ವೃದ್ದಾಪ್ಯ, ವಿಧವಾ, ಅಂಗವಿಕಲ ವೇತನ ರದ್ದು

ಬಡವರ ಬಿಪಿಎಲ್‌ ಕಾರ್ಡ್‌ ರದ್ದು
ದಿವಾಳಿ ಎದ್ದಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ – ಪ್ರದೀಪ್‌ ಗಬಡಿ

ರಾಜ್ಯ ಸರ್ಕಾರ ದಿವಾಳಿ ಎದ್ದಿದ್ದು ಅಭಿವೃದ್ಧಿಗೆ ಹಣ ನೀಡದ ಸ್ಥಿತಿಗೆ ತಲುಪಿದೆ. ಆರ್ಥಿಕ ಮುಗ್ಗಟ್ಟಿನಿಂದ ಸರ್ಕಾರ ನಡೆಸಲು ಆಗದ ಹಿನ್ನಲೆಯಲ್ಲಿ ಈ ಹಿಂದೆ ವಿವಿಧ ಸರ್ಕಾರಗಳು ನೀಡಿದ ಜನಪರ ಯೋಜನೆಗಳನ್ನು ನಿಧಾನವಾಗಿ ನಿಲ್ಲಿಸುವ ಸಂಕು ರೂಪಿಸಿದೆ ಎಂದು ತೀರ್ಥಹಳ್ಳಿ ಯುವ ಮೋರ್ಚಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರದೀಪ್ ಗಬಡಿ ಆರೋಪಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸುವ ನೆಪದಲ್ಲಿ ಆದರ ಭಾಗವಾಗಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂದ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನಗಳನ್ನು ಈಗಾಗಲೇ ಮನ ಬಂದಂತೆ ತಾಲ್ಲೂಕಿನಾದ್ಯಂತ ಸಾವಿರಾರು ಫಲಾನುಭವಿಗಳ ಪಟ್ಟಿಗಳನ್ನು ರದ್ದು ಪಡಿಸಿದೆ. ಜೊತೆಗೆ ಆರೋಗ್ಯ, ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಸೃಷ್ಟಿಸಿಕೊಳ್ಳಲು ಬಡವರು ಮಾಡಿರುವ ಬ್ಯಾಂಕ್‌ ಸಾಲ ವರದಿಗಳನ್ನು ಪಡೆದು ಅವರ ಬಿಪಿಎಲ್‌ ಕಾರ್ಡುಗಳನ್ನು ರದ್ದು ಪಡಿಸಿದ್ದಾರೆ. ಬಡವರ ಸೌಲತ್ತುಗಳನ್ನು ಕಿತ್ತುಕೊಳ್ಳುವ ಮೂಲಕ ಅವರನ್ನು ಮತ್ತಷ್ಟು ಬಡತಕ್ಕೆ ತಳ್ಳುವ ಕೆಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರದ ಕೆಟ್ಟ ಚಾಳಿಯಿಂದಾಗಿ ತಾಲ್ಲೂಕಿನಾದ್ಯಂತ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಬಿಪಿಎಲ್‌ ಕಾರ್ಡು ಇಲ್ಲದೆ ಬಡ ಕುಟುಂಬಗಳು ಲಕ್ಷಾಂತರ ವೆಚ್ಚದ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ನಿತ್ಯ ಸಾವಿರಾರು ಕುಟುಂಬಗಳು ತಾಲ್ಲೂಕು ಕಚೇರಿ ಅಲೆದು ಕಾರ್ಡಿಗಾಗಿ ದುಂಬಾಲು ಬೀಳುತ್ತಿದ್ದರು ಆಡಳಿತರೂಡ ರಾಜ್ಯ ಸರ್ಕಾರ ಅವರ ಅಹವಾಲು ಸ್ವೀಕರಿಸದಷ್ಟು ಕುರುಡಾಗಿದೆ. ವಿಧವಾ ವೇತನ, ಅಂಗವಿಕಲ ವೇತನದಂತಹ ಅವಶ್ಯಕ ಸೇವೆ ಸಿಗದಿದ್ದರೆ ಈಗಾಗಲೇ ನೊಂದಿರುವ ಕುಟುಂಬಗಳು ಮತ್ತಷ್ಟು ತೊಳಲಾಟಕ್ಕೆ ಸಿಲುಕಲಿದ್ದಾರೆ. ಸರ್ಕಾರ ಬಡವರ ಭಾಗ್ಯಗಳನ್ನು ಕಿತ್ತುಕೊಳ್ಳುವ ದುಷ್ಟ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಪ್ರದೀಪ್‌ ಗಬಡಿ ಆಗ್ರಹಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post