಆರ್ ದಾಖಲಾಗಿದೆ.

ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ‌ ಶೆಟ್ಟಿ, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಸದಸ್ಯರಾದ ನಮ್ರತ್‌, ಗೀತಾ, ರಾಷ್ಟ್ರೀಯ ಯುವ ಕಾಂಗ್ರೆಸ್‌ ವಕ್ತಾರ ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್‌ ಕೆಳಕೆರೆ, ಮುಖಂಡರಾದ ಅಮ್ರಪಾಲಿ ಸುರೇಶ್, ಪಣಿರಾಜ್‌, ಪ್ರಶಾಂತ್‌, ಅಶ್ವಲ್‌ ಇದ್ದರು.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post