ಬ್ರಿಟೀಷರಿಗೆ ಚಪರಾಸಿ ಕೆಲಸ ಮಾಡಿದ್ದೇ ಬಿಜೆಪಿ

ಕೇಸರಿಗೂ ಬಿಜೆಪಿಗೂ ಸಂಬಂಧ ಇಲ್ಲ

ಕೇಸರಿ ತ್ಯಾಗದ ಸಂಕೇತ – ಡಿಕೆಶಿ

ಪೊಲೀಸರನ್ನು ನಾಯಿಗಳೆಂದು ಕರೆದ ಮೊದಲ ಗೃಹಮಂತ್ರಿ ಆರಗ ಜ್ಞಾನೇಂದ್ರ

ಗಾಂಧೀಜಿ ಪ್ರತಿಪಾಧಿಸಿದ ಹಿಂದೂ ಧರ್ಮ ಭಾರತಕ್ಕೆ ಸೇರಿದೆ

ನಾತೂರಾಂ ಗೋಡ್ಸೆಯ ಹಿಂದುತ್ವ ಬಿಜೆಪಿಯದ್ದು…!

ಸಂಘಪರಿವಾರದ ಎಷ್ಟು ಜನ ಸ್ವಾತಂತ್ರಕ್ಕೆ ಪ್ರಾಣ ತ್ಯಾಗ ಮಾಡಿದ್ದಾರೆ. -ಬಿ.ಕೆ. ಹರಿಪ್ರಸಾದ್

ಎಂಪಿಎಂನಲ್ಲಿ 400 ಕೋಟಿ ಮುಳುಗಿಸಿದ ಆರಗ ಜ್ಞಾನೇಂದ್ರ-‌ ಸಂಗಮೇಶ್

ಕಾಂಗ್ರೆಸ್‌ ಪಕ್ಷದ ಸಭೆ ಎಂದರೆ ಅಲ್ಲಿ ಅಶಿಸ್ತು, ಗೊಂದಲ ನೂಕಾಟ, ತಳ್ಳಾಟ ಇರಲೇಬೇಕು. ಈ ಸಭೆಯಲ್ಲೂ ಹಾಗೆ ಆಯಿತು. 5 ಸಾವಿರಕ್ಕೂ ಮಿಕ್ಕಿದ ಜನಸ್ಥೋಮದ ಎದುರು ಹಾಕಲಾಗಿದ್ದ ವೇದಿಕೆಯಲ್ಲಿ ಕುಳಿತುಕೊಳ್ಳು ಹಿರಿಯರಿಂದ ಹಿಡಿದು ಮರಿ ಪುಡಾರಿಯವರ ವರೆಗೆ ಪೈಪೋಟಿಯೇ ನಡೆದಿತ್ತು. ಕಡೆಗೆ ಜಿಲ್ಲಾಧ್ಯಕ್ಷ ಸುಂದರೇಶ್‌ ಅಕ್ಷರಶಃ ಎಲ್ಲರನ್ನು ಗದರಿಸಿ ಹಿಂದಕ್ಕೆ ಅಟ್ಟಬೇಕಾಯಿತು.

ಕೇಂದ್ರ, ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಹಮ್ಮಿಕೊಂಡಿದ್ದ ಜನದನಿ ಬೃಹತ್‌ ಪ್ರತಿಭಟನೆ ಉದ್ದೇಶಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಕೇಸರಿಗೂ ಬಿಜೆಪಿಗೂ ಸಂಬಂಧ ಇಲ್ಲ. ಕೇಸರಿ ತ್ಯಾಗದ ಸಂಕೇತ ಅದರ ಬದಲು ಸದಾಕಾಲ ರಕ್ತಕ್ಕಾಗಿ ಹಪಹಪಿಸುವ ಬಿಜೆಪಿ ಕೆಂಪು ಶಾಲು ತೊಡುವುದು ಉತ್ತಮ. ಕಮಲ ಹುಟ್ಟುವುದೇ ಕೆಸರಲ್ಲಿ ಒಳ್ಳೆಯ ನೀರಲ್ಲಿ ಅದು ಬೆಳೆಯುವುದಿಲ್ಲ. ಬಿಜೆಪಿ ಕೂಡ ಇಡೀ ದೇಶವನ್ನೇ ರಾಡಿ ಎಬ್ಬಿಸಿ ಜನತೆಯ ಸಂಕಷ್ಟಕ್ಕೆ ಬೆಲೆಯೇ ನೀಡದೆ ತಾನು ಮಾತ್ರ ಬೆಳೆಯುವಂತಿದೆ.

ಈಶ್ವರಪ್ಪ ರಾಜೀನಾಮೆ ನೀಡಿದರೆ ಸಾಲುದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಒದ್ದು ಜೈಲಿಗೆ ಹಾಕಬೇಕು. ನಾನು ಇಂಧನ ಸಚಿವನಾಗಿದ್ದಾಗ 30 ಸಾವಿರ ನೇಮಕಾತಿ ಮಾಡಿದ್ದೆ. ಯಾರಾದರು ಒಂದು ಪೈಸೆ ಲಂಚ ನೀಡಿದ್ದಾರೆ ಎಂದು ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತನಾಗುವೆ. ಮುಖ್ಯಂತ್ರಿಯಿಂದ ಜವಾನನ ತನಕ ಹಣಕ್ಕೆ ಹರಾಜಾಗುವ ಪರಿಸ್ಥಿತಿ ಬಿಜೆಪಿಯಲ್ಲಿದೆ. ಬಿಜೆಪಿಯ ಬಸವನಗೌಡ ಪಾಟೀಲ ಯತ್ನಾಳ್‌ ಅವರೇ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ಕೊಡಬೇಕು ಎಂದಿದ್ದಾರೆ. ಇದು ಸುಳ್ಳಾಗಿದ್ದರೆ ಯತ್ನಾಳ್‌ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ.

ಇಡೀ ದೇಶದಲ್ಲಿ ಅಪರೇಷನ್‌ ಕಮಲ, ಪರ್ಸೆಂಟೇಜ್‌ ರಾಜಕಾರಣ, ಗೆದ್ದ ಪಕ್ಷದವರನ್ನು ಆಮಿಷ ಒಡ್ಡಿ ಕರೆದುಕೊಳ್ಳುವ ಸಂಸ್ಕೃತಿ ಹಬ್ಬಿಸಿದ್ದೇ ಬಿಜೆಪಿ. ಬ್ರಿಟೀಷರಿಗೆ ಚಪರಾಸಿ ಕೆಲಸ ಮಾಡಿಕೊಂಡಿದ್ದ ಬಿಜೆಪಿಯಿಂದ ಯಾರು ದೇಶ ಭಕ್ತಿಯ ಪಾಠ ಕಲಿಯಬೇಕಿಲ್ಲ. ಬಿಜೆಪಿಯ ಎಷ್ಟು ಜನ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು ಹುತಾತ್ಮರಾಗಿದ್ದಾರೆ. ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ ಎಂಬುದನ್ನು ಮೊದಲು ಹೇಳಲಿ. ಆಗಸ್ಟ್ 9ಕ್ಕೆ ಕಾಗೋಡು ಮಾದರಿ ಹೋರಾಟ ಕಾಗೋಡಿನಲ್ಲಿ ಆರಂಭಕ್ಕೆ ಸಿದ್ದತೆ‌ ನಡೆಸಲಾಗಿದೆ ಎಂದು ತಿಳಿಸಿದರು.

ಕಾರ್ಯಾಧ್ಯಕ್ಷ ದೃವ ನಾರಾಯಣ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಇತಿಹಾಸದಲ್ಲಿ ಕಂಡು ಕೇಳರಿಯದ ಭ್ರಷ್ಟ ಹಾಗೂ ದುಷ್ಟ ಸರ್ಕಾರವಾಗಿದೆ. ಆಡಳಿತ ವೈಫಲ್ಯ ಮರೆಮಾಚಲು ಸದಾ ಕೋಮು ದಳ್ಳೂರಿ ಹಬ್ಬಿಸುವುದೇ ಇವರ ಕೆಲಸ ಎಂದು ಹೇಳಿದರು.

ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಇದು 40% ಕಮಿಷನ್‌ ಸರ್ಕಾರ. ಈ ಸರ್ಕಾರಕ್ಕೆ ಬಡವರು ರೈತರು ಮಹಿಳೆಯರು ಕಾರ್ಮಿಕ ಕುರಿತು ಆಲೋಚನೆ ಮಾಡಲು ಪುರುಸೋತಿಲ್ಲ. ಇವರಿಗೆ ಹಿಂದುತ್ವ ಮತ್ತು ಹಿಂದೂ ಧರ್ಮದ ಬಗ್ಗೆ ವ್ಯತ್ಯಾಸವೇ ಗೊತ್ತಿಲ್ಲ. ಗಾಂಧೀಜಿ ಪ್ರತಿಪಾಧಿಸಿದ ಹಿಂದೂ ಧರ್ಮ ರಾಷ್ಟ್ರದ ಜನತೆಗೆ ಸೇರಿದ್ದು. ನಾತೂರಾಂ ಗೋಡ್ಸೆ ಪ್ರತಿಪಾದಿಸಿದ ಹಿಂದುತ್ವ ಅದರ ಉದ್ದೇಶ ಕೇವಲ ಹಿಂಸೆ ಮತ್ತು ದ್ವೇಶ ಸಾಧನೆ ಮಾತ್ರ.

ಆರಗ ಜ್ಞಾನೇಂದ್ರ ಸಂಪೂರ್ಣ ವಿಫಲ ಗೃಹಮಂತ್ರಿ. ಕರ್ನಾಟಕದ ಇತಿಹಾಸದಲ್ಲೇ ತನ್ನ ಇಲಾಖೆಯ ಅಡಿಯಲ್ಲೇ ಬರುವ ಪೊಲೀಸರನ್ನು ನಾಯಿಗಳನ್ನು ಕರೆದ ಮತ್ತೊಬ್ಬ ಗೃಹಮಂತ್ರಿ ಇರಲಿಲ್ಲ. ಹಾಗೆ ಕರೆದು ಜನರೆದುರು ಪೊಲೀಸರನ್ನು ನಗೆಪಾಟಲಿಗೀಡುಮಾಡಿದ್ದಾರೆ.

ಆರಗ ಜ್ಞಾನೇಂದ್ರ ಕಾಲದಲ್ಲಿ ಪೊಲೀಸ್‌ ಇಲಾಖೆ ಕೆಲಸಗಳು ಅಕ್ಷರಶಃ ಹರಾಜಾಗಿದೆ. ಉಪ್ಪಾರಪೇಟೆ, ಸಿಟಿ ಮಾರ್ಕೆಟ್‌, ಕೋರಮಂಗಲದಂತಹ ಪೊಲೀಸ್‌ ಠಾಣೆಯ, ಸರ್ಕಲ್‌, ಸಬ್‌ ಇನ್ಸ್ ಪೆಕ್ಟರ್‌ ಹುದ್ದೆಗಳು ಕೋಟಿಗಟ್ಟಲೇ ಲೆಕ್ಕದಲ್ಲಿ ಹರಾಜಾಗುತ್ತಿದೆ. ಈಡೀ ರಾಷ್ಟ್ರವನ್ನು ಕಟ್ಟಿದ್ದು ಕಾಂಗ್ರೆಸ್‌. ಬಿಜೆಪಿ ಒಂದೇ ಒಂದು ಡ್ಯಾಂ ಕೂಡ ಕಟ್ಟಿಲ್ಲ. ಎಷ್ಟು ಜನ ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದಿದ್ದಾರೆ.

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್‌ ಮಾತನಾಡಿ, ಆರಗ ಜ್ಞಾನೇಂದ್ರ ಎಂಪಿಎಂ ಅಧ್ಯಕ್ಷ ಆಗಿದ್ದಾಗ 400 ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆಸಿ ಆ ಸಂಸ್ಥೆ ಮುಚ್ಚುವಂತೆ ಮಾಡಿ ಕಾರ್ಮಿಕರನ್ನು ಬೀದಿಪಾಲು ಮಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಆ ಕಾರ್ಮಿಕರ ನೆರವಿಗೆ ನಿಂತರು ಎಂದು ಹೇಳಿದರು.

 ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಅವರ ಪಾದಯಾತ್ರೆ ಇಂದು ಭಾರೀ ಹುಮ್ಮಸ್ಸಿನಿಂದಲೇ ಶಿವಮೊಗ್ಗದ ಹರಕೆರೆಯಿಂದ ಆರಂಭಗೊಂಡಿತು. ನಿರೀಕ್ಷೆಗೂ ಮೀರಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಸಮಯಾಭಾವ ಮತ್ತು ಡಿಕೆಶಿ ಅವರ ಅನಾರೋಗ್ಯದ ಕಾರಣ ಮುಂಚಿತವಾಗಿ ಭಾಷಣ ಮುಗಿಸಿ ಹೊರಟ ಕಾರಣ ಕಿಮ್ಮನೆ ಭಾಷಣಕ್ಕೆ ಅವಕಾಶ ಇಲ್ಲದಂತಾಯಿತು. ಕಡೆಗೆ ನಿರೂಪಕ ಒಂದೆರಡು ನಿಮಿಷಗಳ ಕಾಲ ಅವರಿಗೆ ಭಾಷಣಕ್ಕೆ ಅವಕಾಶ ನೀಡಿದರು. ಅದರಲ್ಲಿ ಹೆಚ್ಚೇನು ಮಾತನಾಡದ ಕಿಮ್ಮನೆ ಕಾಂಗ್ರೆಸ್‌ ಪಕ್ಷಕ್ಕೆ ಜಿಂದಾಬಾದ್‌, ಡಿಕೆ ಶಿವಕುಮಾರ್‌ ಗೆ ಜಿಂದಾಬಾದ್‌ ಎಂದಷ್ಟೇ ಹೇಳಿ ಭಾಷಣ ಮುಗಿಸಿದರು.
ಆದರೆ ಧೃವನಾರಾಯಣ್‌, ಬಿ.ಕೆ. ಹರಿಪ್ರಸಾದ್‌ ತಮ್ಮ ಭಾಷಣದಲ್ಲಿ ಪಟಮಕ್ಕಿ ರತ್ನಾಕರ್‌ ಎಂದು ಅವರ ಹೆಸರನ್ನು ತಪ್ಪಾಗಿ ಕರೆಯುವ ಮೂಲಕವಾದರೂ ಸ್ಮರಿಸಿದರು.

ಎಲ್ಲದರ ನಡುವೆ ಸುಮಾರು 70 ಕಿಲೋ ಮೀಟರ್‌ ಪಾದಯಾತ್ರೆ ಹೋರಾಟ ನಡೆಸಿ ಪ್ರತಿಭಟನಾ ಸಭೆಗೆ ಅರ್ಧದಷ್ಟು ಜನರನ್ನು ಸೆಳೆದ ಕಿಮ್ಮನೆ ರತ್ನಾಕರ್‌ ಅವರಿಗೆ ಭಾಷಣಕ್ಕೆ ಅವಕಾಶ ನೀಡದಿರುವುದರಿಂದ ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿ ಮುಂಭಾಗ ಮುಖಂಡರ ಧೋರಣೆ ಖಂಡಿಸಿ ಭಾರೀ ಘೋಷಣೆ ಕೂಗಿದರು.

ಕಾರ್ಯಕರ್ತರು ಟಿ.ವಿ. ಮಾಧ್ಯಮದ ಜೊತೆ ಜಟಾಪಟಿ

ವೇದಿಕೆಯೆದುರು ಡಯಾಸ್‌ ಹಾಕಿಸಿ ಅದರ ಮೇಲೆ ಸಭೆಯ ಚಿತ್ರೀಕರಣ ಮಾಡಲು ದೃಶ್ಯ ಮಾಧ್ಯಮದವರಿಗೆ ನೀಡಲಾಗಿತ್ತು. ಅವ್ಯವಸ್ಥೆಯ ಆಗರವಾಗಿ ನಿಂತಿದ್ದ ಇದು ಸಭಿಕರ ಆಕ್ರೋಶಕ್ಕೆ ಗುರಿಯಾಯಿತು. ಸಭೆಯ ಉದ್ದಕ್ಕೂ ಹಿಂದೆ ಕುಳಿತವರಿಗೆ ಅಡ್ಡಲಾಗಿ ಚಿತ್ರೀಕರಣದಲ್ಲಿ ನಿರತರಾಗಿದ್ದ ಟಿ.ವಿ. ವರದಿಗಾರರನ್ನು ನೋಡಿ ಕಾರ್ಯಕರ್ತರು ಸಹನೆ ಕಳೆದುಕೊಂಡರು. ಜಗಳಕ್ಕಿಳಿದುಕೊಂಡರು. ಕೊನೆಗೆ ಬೇರೆ ದಾರಿಕಾಣದ ಟಿವಿಯವರು ಕೆಳಗೆ ಕುಳಿತು ಚಿತ್ರಿಕರಣ ಮಾಡಬೇಕಾಯಿತು.


ಹಿಂದೆ ನಿಂತವರನ್ನು ಓಡಿಸಿದ ಡಿಕೆಶಿ

ಡಿಕೆಶಿ ಭಾಷಣ ಮಾಡಲು ಮೈಕ್‌ ಹಿಡಿದಾಗ ಟಿ.ವಿಗಳಲ್ಲಿ ಕಾಣಿಸಿಕೊಳ್ಳುವ ಚಪಲದಿಂದ ಒಂದಿಷ್ಟು ಮಂದಿ ಅವರ ಹಿಂದೆ ಒತ್ತಿ ನಿಲ್ಲತೊಡಗಿದರು. ಕೋಪಗೊಂಡ ಡಿಕೆಶಿ ಇದೊಂದು ಸಲ ನನ್ನ ಮುಖ ಸರಿಯಾಗಿ ಕಾಣಲಿಕ್ಕೆ ಬಿಡ್ರೋ, ಹೋಗಿ ಹಿಂದೆ ಎಂದು ಗದರಿಸಿ ಹಿಂದೆ ಸರಿಸಿದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post